ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ವಾಹನ ನಿಬಿಢತೆಯಿಂದ ಪಡುಬಿದ್ರಿ ಪೇಟೆಯಲ್ಲಿ ಆಗುತ್ತಿರುವ ಸಂಚಾರ ತೊಡಕು ನಿವಾರಿಸುವ ಸಲುವಾಗಿ ಕಾರ್ಕಳ ಸಹಿತ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಬಸ್ ನಿಲುಗಡೆಯನ್ನು ಪೊಲೀಸ್ ಸೂಚನೆಯಂತೆ ಪಡುಬಿದ್ರಿ-ಕಾರ್ಕಳ ತಿರುವು ಜಂಕ್ಷನ್‌ಗೆ ಮಂಗಳವಾರದಿಂದ ಸ್ಥಳಾಂತರಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಉಡುಪಿ ಹಾಗೂ ಕಾರ್ಕಳ ಕಡೆ ಸಂಚರಿಸುವ ಬಸ್‌ಗಳು ನಿಲುಗಡೆ ಮಾಡುತ್ತಿದ್ದು, ಹೆದ್ದಾರಿಯಲ್ಲಿ ಜನ ಹಾಗೂ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಪೊಲೀಸರಿಗೆ ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪಡುಬಿದ್ರಿ ಠಾಣಾಧಿಕಾರಿ ದಿಲೀಪ್, ಕಾರ್ಕಳ ಕಡೆ ತೆರಳುವ ಬಸ್‌ಗಳಿಗೆ ಪ್ರತ್ಯೇಕವಾಗಿ ನಿಲುಗಡೆ ಮಾಡುವಂತೆ ಸೋಮವಾರ ಸೂಚನೆ ನೀಡಿದ್ದರು. ಅದರಂತೆ ಮಂಗಳವಾರದಿಂದಲೇ ಬಸ್ ನಿಲುಗಡೆಯನ್ನು ಪ್ರತ್ಯೇಕಗೊಳಿಸಲಾಗಿಸಿದ್ದು, ಹೆದ್ದಾರಿಯಲ್ಲಿನ ಸಂಚಾರಕ್ಕೆ ಕೊಂಚ ಮಟ್ಟಿನ ಪರಿಹಾರ ದೊರೆತಂತಿದೆ.
ಆದರೂ ಈಗ ಕಾರ್ಕಳ ಕಡೆ ತೆರಳುವ ಬಸ್ ನಿಲುಗಡೆ ಕಲ್ಪಿಸಿರುವ ಸ್ಥಳದಲ್ಲಿ ಗೂಡ್ಸ್ ಟೆಂಪೋ ನಿಲ್ದಾಣವಿದ್ದು, ಅವರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ. ಈ ಮಾರ್ಗದಲ್ಲಿಯೂ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಅಂಗಡಿಗಳನ್ನು ನಿರ್ಮಾಣ ಮಾಡಲಾಗಿರುವುದಲ್ಲದೆ, ಹೆದ್ದಾರಿ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಯಿಂದ ಜನ ಸಂಚಾರಕ್ಕೆ ಸಂಚಕಾರ ತರುತ್ತಿದೆ. ಈ ಸಮಸ್ಯೆಯನ್ನೂ ಪರಿಹರಿಸಿ ಬಸ್ ನಿಲುಗಡೆಗೂ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣವನ್ನು ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.