ಶೀಟ್ ಮನೆ ವಾಸದಿಂದ ಮಹಾಮಾರಿ ಕ್ಯಾನ್ಸರ್..!

| ವಿ. ಮುರಳೀಧರ, ದಿಗ್ವಿಜಯ ನ್ಯೂಸ್

ಆತನಿಗೆ ಇನ್ನೂ 45 ವರ್ಷ, ಬೀಡಿ-ಸಿಗರೇಟು ಸೇದಲ್ಲ, ಗುಟ್ಕಾ ಪಾನ್ ಜಗಿಯಲ್ಲ.. ಆದರೂ ಲಂಗ್ಸ್ ಕ್ಯಾನ್ಸರ್​ಗೆ ತುತ್ತಾಗಿದ್ದಾನೆ!

ದುರಂತವೆಂದರೆ ಆತನಿಗೆ ನೆರಳು ನೀಡಿದ ಮನೆಯ ಛಾವಣಿಯೇ ಆತನಿಗೆ ಕ್ಯಾನ್ಸರ್ ಬರಲು ಕಾರಣ. ಗ್ರಾಮೀಣ ಭಾಗದ ಬಡವರಿಗೆ ನೆರಳು ನೀಡುತ್ತಿರುವ ಅಸ್ಬೆಸ್ಟೋಸ್ (ಎಸಿಸಿ) ಶೀಟುಗಳಿಂದ ಕ್ಯಾನ್ಸರ್ ಬರುತ್ತದೆ ಎಂಬ ಸತ್ಯ ಅನೇಕರಿಗೆ ಗೊತ್ತಿಲ್ಲ. ಹಾಗೆಯೇ ಈ ಶೀಟುಗಳ ಉತ್ಪಾದನೆ, ಮಾರಾಟ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿ 7 ವರ್ಷಗಳು ಕಳೆದಿವೆ ಎಂಬ ಅರಿವೂ ಹಲವರಿಗಿಲ್ಲ. ಈ ಶೀಟುಗಳ ಬಳಕೆಯನ್ನು ವಿಶ್ವದ 60 ರಾಷ್ಟ್ರಗಳಲ್ಲಿ ನಿರ್ಬಂಧಿಸಲಾಗಿದೆ. ಈಗಲೂ ಈ ಶೀಟುಗಳು ಕಾನೂನುಬಾಹಿರವಾಗಿ ರಾಜ್ಯದಲ್ಲಿ ಮಾರಾಟವಾಗುತ್ತಲೇ ಇವೆ. ವೈಜ್ಞಾನಿಕ ಭಾಷೆಯಲ್ಲಿ ಅಸ್ಬೆಸ್ಟೋಸ್ ಶೀಟ್ಸ್ ಎಂದು ಕರೆಸಿಕೊಳ್ಳುವ ಎಸಿಸಿ ಶೀಟು ಕಡಿಮೆ ಬೆಲೆಗೆ ಸಿಗುವುದರಿಂದ ಅವುಗಳನ್ನು ಬಳಸಿ ಬಡವರು ಮನೆ ಕಟ್ಟಿಕೊಳ್ಳುತ್ತಲೇ ಇದ್ದಾರೆ.

