ಶಿಗ್ಗಾಂವಿ: ಶಿಗ್ಗಾಂವಿಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಜೀನಾಮೆಯಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ಚುನಾವಣಾ ಆಯೋಗ ಉಪಚುನಾವಣೆ ಘೊಷಿಸಿದ್ದು, ಅ. 16 ರಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ಚುನಾವಣಾಧಿಕಾರಿ ಸವಣೂರ ಉಪವಿಭಾಗಾಧಿಕಾರಿ ಮಹಮ್ಮದ ಖಿಜರ್ ಹೇಳಿದರು.
ಶಿಗ್ಗಾಂವಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅ. 18ರಿಂದ 25ರವರೆಗೆ ನಾಮಪತ್ರ ಸಲ್ಲಿಕೆ, ಅ. 28 ನಾಮಪತ್ರ ಪರಿಶೀಲನೆ, ಅ. 30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನ. 13ರಂದು ಮತದಾನ ನಡೆಯಲಿದೆ. ನ. 23ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.
ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 241 ಮತಗಟ್ಟೆಗಳಿದ್ದು, ಪುರುಷ ಮತದಾರರು 1,21,067. ಮಹಿಳಾ ಮತದಾರರು 1,15,717. ಇತರೆ 6 ಮತದಾರರು ಸೇರಿದಂತೆ ಒಟ್ಟು 2,36,790 ಮತದಾರರು ಮತ ಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ ವಯೋವೃದ್ಧರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನದ ಹಕ್ಕನ್ನು ಚಲಾಯಿಸಲು ಚುನಾವಣಾ ಸಿಬ್ಬಂದಿ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಅಭಿವೃದ್ಧಿ ಪರ ಘೊಷಣೆ ಮಾಡುವಂತಿಲ್ಲ. ಕ್ಷೇತ್ರದ ಪಾಣಿಗಟ್ಟಿ, ಕೋಣನಕೆರೆ, ತಡಸ ಮತ್ತು ರಾಮನಕೊಪ್ಪ ಬಳಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಹೊರ ಹೋಗುವ ಮತ್ತು ಕ್ಷೇತ್ರದ ಒಳಬರುವ ಎಲ್ಲ ವಾಹನಗಳನ್ನು ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ. ನೋಡಲ್ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು, ಮೇಲ್ವಿಚಾರಣಾ ಸಮಿತಿ ಚುನಾವಣೆ ಕಾರ್ಯನಿರ್ವಹಿಸಲಿದ್ದು, ರಾಜಕೀಯ ಪಕ್ಷಗಳ ಬ್ಯಾನರ್, ಬಂಟಿಂಗ್ಸ್ ಹೋರ್ಡಿಂಗ್ಸ್ಗಳನ್ನು ತಕ್ಷಣ ತೆರವುಗೊಳಿಸಲಾಗುವುದು. ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಯಾವುದೇ ದೂರು ಇತರೆ ಮಾಹಿತಿಗಾಗಿ ಸಿವಿಜಿ ಆಪ್ ಮೂಲಕ ಅಥವಾ ದೂ. ಸಂ. 08378-255044 ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.
ಕಂದಾಯ ಗ್ರಾಮ ಘೊಷಿಸುವಂತೆ ಒತ್ತಾಯಿಸಿ ತಾಲೂಕಿನ ಹೆಳವತರ್ಲಘಟ್ಟ ಗ್ರಾಮಸ್ಥರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳ ಭರವಸೆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟು ಮತ ಚಲಾವಣೆ ಮಾಡಿದ್ದರು. ಗ್ರಾಮಸ್ಥರ ಬೇಡಿಕೆ ಅನುಸಾರ ಸರ್ಕಾರಕ್ಕೆ ಈಗಾಗಲೇ ಕಂದಾಯ ಗ್ರಾಮ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಕಂದಾಯ ಗ್ರಾಮ ಎಂದು ಘೊಷಣೆ ಬಾಕಿ ಇದೆ. ಮತದಾನ ಬಹಿಷ್ಕಾರದಂತಹ ಯಾವುದೇ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಿಗ್ಗಾಂವಿ ತಹಸೀಲ್ದಾರ್ ಸಂತೋಷ ಹಿರೇಮಠ, ಸವಣೂರ ತಹಸೀಲ್ದಾರ್ ಎಸ್.ಎ. ಭರತ್, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್ ಆರ್. ಇದ್ದರು.