More

    ಶೆಡ್ ತೆರವಿಗೆ ಸ್ಥಳೀಯರ ಬೆಂಬಲ ಕರಿಯಮ್ಮನ ಅಗ್ರಹಾರದಲ್ಲಿ ಪಾಲಿಕೆ ಕಾರ್ಯಾಚರಣೆ, ಅಕ್ರಮ ನಿವಾಸಿಗಳ ಓಡಿಸಲು ಆಗ್ರಹ

    ಕೆ.ಆರ್.ಪುರ:  ಕರಿಯಮ್ಮನ ಅಗ್ರಹಾರ, ಕಾಡುಬೀಸನಹಳ್ಳಿ, ಬೆಳ್ಳಂದೂರು ಸುತ್ತಲಿನ ಶೆಡ್​ಗಳನ್ನು ತೆರವು ಮಾಡಿರುವ ಬಿಬಿಎಂಪಿ ಅಧಿಕಾರಿಗಳ ಕ್ರಮಕ್ಕೆ ಸ್ಥಳೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

    ಶೆಡ್​ಗಳಲ್ಲಿ ಸ್ಥಳೀಯರೂ ಇದ್ದಾರೆ. ಆದರೆ, ಅವರ ನಡುವೆ ಬಾಂಗ್ಲಾದ ಅಕ್ರಮ ವಲಸಿಗರೂ ಹೆಚ್ಚಾಗಿದ್ದಾರೆ. ಇವರನ್ನು ತೆರವುಗೊಳಿಸಿ. ಆದರೆ ಅದಕ್ಕೂ ಮೊದಲು ದಾಖಲೆಗಳನ್ನು ಪರಿಶೀಲಿಸಿ, ಸಾಕಷ್ಟು ಸಮಯಾವಕಾಶ ನೀಡಿ ತೆರವುಗೊಳಿಸಿದ್ದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಏಕಾಏಕಿ ಎಲ್ಲ ಶೆಡ್ ತೆರವುಗೊಳಿಸಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳ ಕ್ರಮ ಸಾಮಾಜಿಕ ಹೋರಾಟಗಾರರು ಹಾಗೂ ಸರ್ಕಾರದ ಕಣ್ಣು ಕೆಂಪಾಗಿಸಿದೆ. ಇದ್ದ ಒಂದು ಆಸರೆಯನ್ನು ಕಳೆದುಕೊಂಡು ಮಕ್ಕಳು ಹಾಗೂ ಮಹಿಳೆಯರು ಬೀದಿಗೆ ಬೀಳುವಂತೆ ಆಗಿರುವುದು ಇವರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಿಗರ ವಾಸಸ್ಥಳವೇ ಬೇರೆ: ಮಂತ್ರಿ ಎಸ್ಪಾ ಅಪಾರ್ಟ್​ವೆುಂಟ್​ನ ಪಕ್ಕದಲ್ಲಿರುವ ಬಯಲಲ್ಲಿ ಶೆಡ್​ಗಳಿರುವಲ್ಲಿ ಕನ್ನಡಿಗರು ವಾಸವಿಲ್ಲ.

    ಉತ್ತರ ಕರ್ನಾಟಕದ ಕೆಲವರು ಅಲ್ಲೇ ಪಕ್ಕದಲ್ಲಿರುವ ಯಲ್ಲಮ್ಮನ ದೇವಸ್ಥಾನದ ಪ್ರಾಂಗಣವನ್ನು ಆಶ್ರಯಿಸಿದ್ದಾರೆ. ಇವರು ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡಬಲ್ಲರು. ಇವರ ಬಳಿ ಎಲ್ಲ ದಾಖಲೆಗಳಿವೆ. ಮಂತ್ರಿ ಎಸ್ಪಾ ಅಪಾರ್ಟ್​ವೆುಂಟ್, ಬೆಳ್ಳಂದೂರು ಕೆರೆ ಆವರಣ, ಮುನೇಕೊಳಲುನಲ್ಲಿ ವಾಸವಿರುವವರು ಯಾರೂ ಕೂಡ ಕನ್ನಡದವರಲ್ಲ. ಇವರೆಲ್ಲರ ದಾಖಲೆಗಳನ್ನು ಪರಿಶೀಲಿಸಿ ತೆರವುಗೊಳಿಸಬೇಕು ಎಂದು ಸ್ಥಳೀಯರು ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಕತ್ತಲಾಗುತ್ತಲೇ ಬೇರೆ ಪ್ರಪಂಚ: ಶೆಡ್​ಗಳಲ್ಲಿ ವಾಸವಿರುವ ಬಹುತೇಕರು ಬೆಳಗಿನ ವೇಳೆ ಪ್ಲಾಸ್ಟಿಕ್ ಚಿಂದಿ ಆಯುವ ಕೆಲಸ ಮಾಡುತ್ತಾರೆ. ಇದೇ ಶೆಡ್​ಗಳಲ್ಲಿ ಒಂದೆರೆಡು ಗುಜರಿ ಅಂಗಡಿಗಳನ್ನು ನಿರ್ವಿುಸಿಕೊಂಡು ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಮಾರಾಟಕ್ಕೆ ಯೋಗ್ಯವಾಗದ ಪ್ಲಾಸ್ಟಿಕ್ ಸುಡುವ ಮೂಲಕ ವಾತಾವರಣ ಮಲಿನಗೊಳಿಸುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಇಲ್ಲಿ ಅಕ್ರಮ ಚಟುವಟಿಕೆಗಳ ಹೊಸ ಪ್ರಪಂಚ ತೆರೆದುಕೊಳ್ಳುತ್ತದೆ.

