ಬೆಳಗಾವಿ: ಆಶ್ರಯ ಫೌಂಡೇಷನ್‌ಗೆ ವ್ಯಾನ್ ಕೊಡುಗೆ

ಬೆಳಗಾವಿ: ಉಮಾ ಸಂಗೀತ ಪ್ರತಿಷ್ಠಾನ ಹಾಗೂ ಕ್ರಾಂತಿ ಮಹಿಳಾ ಮಂಡಳಗಳು ಸಾಮಾಜಿಕ ಕಳಕಳಿಯ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮಹಿಳಾ ಎಚ್‌ಐವಿ, ಏಡ್ಸ್ ಪೀಡಿತರಿಗೆ ಆಶ್ರಯತಾಣವಾಗಿರುವ ಆಶ್ರಯ ಫೌಂಡೇಷನ್‌ಗೆ ಅವಶ್ಯವಿರುವ ಇಕೋ ಬಹು ಬಳಕೆ ವ್ಯಾನ್ ಕೊಡುಗೆ ನೀಡಿರುವುದು ಅನುಕರಣೀಯ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದ್ದಾರೆ.

ಇಲ್ಲಿನ ಮಹಾಂತೇಶ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಮಾ ಸಂಗೀತ ಪ್ರತಿಷ್ಠಾನ ಹಾಗೂ ಕ್ರಾಂತಿ ಮಹಿಳಾ ಮಂಡಳ ವತಿಯಿಂದ ಆಶ್ರಯ ಫೌಂಡೇಷನ್‌ಗೆ ವ್ಯಾನ್ ಹಸ್ತಾಂತರಿಸಿ ಮಾತನಾಡಿದರು.

ಮಹಿಳೆಯರಿಗೋಸ್ಕರ ಮಹಿಳೆಯರಿಂದ ಮಾಡಿದ ಈ ಕಾರ್ಯ ಅನುಕರಣೀಯವಾಗಿದ್ದು. ಇತರರೂ ಈ ಮಾದರಿಯಲ್ಲೆ ಸೇವೆಗೆ ಮುಂದೆ ಬರಬೇಕು ಎಂದರು.

ಕ್ರಾಂತಿ ಮಹಿಳಾ ಮಂಡಳದ ಅಧ್ಯಕ್ಷರಾದ ಮಂಗಲ ಮಠದ ಮಾತನಾಡಿ, ಸಮಾಜದಿಂದ ನಾವು ಸಾಕಷ್ಟು ಅನುಕೂಲಗಳನ್ನು ಪಡೆದಿರುತ್ತೇವೆ. ಮರಳಿ ಸಮಾಜಕ್ಕಾಗಿ ಸೇವೆ ಮೂಲಕ ಕೃತಜ್ಞತೆಯನ್ನು ಸಮರ್ಪಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಅನಾಥ ಮಕ್ಕಳು, ಬುದ್ಧಿಮಾಂದ್ಯರು, ಅಂಗವಿಕಲರು, ಹೆಚ್‌ಐವಿ,ಏಡ್ಸ್ ಪೀಡಿತರನ್ನು ಕಡೆ ಗಣಿಸದೆ ಸಮಾಜದಲ್ಲಿ ಗೌರವದಿಂದ ಬಾಳುವಂತೆ ಸಹಕರಿಸುವುದು ಮಾನವೀಯ ಧರ್ಮವಾಗಿದೆ ಎಂದರು. ಈ ಕಾರ್ಯಕ್ಕಾಗಿ ಶ್ರಮಿಸಿದ ಎಲ್ಲರಿಗೂ ಹಾಗೂ ದಾನಿಗಳಿಗೆ ಕೃತಜ್ಞತೆಗಳನ್ನು ಸಮರ್ಪಸಿದರು.

ಆಶ್ರಯ ಫೌಂಡೇಷನ್ ಅಧ್ಯಕ್ಷ ನಾಗರತ್ನಾ ರಾಮಗೌಡ ಮಾತನಾಡಿ, ಸದಸ್ಯರಾದ ಓಂಪ್ರಕಾಶ ನಾಯಕ, ಉಮಾ ಸಂಗೀತ ಪ್ರತಿಷ್ಠಾನ ಹಾಗೂ ಕ್ರಾಂತಿ ಮಹಿಳಾ ಮಂಡಳದವರಿಗೆ ಧನ್ಯವಾದಗಳನ್ನು ಸಮರ್ಪಿಸಿದರು.

ಆಶ್ರಯ ಫೌಂಡೇಷನ್ ನಿರ್ದೇಶಕ ಮಂಜುನಾಥ ಪೂಜಾರ, ತ್ರಿಶಿಲಾ ಪಾಯಪ್ಪನವರ, ಅರ್ಚನಾ ಪದ್ಮಣ್ಣವರ್, ಆಶಾ ಯಮಕನಮರ್ಡಿ, ರಾಜೇಂದ್ರ ಮಠದ, ಉಮಾ ಸಂಗೀತ ಪ್ರತಿಷ್ಠಾನ ಹಾಗೂ ಕ್ರಾಂತಿ ಮಹಿಳಾ ಮಂಡಳದ ಎಲ್ಲ ಸದಸ್ಯರು, ಇದ್ದರು.