ಭಾರತದಲ್ಲೂ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡಿದ್ದ ಸುಪ್ರೀಂಕೋರ್ಟ್ 2011ರಲ್ಲಿ ಕ್ಯಾನ್ಸರ್​ಕಾರಕ ಅಸ್ಬೆಸ್ಟೋಸ್ ಶೀಟುಗಳ ಉತ್ಪಾದನೆ, ತಯಾರಿ, ಮಾರಾಟ ನಿಷೇಧಿಸಿ ಆದೇಶ ನೀಡಿತ್ತು. ಆದರೆ ಈ ಆದೇಶವನ್ನು ಸಂಬಂಧಿತ ಇಲಾಖೆಗಳು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ತಂದಿವೆ ಎಂಬುದನ್ನು ಪರೀಕ್ಷಿಸಲು ದಿಗ್ವಿಜಯ ಸುದ್ದಿವಾಹಿನಿ ಮತ್ತು ವಿಜಯವಾಣಿ ರಿಯಾಲಿಟಿ ಚೆಕ್ ನಡೆಸಿತು. ಕೆ.ಆರ್. ಮಾರ್ಕೆಟ್​ಗೆ ಹೊಂದಿಕೊಂಡಿರುವ ಬಂಬೂ ಬಜಾರ್​ಗೆ ಭೇಟಿ ಕೊಟ್ಟಾಗ ಯಾವುದೇ ತೊಡಕಿಲ್ಲದೆ ಲಾರಿಗಟ್ಟಲೆ ಎಸಿಸಿ ಶೀಟುಗಳನ್ನು ಮಾರುತ್ತಿರುವುದು ಕಂಡುಬಂತು. ಬ್ಯಾನ್ ಆಗಿರುವ ಶೀಟುಗಳನ್ನು ಹೇಗೆ ಮಾರಾಟ ಮಾಡುತ್ತೀರಿ ಎಂದು ಪ್ರಶ್ನಿಸಿದರೆೆ ಎಸಿಸಿ ಶೀಟು ಮಾರಾಟದಾರರು ಕೊಟ್ಟ ಉತ್ತರ ಅಚ್ಚರಿ ಮೂಡಿಸಿತ್ತು. ‘ಎಸಿಸಿ ಶೀಟುಗಳಿಂದ ಕ್ಯಾನ್ಸರ್ ಬರುತ್ತೆ ಅಂತ ಸುಪ್ರೀಂಕೋರ್ಟ್ ಬ್ಯಾನ್ ಮಾಡಿತ್ತು. ಆದರೆ ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ಎಲ್ಲರೂ ಇದೇ ಶೀಟು ಕೇಳುತ್ತಾರೆ. ಕೋಳಿ ಫಾರಂಗಳಿಗೆ ಇದೇ ಶೀಟುಗಳನ್ನೇ ಹಾಕೋದು. ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ತೀರ್ಪು ಕೊಟ್ಟ ನಂತರ ಶೀಟುಗಳಲ್ಲಿನ ಅಸ್ಬೆಸ್ಟೋಸ್ ಪ್ರಮಾಣ ತಗ್ಗಿಸಿದ್ದಾರೆ. ನಿಮ್ಮನ್ನು ಯಾರೂ ಬಂದು ಕೇಳಲ್ಲ, ನಾವು ಮಾರಾಟ ಮಾಡುತ್ತಿಲ್ಲವೇ?’ ಎಂದರು.

ಕ್ಯಾನ್ಸರ್ ಬರುತ್ತೆ ಹುಷಾರ್!

ಸಿಮೆಂಟ್ ಶೀಟುಗಳ ತಯಾರಿಕೆಗೆ ಅಸ್ಬೆಸ್ಟೋಸ್ ಮತ್ತು ಫೈಬರ್ ಬಳಸಲಾಗಿರುತ್ತದೆ. ವರ್ಷಗಳು ಕಳೆದಂತೆ ಶೀಟುಗಳಲ್ಲಿನ ಫೈಬರ್ ಕಣಗಳು ಉಸಿರಾಟದ ಮೂಲಕ ಮಾನವನ ದೇಹಕ್ಕೆ ಪ್ರವೇಶಿಸಿದರೆ ವಾಪಸ್ ಬರುವುದಿಲ್ಲ. ದೇಹದಲ್ಲಿ ರಾಸಾಯನಿಕ ಕ್ರಿಯೆಯಿಂದಾಗಿ ಮಿಸಲೋಥಿಯಮ್ ಕ್ಯಾನ್ಸರ್, ಲಂಗ್ಸ್ ಇನ್​ಫ್ಲೇಮ್ ಲಂಗ್ಸ್ ಮತ್ತು ಹೊಟ್ಟೆ ಕ್ಯಾನ್ಸರ್, ಕಿಡ್ನಿ ಹಾಗೂ ಧ್ವನಿಪೆಟ್ಟಿಗೆ ಕ್ಯಾನ್ಸರ್ ಬರುತ್ತದೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಅನೇಕ ಅಧ್ಯಯನಗಳಲ್ಲಿ ದೃಢಪಟ್ಟಿದೆ. ದುಶ್ಚಟಗಳಿಲ್ಲದಿದ್ದರೂ ಕ್ಯಾನ್ಸರ್​ಗೆ ತುತ್ತಾಗುವ ಅಪಾಯವಿದೆ ಎಂದು ಕ್ಯಾನ್ಸರ್ ತಜ್ಞ ಡಾ.ಯು.ಎಸ್. ವಿಶಾಲ್ ರಾವ್ ಅವರು ವಿಶ್ವ ಆರೋಗ್ಯ ಸಂಸ್ಥೆ ಸಂಶೋಧನಾ ವರದಿ ಕುರಿತು ವಿವರಿಸಿದರು. ಅಮೆರಿಕದಲ್ಲಿ ಕಳೆದ 15 ವರ್ಷಗಳಲ್ಲಿ 2 ಲಕ್ಷ ಜನ ಕ್ಯಾನ್ಸರ್​ಗೆ ಬಲಿಯಾಗಿದ್ದು, ಎಲ್ಲರೂ ಇದೇ ಹಾನಿಕಾರಕ ಶೀಟುಗಳಿಂದಾಗಿ ಕ್ಯಾನ್ಸರ್​ಗೆ ತುತ್ತಾಗಿರುವ ಅಂಶ ಅಧ್ಯಯನದಲ್ಲಿ ಹೊರ ಬಿದ್ದಿದೆ. ಅಮೆರಿಕದಲ್ಲಿ ಎಸಿಸಿ ಶೀಟುಗಳ ಉತ್ಪಾದನೆ-ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ.

