ಮಂಗಳೂರು: ಕನ್ನಡದ ಹಲವು ಖ್ಯಾತ ನಟರ ಪತ್ನಿಯರು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್, ಪ್ರೇಮ್ ಪತ್ನಿ ರಕ್ಷಿತಾ ಪ್ರೇಮ್ ಈಗಾಗಲೇ ನಿರ್ಮಾಪಕಿಯಾಗಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಗಣೇಶ್ ಪತ್ನಿ ಶಿಲ್ಪಾ ಗಣೇಶ್. ಹೌದು, ಶಿಲ್ಪಾ ಈಗಾಗಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಇದೀಗ ‘ಗೋಲ್ಡನ್ ಮೂವೀಸ್’ ಸಂಸ್ಥೆಯ ಮೂಲಕ ನಿರ್ಮಾಪಕಿಯಾಗಿದ್ದಾರೆ. ಇತ್ತೀಚೆಗಷ್ಟೆ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಅವರು ನಿರ್ಮಿಸುತ್ತಿರುವ ಮೊದಲ ತುಳು ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದ್ದು, ನಟ ಗಣೇಶ್ ಚಾಲನೆ ನೀಡಿದ್ದಾರೆ. ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕ ರೋಹನ್ ಮೊಂತೆರೋ, ಮೇಯರ್ ಮನೋಜ್ ಕುಮಾರ್ ತಂಡಕ್ಕೆ ಶುಭಹಾರೈಸಿದರು.
‘ತುಳು ಒಂತೆ ಒಂತೆ ಅತ್ತ್ ಪೂರ ಬರ್ಪುಂಡ್; ಸೋಕು ಅರ್ತ ಆಪುಂಡು’ ಎಂದು ಮಾತು ಆರಂಭಿಸಿದ ಗಣೇಶ್, ‘ನನಗೂ ಮಂಗಳೂರಿಗೆ ಅವಿನಾಭಾವ ಸಂಬಂಧವಿದೆ. ನನ್ನ ಮೊದಲ ಚಿತ್ರಕ್ಕೆ ಮಂಗಳೂರಿನ ಜಗದೀಶ್ ಕೋಟ್ಯಾನ್ ನಿರ್ಮಾಪಕರಾಗಿದ್ದರು. ಸಂಗೀತ ನಿರ್ದೇಶಕರು ಮಂಗಳೂರಿನವರು. ನಾನು ಮದುವೆ ಆದದ್ದು ಮಂಗಳೂರಿನವರನ್ನು. ಹಾಗಾಗಿ ಮಂಗಳೂರಿಗೆ ಬರುವುದೆಂದರೆ ತುಂಬಾ ಖುಷಿಯಿದೆ. ಶಿಲ್ಪಾಗೆ ಮಾತೃಭಾಷೆ ತುಳುವಿನಲ್ಲಿ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ನನಗೂ ಕನಸಿತ್ತು. ನಮ್ಮಿಬ್ಬರ ಕನಸು ‘ಗೋಲ್ಡನ್ ಮೂವೀಸ್ ’ ಮೂಲಕ ಈಗ ನನಸಾಗುತ್ತಿದೆ. ತುಳುನಾಡಿನ ಕೌಟುಂಬಿಕ ಕಥೆಯಾಧಾರಿತ ಸಿನಿಮಾ ಇದಾಗಿದ್ದು, ನಿರೀಕ್ಷೆಗೂ ಮೀರಿ ಉತ್ತಮವಾಗಿ ಮೂಡಿಬರಲಿದೆ. ಚಿತ್ರದ ಬಹುತೇಕ ಶೂಟಿಂಗ್ ಕರಾವಳಿ ಭಾಗದಲ್ಲೇ ನಡೆಯಲಿದೆ. ನಾನೂ ಅತಿಥಿ ಪಾತ್ರದಲ್ಲಿದ್ದೇನೆ’ ಎಂದು ಖುಷಿ ಹಂಚಿಕೊಂಡರು. ಈ ಚಿತ್ರವನ್ನು ಸಂದೀಪ್ ಬೆದ್ರ ನಿರ್ದೇಶಿಸಲಿದ್ದು, ನಿತ್ಯ ಪ್ರಕಾಶ್ ಬಂಟ್ವಾಳ್ ನಾಯಕರಾಗಿದ್ದಾರೆ. ಚಿತ್ರಕ್ಕೆ ಟೈಟಲ್ ಇನ್ನಷ್ಟೇ ಅಂತಿಮವಾಗಬೇಕಿದೆ.