ಶಿಗ್ಗಾಂವಿ: ರೈತರು 3 ವರ್ಷಗಳಿಗೊಮ್ಮೆ ಭೂಮಿಯ ಮಣ್ಣನ್ನು ಪರೀಕ್ಷೆ ಮಾಡಬೇಕು. ಈ ಮೂಲಕ ಅಗತ್ಯವಿರುವ ಪೋಷಕಾಂಶಗಳನ್ನು ನೀಡಿ ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.
ತಾಲೂಕಿನ ಶಿಶುವಿನಹಾಳ ಗ್ರಾಮದ ಶರೀಫಗಿರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಮಹಾವಿದ್ಯಾಲಯ 2023-24 ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ, ವಿಚಾರಣಾ ಶಿಬಿರ ಹಾಗೂ ತಾಂತ್ರಿಕ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಯಾದ ರಾಸಾಯನಿಕ ಬಳಕೆಯಿಂದ ದಿನದಿಂದ ದಿನಕ್ಕೆ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ರೈತರು ರಾಸಾಯನಿಕ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬೇಕು. ನಮ್ಮ ಪೂರ್ವಜರು ಬಳಸುತ್ತಿದ್ದ ತಿಪ್ಪೆ ಗೊಬ್ಬರಗಳನ್ನು ಹೆಚ್ಚು ಬಳಕೆ ಮಾಡುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದರು.
ಮಣ್ಣು ಮತ್ತು ನೀರಿನ ಸಂರಕ್ಷಣೆ ಇಂದಿನ ಆದ್ಯತೆಯಾಗಿದೆ. ಮಣ್ಣಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಮಾತ್ರ ನೀಡಬೇಕು. ಸಾವಯವ ಗೊಬ್ಬರಗಳನ್ನು ಬಳಸಿ, ಮಳೆಯ ನೀರನ್ನು ಸಂರಕ್ಷಣೆ ಮಾಡಿಕೊಂಡು ಭೂಮಿಯ ತೇವಾಂಶಗಳನ್ನು ಹೆಚ್ಚಿಸಿಕೊಳ್ಳಬೇಕು. ಈ ಮೂಲಕ ಉತ್ತಮ ಬೆಳೆ ಬೆಳೆಯಬಹುದು ಎಂದರು.
ರೈತರೊಂದಿಗೆ 8 ವಾರಗಳ ಕಾಲ ಕೃಷಿಯ ಅನುಭವ ಹಂಚಿಕೊಳ್ಳಲು ವಿದ್ಯಾರ್ಥಿಗಳಿಗೆ ಇಂತಹ ಶಿಬಿರ ಆಯೋಜಿಸಲಾಗಿದೆ. ರೈತರು ಸಹ ತಮ್ಮ ಕೃಷಿಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಡಾ. ಪಿ.ಎಲ್. ಪಾಟೀಲ ಹೇಳಿದರು.
ವಿವಿ ಮುಖ್ಯ ಸಂಯೋಜಕ ಡಾ. ಜಿ.ಎನ್. ಮರಡ್ಡಿ, ವಿವಿ ಶಿಕ್ಷಣ ನಿರ್ದೇಶಕ ಡಾ. ವಿ.ಆರ್. ಕೀರೆಸೂರ, ಪ್ರಾಧ್ಯಾಪಕ ಡಾ. ಎಂ.ಜಿ. ಹೆಗಡೆ ಅವರು, ಜೋಳ, ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಸೋಯಾಬಿನ್ ಬೆಳೆಗಳಿಗೆ ತಗಲುವ ರೋಗಭಾದೆ, ಕೀಟಗಳ ನಿರ್ವಹಣೆಗೆ ಅನುಸರಿಸಬಹುದಾದ ಸಲಹೆಗಳನ್ನು ನೀಡಿದರು.
ಕೃಷಿ ವಿವಿ ವಿದ್ಯಾಧಿಕಾರಿ (ಡೀನ್) ಡಾ. ಎಚ್.ಬಿ. ಬಬಲಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಆರ್.ವಿ. ಹೆಗಡೆ, ಶಿಶುವಿನಹಾಳ ಗ್ರಾಪಂ ಅಧ್ಯಕ್ಷ ಟಾಕಪ್ಪ ಕಟ್ಟಾಣಿ, ಚೆಲ್ಲೂರು ಗ್ರಾಪಂ ಅಧ್ಯಕ್ಷೆ ಶಾರವ್ವ ಹರಿಜನ, ಶಂಬಣ್ಣ ಬೆಟಗೂರ, ನಿಂಗಯ್ಯ ಪೂಜಾರ, ಶಿವನಗೌಡ ಲಕ್ಷ್ಮೇಶ್ವರ, ಗೋಪಾಲರಾವ ದೇಶಪಾಂಡೆ, ಉಮೇಶ ಶಿರೂರು, ವೆಂಕನಗೌಡ ಮನೋಜಿ, ಶಿವಬಸಪ್ಪ ವಾಲ್ಮೀಕಿ, ಗುರುನಗೌಡ ಹಿರೇಗೌಡ್ರ, ಕುಮಾರ ಯಲವಗಿ ಇತರರಿದ್ದರು.