ಕಡಿವಾಣ ಯಾರ ಜವಾಬ್ದಾರಿ?

ಕ್ಯಾನ್ಸರ್​ಕಾರಕ ಸಿಮೆಂಟ್ ಶೀಟುಗಳ ಉತ್ಪಾದನೆ, ಮಾರಾಟ, ಬಳಕೆ ನಿಷೇಧಿಸುವ ಜವಾಬ್ದಾರಿ ಕಾರ್ವಿುಕ ಇಲಾಖೆ, ಗಣಿಗಾರಿಕೆ ಇಲಾಖೆ, ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿ. ಆದರೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಎಸಿಸಿ ಶೀಟು ಮಾರಾಟ ಮಾಡುತ್ತಿದ್ದರೂ ಸಂಬಂಧಿತ ಇಲಾಖೆಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ. ರಾಜಾರೋಷವಾಗಿ ನಿಷೇಧಿತ ಶೀಟುಗಳನ್ನು ಮಾರಲಾಗುತ್ತಿದೆ. ಕಬ್ಬಿಣ ಹಾಗೂ ಥರ್ವಕೋಲ್ ಶೀಟ್​ಗಳಿಗೆ ಹೋಲಿಸಿದರೆ ಕಡಿಮೆ ಬೆಲೆ ಎಂಬ ಕಾರಣಕ್ಕೆ ಈ ಶೀಟುಗಳನ್ನು ಹೆಚ್ಚಾಗಿ ಖರೀದಿಸಲಾಗುತ್ತಿದೆ.

ಆದೇಶ ಪಾಲನೆ ಅತ್ಯಗತ್ಯ

ಅಸ್ಬೆಸ್ಟೋಸ್ ಶೀಟುಗಳಿಂದಲೂ ಕ್ಯಾನ್ಸರ್ ಬರುತ್ತದೆ ಎಂಬ ಅರಿವು ಗ್ರಾಮೀಣ ಭಾಗದ ಜನರಲ್ಲಿಲ್ಲ. ಮೊದಲು ಜನರಲ್ಲಿ ಅರಿವು ಮೂಡಿಸಬೇಕು. ಜತೆಗೆ ಸಿಮೆಂಟ್ ಶೀಟುಗಳ ಬದಲಿಗೆ ಹೆಂಚು ಅಥವಾ ಪರ್ಯಾಯ ವಸ್ತುಗಳನ್ನು ಬಳಸುವ ಬಗ್ಗೆ ಸರ್ಕಾರ ಜಾಗೃತಿ ಮೂಡಿಸಬೇಕು. ತಪ್ಪಿದರೆ ಮುಂದಿನ 15 ವರ್ಷಗಳಲ್ಲಿ ಮನೆಗೊಬ್ಬಕ್ಯಾನ್ಸರ್ ರೋಗಿ ಹುಟ್ಟಿಕೊಳ್ಳುತ್ತಾರೆ. ಸುಪ್ರೀಂಕೋರ್ಟ್ ಆದೇಶ ಜಾರಿಗೆ ತರುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳು ಕಾರ್ಯೋನ್ಮುಖವಾಗಬೇಕು ಎಂದು ಕ್ಯಾನ್ಸರ್ ತಜ್ಞ ಡಾ.ಯು.ಎಸ್. ವಿಶಾಲ್ ರಾವ್ ಅಭಿಪ್ರಾಯಪಟ್ಟಿದ್ದಾರೆ.