More

    ಗ್ಯಾರಂಟಿ ಜಾರಿಗೆ ಜನರಿಗೆ ತೆರಿಗೆ ಹೊರೆ

    ಚಿತ್ರದುರ್ಗ: ರಾಜ್ಯದ ಮಧ್ಯಮದ ವರ್ಗದವರ ಮೇಲೆ ಅಧಿಕ ತೆರಿಗೆ ವಿಧಿಸುವ ಮೂಲಕ ಗ್ಯಾರಂಟಿಗಳ ಜಾರಿಗೆ ಪ್ರಯತ್ನ ನಡೆಸಿದೆ ಎಂದು ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ ಮಾಡಿದರು.
    ನಗರದ ಭೋವಿ ಗುರುಪೀಠಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿ, ಗ್ಯಾರಂಟಿಗಳ ಅನುಷ್ಠಾನ ಕುರಿತು ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಸದಸ್ಯರನ್ನು ಗೊಂದಲಗಳು ಕಾಡಿದ್ದರೆ, ಅಧಿಕಾರಿಗಳನ್ನು ಚಿಂತೆಗೆ ಈಡು ಮಾಡಿವೆ ಎಂದರು.
    ಅಬಕಾರಿ ಹಾಗೂ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಹೆಚ್ಚಿಸಲು ಚಿಂತಿಸಿದೆ. ಮೊದಲ ಕ್ಯಾಬಿನೆಟ್ ಆದ ತಕ್ಷಣದಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ರಸ್ತೆಯಲ್ಲಿ ಹೋಗುವವರೆಲ್ಲರಿಗೂ ಗ್ಯಾರಂಟಿ ಕೊಡಲು ಆಗುತ್ತಾ ಎಂದು ಕೇಳಿದ್ದನ್ನು ನೋಡಿದರೆ, ಷರತ್ತುಗಳ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಿದರು.
    ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಜನರಲ್ಲಿರುವ ನಿರೀಕ್ಷೆಗಳು ಹುಸಿಯಾಗಬಾರದು. ಶುಕ್ರವಾರ ಸಂಪುಟ ಸಭೆ ಏನು ತೀರ್ಮಾನಿಸುವುದೋ ಎಂಬುದನ್ನು ಕಾದು ನೋಡೋಣ ಎಂದರು.
    75 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ದೇಶ, ರಾಜ್ಯದಲ್ಲಿ ಬಡವರು, ಬಡವರಾಗಿಯೇ ಉಳಿದಿದ್ದಾರೆ. ಯುವ ಜನರ ಪ್ರಗತಿ ಆಗಿಲ್ಲ. ಇವರು ಉತ್ತಮ ಆಡಳಿತವನ್ನು ನೀಡಿದ್ದರೇ ಗ್ಯಾರಂಟಿ ಕಾರ್ಡ್‌ಗಳನ್ನು ಜನರಿಗೆ ಹಂಚುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಹೇಳಿದರು.
    ಚುನಾವಣೆಯಲ್ಲಿ ಸೋಲು-ಗೆಲುವನ್ನು ಬಿಜೆಪಿ ಸಮಾನವಾಗಿ ಸ್ವೀಕರಿಸಿದೆ. ಅನೇಕ ವರ್ಷಗಳ ಕಾಲ ಪ್ರತಿಪಕ್ಷವಾಗಿ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಾ ಬಂದಿದೆ. ನಮ್ಮ ಪಕ್ಷಕ್ಕೆ ಆಗಿರುವ ಹಿನ್ನಡೆಯಿಂದ ಎದೆಗುಂದುವ ಪ್ರಶ್ನೆಯೇ ಉದ್ಭವಿಸದು ಎಂದರು.
    ನಮ್ಮೆಲ್ಲ ಹಾಲಿ-ಮಾಜಿ ಶಾಸಕರು ಹಾಗೂ ಸಂಘಟನೆ ಪ್ರಮುಖರು ಕಾರ‌್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಿದ್ದು, ಕಾಂಗ್ರೆಸ್ಸಿನ ಗೊಡ್ಡು ಬೆದರಿಕೆಗಳಿಗೆ ಹೆದರಿ ಓಡಿ ಹೋಗುವ ಪ್ರಶ್ನೆಯೇ ಉದ್ಭವಿಸದು ಎಂದು ಸ್ಪಷ್ಟಪಡಿಸಿದರು.
    ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಇದ್ದರು. ಶ್ರೀಗಳು ವಿಜಯೇಂದ್ರ ಹಾಗೂ ಚಂದ್ರಪ್ಪ ಅವರನ್ನು ಗೌರವಿಸಿದರು. ನಂತರ ವಿಜಯೇಂದ್ರ ಅವರು ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಶ್ರೀ ಬಸವಮೂರ್ತಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

    *ಎನ್‌ಇಪಿ ವಿರುದ್ಧ ಕೆಂಗಣ್ಣು
    ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಮೇಲೆ ಕಾಂಗ್ರೆಸ್ ಕೆಂಗಣ್ಣ ಬೀರಿದೆ ಎಂದು ತೀವ್ರ ಅಸಮಾಧಾನ ಹೊರ ಹಾಕಿದ ವಿಜಯೇಂದ್ರ, ಜಗತ್ತಿನಲ್ಲಿ ಭಾರತದ ಯುವಜನರಿಗೆ ಉತ್ತಮ ಬೇಡಿಕೆ ಇದೆ. ಮುಂದಿನ 60 ವರ್ಷಗಳಲ್ಲಿ ನಮ್ಮ ನವ ಪೀಳಿಗೆ ಹೇಗಿರಬೇಕೆಂಬ ನಿರೀಕ್ಷೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ರೂಪಿಸಿದ್ದಾರೆ. ಶಿಕ್ಷಣ ನೀತಿಯಲ್ಲಿ ತರಾತುರಿ ಮಾಡುವುದಿಲ್ಲವೆಂದು ಹೇಳುತ್ತಿದ್ದರೂ, ಇದರಲ್ಲಿ ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್ಸಿನ ನಡೆ ಖಂಡನೀಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts