ಸಮಾಜದಲ್ಲಿ ಹೆಚ್ಚಾಗುತ್ತಿದೆ ಕುರಿ ಮೆಂಟಾಲಿಟಿ; ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟಿ ಸುಧಾರಾಣಿ

ಸಮಾಜದಲ್ಲಿ ಹೆಚ್ಚಾಗುತ್ತಿದೆ ಕುರಿ ಮೆಂಟಾಲಿಟಿ; ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟಿ ಸುಧಾರಾಣಿಕನ್ನಡದಲ್ಲಿ ಒಂದು ಗಾದೆ ಇದೆ. ‘ನವಿಲು ಕುಣೀತು ಅಂತ ಕೆಂಭೂತ ಸಹ ಪುಕ್ಕ ಬಿಚ್ಚಿ ಕುಣಿಯೋಕೆ ಶುರು ಮಾಡ್ತಂತೆ …’ ಅಂತ. ಯಾರೋ ಏನೋ ಮಾಡ್ತಾರೆ ಅಂತ ನಾವೂ ಅದನ್ನು ಮಾಡೋಕೆ ಹೋಗಬಾರದು ಅಂತ ಈ ಗಾದೆ ಸೂಚ್ಯವಾಗಿ ಹೇಳುತ್ತದೆ. ಎಷ್ಟು ನಿಜ ಅಲ್ವಾ? ಪ್ರತಿಯೊಬ್ಬರಿಗೂ ಅವರದ್ದೇ ಆದ ವ್ಯಕ್ತಿತ್ವ ಮತ್ತು ಜೀವನಶೈಲಿ ಇರುತ್ತದೆ. ಅವರದ್ದೇ ಆದ ಬೇಕು, ಬೇಡಗಳಿರುತ್ತವೆ. ಅದನ್ನು ಬಿಟ್ಟು, ಬೇರೆಯವರನ್ನು ಅನುಕರಣೆ ಮಾಡೋದು ಇವತ್ತಿನ ಸಮಾಜದಲ್ಲಿ ಒಂದು ಟ್ರೆಂಡ್ ಆಗಿಬಿಟ್ಟಿದೆ. ಒಂದು ಕುರಿ ಒಂದು ದಿಕ್ಕಿನಲ್ಲಿ ಹೋದರೆ, ಮಿಕ್ಕೆಲ್ಲ ಕುರಿಗಳು ಅದನ್ನೇ ಹಿಂಬಾಲಿಸುವಂತೆ, ಮನುಷ್ಯರಲ್ಲೂ ಆ ಕುರಿ ಮೆಂಟಾಲಿಟಿ ಹೆಚ್ಚಾಗುತ್ತಿದೆ.

ಇದು ಬರೀ ಯುವಕರಲ್ಲಿ ಅಂತಲ್ಲ, ಎಲ್ಲ ವರ್ಗದ ಮತ್ತು ವಯೋಮಾನದ ಜನರಲ್ಲೂ ಹೆಚ್ಚಾಗುತ್ತಿರುವುದನ್ನು ನೋಡುತ್ತಲೇ ಇರುತ್ತೇವೆ. ಯಾವುದೇ ವಿಷಯವಿರಲಿ ನಮಗೆ ಅದು ಬೇಕೋ, ಬೇಡವೋ ಎಂದು ಯೋಚನೆ ಮಾಡುತ್ತಿಲ್ಲ. ಯಾರೋ ಮಾಡುತ್ತಿದ್ದಾರೆ ಅಂತ ಅದನ್ನೇ ಮಾಡಲು ಹೋಗಿ ಸಾಕಷ್ಟು ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೊಬ್ಬರ ಮಕ್ಕಳು ಡಾಕ್ಟರ್ ಅಥವಾ ಇಂಜಿನಿಯರ್ ಆಗುತ್ತಿದ್ದಾರೆ ಎಂದು ತಮ್ಮ ಮಕ್ಕಳಿಗೂ ಅದನ್ನೇ ಓದಿಸುವ ಪರಿಪಾಠ ಹೆಚ್ಚಾಗುತ್ತಿದೆ. ಮಕ್ಕಳಿಗೆ ಏನು ಇಷ್ಟ? ಒಂದು ಪಕ್ಷ ಬಲವಂತದಿಂದ ಡಾಕ್ಟರ್ ಅಥವಾ ಇಂಜಿನಿಯರ್ ಮಾಡುವುದಕ್ಕೆ ಪ್ರಯತ್ನಿಸಿದರೆ, ಅವರು ಇಷ್ಟಪಟ್ಟು ಕಲಿಯುತ್ತಾರಾ? ಎಂದು ತಂದೆ-ತಾಯಿ ಆಲೋಚಿಸಬೇಕು. ಅದು ಬಿಟ್ಟು, ಅವರು ನಮ್ಮ ಕನಸನ್ನು ನನಸು ಮಾಡಬೇಕು, ನಾವು ಹೇಳಿದ್ದನ್ನೇ ಓದಬೇಕು ಎಂದು ಒತ್ತಡ ಹಾಕಬಾರದು.

ಅನುಕರಣೆ ಮಾಡುವುದರಿಂದ ಎಷ್ಟೆಲ್ಲ ಸಮಸ್ಯೆಗಳು ಎದುರಾಗುತ್ತಿವೆ ಗೊತ್ತಾ? ಅಂದುಕೊಂಡಂತೆ ಆಗದಿದ್ದಾಗ ಕುಟುಂಬಗಳಲ್ಲಿ ಕಲಹ ಹೆಚ್ಚಾಗುತ್ತಿದೆ, ಎಷ್ಟೋ ಜನ ತಪು್ಪ ದಾರಿ ಹಿಡಿದರೆ, ಇನ್ನೂ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮೊದಲಿಗೆ ನಾವು ನಮ್ಮನ್ನು ಒಪ್ಪಿಕೊಳ್ಳುವುದನ್ನು ಕಲಿಯಬೇಕು. ನಾನಿರುವುದು ಹೀಗೆ, ನನ್ನ ಸ್ವಭಾವ ಹೀಗೆ, ಅದನ್ನು ಬಿಟ್ಟು ಹೋಗಲ್ಲ ಎಂದು ನಮಗೆ ನಾವೇ ಚೌಕಟ್ಟು ಹಾಕಿಕೊಳ್ಳಬೇಕು.

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಆಸೆ ಇರುತ್ತದೆ. ಸ್ನೇಹಿತರ ಬಳಿ ಇರುವ ಕಾಸ್ಟಿ್ಲ ಬೈಕು ಅಥವಾ ಮೊಬೈಲು ತಮ್ಮ ಬಳಿಯೂ ಇದ್ದರೆ ಚೆನ್ನ ಎಂದು ವಿದ್ಯಾರ್ಥಿಗಳಿಗೆ ಆಸೆ ಇರುತ್ತದೆ. ಹಿರಿಯರಿಗೆ ಇನ್ನೊಬ್ಬರ ತರಹ ಐಷಾರಾಮಿಯಾಗಿ ಬದುಕಬೇಕು ಎಂಬ ಆಸೆ ಇರುತ್ತದೆ. ಮಕ್ಕಳ ಮದುವೆ ಗ್ರಾಂಡ್ ಆಗಿ ಮಾಡಬೇಕು, ಎಲ್ಲರೂ ತಿರುಗಿ ನೋಡುವಂತೆ ಬದುಕಬೇಕು ಅಂತೆಲ್ಲ ಕಲ್ಪನೆಗಳಿರುತ್ತವೆ. ಎಲ್ಲವೂ ಸುಲಭವಾಗಿ ಆಗುತ್ತದೆ ಎಂದು ಹೇಳಲಾಗದು. ಶಕ್ತಿಮೀರಿ ಪ್ರಯತ್ನ ಮಾಡಬೇಕಾಗುತ್ತದೆ. ಕೇಳಿದಾಗ ಸಹಾಯ ಅಥವಾ ಸಾಲ ಸಿಗದಿರಬಹುದು. ಹಾಗೆಂದು ತಪು್ಪದಾರಿ ಹಿಡಿದರೆ ಅದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಅನುಕರಣೆ ಮಾಡುವುದಕ್ಕೆ ಮೊದಲು, ನಮಗೆ ಇವೆಲ್ಲ ಇವೆಲ್ಲ ಬೇಕಾ? ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡರೆ, ಸಮಸ್ಯೆಗಳೇ ಇರುವುದಿಲ್ಲ. ಪಕ್ಕದ ಮನೆಯವರ ಬಳಿ ಮೂರು ಕಾರುಗಳಿವೆ ಎಂದರೆ, ಅದು ಅವರಿಗೆ ಅವಶ್ಯಕವಿರಬಹುದು ಅಥವಾ ಅದನ್ನು ಅರಗಿಸಿಕೊಳ್ಳುವ ಶಕ್ತಿ ಇರಬಹುದು. ಆದರೆ, ನಮಗೂ ಮೂರು ಕಾರುಗಳ ಅವಶ್ಯಕತೆ ಇದೆಯಾ? ಅದನ್ನು ಕೊಳ್ಳುವ ಶಕ್ತಿ ನಮಗಿದೆಯಾ? ಎಂಬುದನ್ನು ಮೊದಲು ಯೋಚಿಸಬೇಕು. ಮೂರು ಕಾರುಗಳ ಅವಶ್ಯಕತೆ ಇದ್ದರೂ, ಅದು ನಮ್ಮ ಜೀವನ ಮತ್ತು ಪರಿಸರದ ಮೇಲೆ ಯಾವ ತರಹದ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ, ಅನುಕರಣೆಯಿಂದ ಕ್ರಮೇಣ ಪೈಪೋಟಿ ಹೆಚ್ಚುತ್ತದೆ. ಪೈಪೋಟಿಯಿಂದ ಮೆಟೀರಿಯಲಿಸ್ಟಿಕ್ ಆಗುತ್ತೇವೆ. ಆಗ ಭಾವನೆಗಳಿಗೆ ಮತ್ತು ಸಂಬಂಧಗಳಿಗೆ ಬೆಲೆ ಇರುವುದಿಲ್ಲ. ಇದರಿಂದ ಅಹಂಕಾರ ಬೆಳೆಯುತ್ತದೆ, ಸಂಬಂಧಗಳು ಹಾಳಾಗುತ್ತವೆ, ಮೌಲ್ಯಗಳು ಕುಸಿಯುತ್ತವೆ ಮತ್ತು ಎಲ್ಲವನ್ನೂ ದುಡ್ಡಲ್ಲಿ ಅಳೆಯುವುದಕ್ಕೆ ಪ್ರಾರಂಭಿಸುತ್ತೇವೆ. ಇದ್ಯಾವುದೂ ಶಾಶ್ವತವಲ್ಲ ಎಂದು ಗೊತ್ತಿದ್ದರೂ, ಅದರ ಬಗ್ಗೆ ಗಮನ ಜಾಸ್ತಿ ಕೊಡುತ್ತೇವೆ.

ಇವತ್ತಿನ ಸೋಷಿಯಲ್ ಮೀಡಿಯಾ ಸಹ ಇದಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಅದಕ್ಕೆ ಸರಿಯಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್, ಮೆಟರ್ನಿಟಿ ಫೋಟೋಶೂಟ್, ಬೇಬಿಶವರ್ ಇತ್ಯಾದಿ ಟ್ರೆಂಡ್ ಹೆಚ್ಚುತ್ತಿರುವುದನ್ನು ಗಮನಿಸಬಹುದು. ಇವೆಲ್ಲವೂ ಅನುಕರಣೆಯ ಫಲವೇ. ಯಾರೋ ಮಾಡಿದ್ದನ್ನು ನೋಡಿ, ಇನ್ಯಾರೋ ಅದನ್ನು ಮುಂದುವರಿಸುತ್ತಾರೆ. ಅವರನ್ನು ನೋಡಿ ಮತ್ತೊಬ್ಬರು ಅದೇ ಕೆಲಸ ಮಾಡುತ್ತಾರೆ. ನಾವ್ಯಾಕೆ ಆ ತರಹ ಫೋಟೋಶೂಟ್ ಅಥವಾ ಬೇಬಿಶವರ್ ಕಾರ್ಯಕ್ರಮಗಳನ್ನು ಮಾಡಬೇಕು? ನಮ್ಮಲ್ಲಿ ಗರ್ಭಿಣಿಯರಿಗೆ ಬಳೆ ತೊಡಿಸುವ ಶಾಸ್ತ್ರವಿದೆ. ನಮಗೆ ನಮ್ಮದೇ ಆದ ಸಂಪ್ರದಾಯಗಳಿವೆ. ಯಾರೋ ಮಾಡುತ್ತಿದ್ದಾರೆ ಎಂದು ನಮ್ಮತನವನ್ನು ಬಿಟ್ಟು, ಬೇರೆ ಯಾವುದೋ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದಕ್ಕೆ ಹೊರಟಿದ್ದೇವೆ.

ವಿದೇಶಿಗರಲ್ಲಿ ಬಳೆ ತೊಡಿಸುವ ಸಂಪ್ರದಾಯ ಇಲ್ಲ. ಗರ್ಭಿಣಿಯರು ಸಂತೋಷವಾಗಿರಲಿ ಎಂಬ ಕಾರಣಕ್ಕೆ ಎಲ್ಲರೂ ಸೇರಿ, ಅವರಿಗೆ ಹಾರೈಸುತ್ತಾರೆ. ಅವರಿಗೆ ಗಿಫ್ಟ್​ಗಳನ್ನು ಕೊಡುತ್ತಾರೆ. ಆದರೆ, ನಮ್ಮಲ್ಲಿ ಒಂದು ಸಂಪ್ರದಾಯವಿದೆ. ಅದರ ಮಹತ್ವವನ್ನು ಅರಿಯಬೇಕು. ಅದು ಬಿಟ್ಟು, ಯಾರೋ ಮಾಡಿದರು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡರು ಎಂಬ ಕಾರಣಕ್ಕೆ ನಾವು ಸಹ ಅದನ್ನೇ ಅನುಕರಣೆ ಮಾಡುವುದರಲ್ಲಿ ಅರ್ಥವಿಲ್ಲ. ಅದರಿಂದ ನಮಗೇನಾದರೂ ಉಪಯೋಗವಿದೆಯಾ? ನಮ್ಮ ಸಂಸ್ಕೃತಿಯನ್ನು ಯಾಕೆ ಅಸಡ್ಡೆ ಮಾಡಬೇಕು? ಯಾರೋ ಮಾಡುತ್ತಿದ್ದಾರೆ ಎಂದು ನಾವು ಅವರನ್ನು ಅನುಕರಣೆ ಮಾಡಿದರೆ, ಆಗ ನಮಗೂ ಅವರಿಗೂ ವ್ಯತ್ಯಾಸವಾದರೂ ಏನು? ನಮ್ಮ ಐದು ಬೆರಳುಗಳೇ ಒಂದೇ ಸಮ ಇರುವುದಿಲ್ಲ. ಹಾಗಿರುವಾಗ ಯಾಕೆ ಇನ್ನೊಬ್ಬರ ತರಹ ಯೋಚನೆ, ಅನುಕರಣೆ ಮಾಡುವುದಕ್ಕೆ ಹೋಗಬೇಕು?

ಚಿಕ್ಕಂದಿನಿಂದಲೂ ನಮ್ಮಮ್ಮ ಒಂದು ಮಾತು ಹೇಳುತ್ತಿದ್ದರು. ‘ನಿನಗೇನು ಹೊಂದುತ್ತದೋ ಅದನ್ನು ಮಾಡು. ಯಾರೋ ಏನೋ ಮಾಡಿದರು ಅಂತ ಅನುಕರಿಸಬೇಡ. ಮುಂದೆ ಈ ವಿಷಯದಲ್ಲಿ ಪಶ್ಚಾತ್ತಾಪ ಪಡುವಂತೆ ಆಗಬಾರದು’ ಅಂತ. ಈ ಮಾತಿನಿಂದ ನನಗೆ ಬಹಳ ಹೆಲ್ಪ್ ಆಗಿದೆ. ಸಿನಿಮಾ ಆಯ್ಕೆ ವಿಷಯ ಇರಬಹುದು ಅಥವಾ ವೈಯಕ್ತಿಕ ವಿಷಯಗಳೇ ಇರಬಹುದು. ನಾನೆಂದೂ ಚೌಕಟ್ಟು ಬಿಟ್ಟು ಹೋಗಿಲ್ಲ. ಯಾರೋ ಮಾಡುತ್ತಾರೆ ಎಂದು ನನ್ನತನವನ್ನು ಬಿಟ್ಟಿಲ್ಲ.

ಹಾಗಾಗಿ, ಇನ್ನೊಬ್ಬರನ್ನು ಅನುಕರಣೆ ಮಾಡುವ ಬುದ್ಧಿ ಬಿಟ್ಟು, ನಮ್ಮ ಅಗತ್ಯ, ಜೀವನಶೈಲಿಗೆ ಮತ್ತು ಹಿನ್ನೆಲೆಗೆ ತಕ್ಕ ಹಾಗೆ ಬದುಕಿದರೆ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇನ್ಯಾರನ್ನೋ ಸ್ಪೂರ್ತಿಯಾಗಿ ನೋಡುವುದರಲ್ಲಿ ತಪ್ಪಿಲ್ಲ. ಆದರೆ, ಅವರಂತೆಯೇ ಇರಬೇಕು, ಬದುಕಬೇಕು ಎಂಬ ಹಠ ಬೇಡ. ಅದಕ್ಕಾಗಿ ಕಷ್ಟಪಟ್ಟರೆ ಪರವಾಗಿಲ್ಲ. ಆದರೆ, ಯಾವತ್ತೂ ತಪ್ಪುದಾರಿ ತುಳಿಯಬಾರದು.

(ಲೇಖಕರು ಖ್ಯಾತ ನಟಿ)

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…