    ಬೀದಿದೀಪಗಳಿಲ್ಲದ ರಸ್ತೆಯಲ್ಲಿ ಕೆಲವರು ಗಾಂಜಾ, ಅಫೀಮಿನಂಥ ಮಾದಕದ್ರವ್ಯಗಳನ್ನು ಸೇವಿಸಿ ಎಲ್ಲೆಂದರಲ್ಲಿ ಬಿದ್ದಿರುತ್ತಾರೆ. ಕೆಲವು ಮಹಿಳೆಯರು ಕೆಲಸಕ್ಕೆ ತೆರಳದೆ ಅಕ್ರಮ ಚಟುವಟಿಕೆಗಳಿಗೆ ಇಳಿಯುತ್ತಾರೆ. ಇದನ್ನು ಹೀಗೆಯೇ ಬಿಟ್ಟರೆ, ನಮ್ಮ ಬೆಂಗಳೂರಿನ ವೈಭವ ಹಾಳಾಗುತ್ತದೆ. ಇವರೆಲ್ಲರನ್ನು ತಕ್ಷಣವೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮಾಡುವುದಾಗಿ ಮಹದೇವಪುರ ಹಿತರಕ್ಷಣಾ ಸಮಿತಿ ಸದಸ್ಯ ಎಂ. ರಘು ಎಚ್ಚರಿಕೆ ನೀಡಿದ್ದಾರೆ.

    ಅನಧಿಕೃತ ನೀರು, ವಿದ್ಯುತ್ ಸೌಲಭ್ಯ

    ಶೆಡ್ ನಿವಾಸಿಗಳು ಅಕ್ರಮ ನೀರು ಹಾಗೂ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಇವರು ಮೂರು ದಿನಕ್ಕೊಮ್ಮೆ ಬರುವ ನೀರನ್ನು ಡ್ರಮ್ಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಶೌಚಗೃಹಗಳೇ ಇಲ್ಲದಿರುವುದರಿಂದ ಬಯಲಲ್ಲೇ ಶೌಚಕಾರ್ಯ ಪೂರೈಸುತ್ತಾರೆ. ಹಾವು, ಚೇಳುಗಳ ಮಧ್ಯೆ ಜೀವನ ಮಾಡುತ್ತಿದ್ದಾರೆ. ಈಗಾಗಲೆ ಪಾಲಿಕೆ ಆರಂಭಿಸಿರುವ ತೆರವು ಕಾರ್ಯಾಚರಣೆಗೆ ಬೆದರಿ ಅರ್ಧದಷ್ಟು ಅಕ್ರಮ ನಿವಾಸಿಗಳು ಪಲಾಯನ ಮಾಡಿದ್ದಾರೆ. ಉಳಿದವರನ್ನೂ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

    ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ 

    ಕಳೆದ ಮೂರ್ನಾಲ್ಕು ದಿನಗಳಿಂದ ಇಲ್ಲಿನ ಕೆಲ ನಿವಾಸಿಗಳನ್ನು ತೆರವುಗೊಳಿ ಸಿದ್ದರೂ ಇನ್ನೂ ನೂರಾರು ಶೆಡ್​ಗಳು ಸ್ಥಳದಲ್ಲಿ ಇವೆ. ತೆರವು ಕಾರ್ಯಾ ಚರಣೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಜನರು ಇಲ್ಲಿ ವಾಸವಾಗಿದ್ದಾರೆ. ಜನವಾಸಕ್ಕೆ ಸ್ಥಳ ಯೋಗ್ಯವಾಗಿಲ್ಲದಿದ್ದರೂ ಹಣದಾಸೆಗಾಗಿ ಭೂಮಿ ಮಾಲೀಕರು ಶೆಡ್​ಗಳನ್ನು ನಿರ್ವಿುಸಿ ಬಾಡಿಗೆಗೆ ಕೊಟ್ಟಿದ್ದಾರೆ. ಇಂಥ ಜನರಿಂದ ತೊಂದರೆಯಾಗುತ್ತದೆ ಎಂಬ ಅರಿವಿಲ್ಲದೆ ಅವರು ಹಣದಾಸೆಗಾಗಿ ಹೀಗೆ ಮಾಡಿದ್ದಾರೆ. ಆದ್ದರಿಂದ, ಮೊದಲು ಭೂಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹದೇವಪುರ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯ ಸುನಿಲ್ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts