ಮುಂಬೈ: ಕಾಶ್ಮೀರಿ ಪಂಡಿತರ ನೋವಿನ ಕಥೆಯನ್ನು ಆಧರಿಸಿದ “ಶಿಕಾರಾ” ಸಿನಿಮಾದ ಟ್ರೇಲರ್ ನಾಲ್ಕು ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದೆ. ದೇಶವಾಸಿಗಳ ಗಮನಸೆಳೆದಿದೆ. ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ ಶುಕ್ರವಾರ 12ನೇ ಸ್ಥಾನದಲ್ಲಿದ್ದು ಗಮನಸೆಳೆದ ಈ ಟ್ರೇಲರ್ 2.66 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ. ಸದ್ಯದ ಮಾಹಿತಿ ಪ್ರಕಾರ, ಈ ಸಿನಿಮಾ 2020ರ ಫೆಬ್ರವರಿ 7ರಂದು ತೆರೆಕಾಣಲಿದೆ.
ವಿಡಿಯೋ ಟ್ರೇಲರ್ ಕೆಳಗೆ ಇರುವ ಚಿಕ್ಕ ಚೊಕ್ಕ ಬರೆಹ ಸಿನಿಮಾದ ಕಥಾಹಂದರ ಸುಳಿವು ನೀಡುತ್ತದೆ. ಅದರ ಸಾರ ಹೀಗಿದೆ – ನಿಮ್ಮದೇ ದೇಶದಲ್ಲಿ ನೀವು ನಿರಾಶ್ರಿತರಾಗುವುದಕ್ಕಿಂತ ದೊಡ್ಡ ನೋವು ಇನ್ನೇನಿದೆ? 1990ನೇ ಇಸವಿ ಅಂಥದ್ದೊಂದು ನೋವನ್ನು ಕಾಶ್ಮೀರಿ ಪಂಡಿತರಿಗೆ ನೀಡಿತ್ತು. ಈ ಸ್ವತಂತ್ರ ಭಾರತದಲ್ಲಿ 4,00,000ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಬಲವಂತವಾಗಿ ಓಡಿ ಹೋಗಬೇಕಾದ ಪರಿಸ್ಥಿತಿ ಕಾಶ್ಮೀರದ ಕಣಿವೆ ಪ್ರದೇಶದಲ್ಲಿ 1990ನೇ ಇಸವಿಯಲ್ಲಿ ನಿರ್ಮಾಣವಾಗಿತ್ತು. ಮೂರು ದಶಕಗಳು ಉರುಳಿದರೂ ಅವರಿನ್ನೂ ಕಾಶ್ಮೀರಕ್ಕೆ ಮರಳಲು ಆಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ನೋವುಗಳ ನಡುವೆ ಅರಳಿ ನಲುಗಿದ ಪ್ರೇಮಕಥೆಯ ಚಿತ್ರವಿದು.
ವಿಧು ವಿನೋದ್ ಛೋಪ್ರಾ ನಿರ್ದೇಶನ, ನಿರ್ಮಾಣ, ಸಂಕಲನದ ಈ ಚಿತ್ರದಲ್ಲಿ ಹೃತಿಕ್ ರೋಷನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಫಾಕ್ಸ್ ಸ್ಟಾರ್ ಸ್ಟುಡಿಯೋ ಅಸೋಸಿಯೇಷನ್ ಈ ಚಿತ್ರಕ್ಕೆ ಇದೆ. ಟ್ರೇಲರ್ ಶುರುವಾಗುತ್ತಿರುವಂತೆಯೇ ನವಿರು ಶೃಂಗಾರ ಭಾವ ಇದ್ದರೆ ನಂತರದ ಭಾಗದಲ್ಲಿ ನೋವಿನ ಸನ್ನಿವೇಶಗಳು ಟ್ರೇಲರನ್ನು ಇನ್ನಷ್ಟು ಹೃದಯಸ್ಪರ್ಶಿಯಾಗಿಸಿದೆ. (ಏಜೆನ್ಸೀಸ್)