ವಸತಿ ರಹಿತರಿಗೆ ಸೂರು ಆದ್ಯತೆ

< ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿಕೆ>

ಮಂಗಳೂರು: ನಗರದಲ್ಲಿ ವಸತಿ ರಹಿತರಿಗೆ ಸೂರು ಒದಗಿಸಲು ಸರ್ಕಾರ ಆದ್ಯತೆ ನೀಡಿದ್ದು, ಒಂದು ಸಾವಿರ ಮಂದಿಗೆ ಮನೆ ನೀಡಲು ಕಣ್ಣೂರಿನಲ್ಲಿ ಜಾಗ ಗುರುತಿಸಲಾಗಿದೆ. ಪ್ರಥಮ ಹಂತದಲ್ಲಿ 28.5 ಕೋಟಿ ರೂ. ವೆಚ್ಚದಲ್ಲಿ 500 ಮನೆಗಳ ನಿರ್ಮಾಣವಾಗಲಿದೆ. ವಾರದೊಳಗೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಮತ್ತು ಕೆಯುಐಡಿಎಫ್‌ಸಿ ಸಹಯೋಗದಲ್ಲಿ ಮಂಗಳವಾರ ನಗರದ ಉರ್ವ ಚರ್ಚ್ ಹಾಲ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಕ್ತಿನಗರದಲ್ಲಿ ಕೂಡ ಜಾಗ ಗುರುತಿಸಲಾಗಿದ್ದು ಕೆಲವು ಸಮಸ್ಯೆ ಎದುರಾಗಿದೆ. ಜಾಗದ ಸಮಸ್ಯೆ ನಿವಾರಣೆ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ 300ರಿಂದ 400 ಮನೆ ನಿರ್ಮಿಸಲಾಗುವುದು ಎಂದರು.

ನಗರದಲ್ಲಿ 855 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಾಲಮಿತಿಯಲ್ಲಿ ಕಾಮಗಾರಿ ಪೂರೈಸಲು ಅಧಿಕಾರಿಗಳು ಗಮನ ಹರಿಸಬೇಕು. ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗೆ ಸಂಬಂಧಿಸಿ ಹೆಚ್ಚುವರಿಯಾಗಿ 150 ಕೋಟಿ ರೂ. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಕೆ.ಭಾಸ್ಕರ್, ಉಪಮೇಯರ್ ಕೆ.ಮಹಮ್ಮದ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಕೆ, ನವೀನ್ ಡಿಸೋಜ, ಟಿ.ಪ್ರವೀಣಚಂದ್ರ ಆಳ್ವ, ಕೆಯುಐಡಿಎಫ್‌ಸಿ ಉಪಯೋಜನಾ ನಿರ್ದೇಶಕ ಬಿ.ಎಚ್.ನಾರಾಯಣಪ್ಪ, ಕಾರ್ಪೋರೇಟರ್‌ಗಳಾದ ಡಿ.ಕೆ.ಅಶೋಕ್‌ಕುಮಾರ್, ಪ್ರಕಾಶ್ ಕೆ., ಜಯಂತಿ ಆಚಾರ್, ಪೂರ್ಣಿಮಾ, ರಮೀಜಾ ಭಾನು ಉಪಸ್ಥಿತರಿದ್ದರು. ಮನಪಾ ಆಯುಕ್ತ ಮಹಮ್ಮದ್ ನಜೀರ್ ಸ್ವಾಗತಿಸಿದರು.ಆರ್‌ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

  •  ಮಂಗಳೂರು ಮಹಾ ನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಡಿ ಅಂಗವಿಕಲರಿಗೆ ಶ್ರವಣ ಸಾಧನ, ಕೃತಕ ಕಾಲು, ವ್ಹೀಲ್ ಚೇರ್ ಸಹಿತ ಒಟ್ಟು 679 ಫಲಾನುಭವಿಗಳಿಗೆ 45.48 ಲಕ್ಷ ರೂ.ವೆಚ್ಚದ ವಿವಿಧ ಸವಲತ್ತ್ತುಗಳನ್ನು ವಿತರಿಸಲಾಯಿತು.
  • ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ 100.45 ಕೋಟಿ ರೂ,ವೆಚ್ಚದಲ್ಲಿ ಮಂಗಳೂರು ನಗರದ ಚರಂಡಿ ವ್ಯವಸ್ಥೆಯ ಪುನಃ ನಿರ್ಮಾಣ ಕಾಮಗಾರಿ, 35.51 ಕೋಟಿ ರೂ.ವೆಚ್ಚದಲ್ಲಿ ಸಗಟು ನೀರು ಸರಬರಾಜು ವ್ಯವಸ್ಥೆಯ ಕಾಮಗಾರಿ, ಎಡಿಬಿ ಯೋಜನೆಯಡಿ 33.82 ಕೋಟಿ ರೂ.ವೆಚ್ಚದಲ್ಲಿ ಮಂಗಳೂರು ನಗರದ ಹೊರವಲಯದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಮತ್ತು 33.86 ಕೋಟಿ ರೂ.ವೆಚ್ಚದಲ್ಲಿ ಮಂಗಳೂರು ನಗರದ ಒಳಚರಂಡಿ ಜಾಲದ ವ್ಯವಸ್ಥೆಯನ್ನು ಪುನರ್ ನಿರ್ಮಾಣ ಮಾಡುವ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

    ಸೂರು ರಹಿತರಿಗೆ ನಗರದಲ್ಲಿ ಮನೆ ನಿರ್ಮಿಸಲು ಜಾಗ ಮೀಸಲಿಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಮನಪಾ ಕಚೇರಿಯಲ್ಲಿ ಜನನ- ಮರಣ ಪ್ರಮಾಣ ಪತ್ರ ಅರ್ಜಿ ಸಲ್ಲಿಸಿದಂದೇ ಸಿಗುವಂತಾಗಬೇಕು. ಉದ್ದಿಮೆ ಪರವಾನಗಿ ಕೋರಿ ಸಲ್ಲಿಸಿದ ಅರ್ಜಿಯಲ್ಲಿ ದಾಖಲೆಗಳು ಸಮರ್ಪಕವಾಗಿದ್ದಲ್ಲಿ ವಾರದೊಳಗೆ ಪರವಾನಗಿ ಒದಗಿಸಬೇಕು – ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