More

    ಅಂದು ಸೂರಿಲ್ಲದಾಕೆ ಇಂದು ಆಶ್ರಯದಾತೆ

    20 ವರ್ಷ ತುಂಬುವುದರೊಳಗೇ ವಿಧವೆಯಾಗಿ ಎರಡು ಮಕ್ಕಳನ್ನು ಮಡಿಲಲ್ಲಿ ತುಂಬಿಸಿಕೊಂಡ ಯುವತಿಯೊಬ್ಬಳು ಇಂದು ಇಡೀ ಜಗತ್ತು ತನ್ನತ್ತ ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿದ್ದಾಳೆ. ಮಕ್ಕಳನ್ನು ಕಟ್ಟಿಕೊಂಡೇ ಹಲವಾರು ಡಿಗ್ರಿಗಳನ್ನು ಪಡೆದದ್ದು ಮಾತ್ರವಲ್ಲದೇ, ಸಾವಿರಾರು ದೀನ ದಲಿತರ ಬಾಳಿನ ‘ದೇವತೆ’ಯೂ ಆಗಿದ್ದಾರೆ. ಪ್ರತಿಷ್ಠಿತ ‘ನೀರಜಾ ಭಾನೋಟ್’ ಪ್ರಶಸ್ತಿ ಪಡೆದುಕೊಂಡಿರುವ ಕೇರಳದ ಸೈಫಿಯಾ ಹನೀಫ್ ಅವರ ಬದುಕಿನ ಕಥನವಿದು…

     

    ಒಂದೂವರೆ ದಶಕದ ಹಿಂದಿನ ಮಾತು. ಕೇರಳದ ಪಾಲಕ್ಕಾಡ್​ನ ವಡಕ್ಕನ್​ಚೇರಿಯ ಸೈಫಿಯಾ ಹನೀಫ್​ಗೆ ಆಗಿನ್ನೂ 15 ವರ್ಷ. ಮನಸ್ಸಿನಲ್ಲಿ ಓದಬೇಕೆಂಬ ಕನಸು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಂಬಲ. ಆದರೆ ಹೆಣ್ಣುಮಗಳು ಕಲಿತು ಮಾಡುವುದೇನಿದೆ? ಎಂದ ಆಕೆಯ ಪಾಲಕರು ಆ ಬಾಲಕಿಗೆ ಮದುವೆ ಮಾಡಿಬಿಟ್ಟರು.

    ಬದುಕು ಏನು ಎಂದು ಅರಿಯುವ ಮೊದಲೇ 2-3 ವರ್ಷಗಳಲ್ಲಿ ಮಡಿಲಲ್ಲಿ ಎರಡು ಮಕ್ಕಳು! ಈ ಮುಗ್ಧ ಬಾಲಕಿ ಮಕ್ಕಳನ್ನು ಹೇಗೆ ನೋಡಿಕೊಳ್ಳುವುದಪ್ಪ ಎಂಬ ಚಿಂತೆಯಲ್ಲಿ ಇದ್ದಾಗಲೇ ಆಕೆಯ ಬದುಕಿಗೆ ಬಡಿದಿತ್ತು ಇನ್ನೊಂದು ಬರಸಿಡಿಲು. ಗಂಡ ಅಪಘಾತವೊಂದರಲ್ಲಿ ಸಾವನ್ನಪ್ಪಿದ. ಆಗಿನ್ನೂ ಈಕೆಗೆ 20 ವರ್ಷವೂ ತುಂಬಿರಲಿಲ್ಲ. ಸುತ್ತಲೂ ಕತ್ತಲು, ಭವಿಷ್ಯದ ಬಗ್ಗೆ ತಿಳಿದಿಲ್ಲ. ಎರಡು ಪುಟ್ಟ ಕಂದಮ್ಮಗಳು. ಏನು ಮಾಡುವುದು ಎಂದೇ ಸೈಫಿಯಾಗೆ ತಿಳಿಯಲಿಲ್ಲ.

    ಹಾಗೆಂದು ಆಕೆ ಅಳುತ್ತ ಕುಳಿತುಕೊಳ್ಳಲಿಲ್ಲ. ಬದುಕೇ ಬೇಡ ಎಂದು ಒಂದು ಸಂದರ್ಭದಲ್ಲಿ ಯೋಚಿಸಿದರೂ, ಇಂಥ ಯೋಚನೆ ಮಾಡುತ್ತಿರುವ ತಾನೆಂಥ ಹೇಡಿ ಎಂದು ಎಣಿಸಿ, ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದುಕೊಂಡಿದ್ದ ಅದಮ್ಯ ಬಯಕೆಗೆ ಜೀವ ತುಂಬಿದಳು.

    ವರ್ಷಗಳು ಉರುಳಿದವು. ಇನ್ನೊಂದು ಮದುವೆಯಾಗುವಂತೆ ಪಾಲಕರು ಒತ್ತಾಯಿಸಿದರು. ಆದರೆ ಅದ್ಯಾವುದೂ ಸೈಫಿಯಾಗೆ ಬೇಕಾಗಿರಲಿಲ್ಲ. ತನ್ನ ಗುರಿಯೊಂದೇ ಆ ಕ್ಷಣದಲ್ಲಿ ಅವಳಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದರೆ ಅದು ಶಿಕ್ಷಣವೊಂದರಿಂದಲೇ ಸಾಧ್ಯ ಎಂದು ಅರಿತ ಆಕೆ, ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದಳು. ದೂರಶಿಕ್ಷಣವನ್ನೂ ಪಡೆದಳು. ಇಷ್ಟೇ ಆಗಿದ್ದರೆ 30 ವರ್ಷದ ಸೈಫಿಯಾ ಅವರನ್ನು ಜಗತ್ತು ಬೆರಗುಗಣ್ಣುಗಳಿಂದ ನೋಡುತ್ತಿರಲಿಲ್ಲ. ಜೀವನದಲ್ಲಿ ಸಹಿಸಬಾರದ ಕಷ್ಟ ಸಹಿಸಿಕೊಂಡು, ಎಲ್ಲವನ್ನೂ ಮೆಟ್ಟಿನಿಂತು ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ತಾಯಂದಿರಿಗೆ, ಹಿರಿಯರಿಗೆ, ತೊಂದರೆ ಅನುಭವಿಸುತ್ತಿರುವ ವಿಧವೆಯರು ಮತ್ತು ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಲು ಚಾರಿಬಟಲ್ ಟ್ರಸ್ಟ್ ಕಟ್ಟಿ ಸಹಸ್ರಾರು ಮಂದಿಗೆ ಆಶ್ರಯ ನೀಡುತ್ತಿರುವ, 300ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ, ಬಟ್ಟೆ ಮತ್ತು ಔಷಧಿಗಳನ್ನು ಒದಗಿಸುವ ಈ ‘ಮಹಾತಾಯಿ’ ಈಚೆಗೆ ಪ್ರತಿಷ್ಠಿತ ‘ನೀರಜಾ ಭಾನೋಟ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಂದೂವರೆ ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತ ಪಡೆದಿರುವ ಸೈಫಿಯಾ ಸಂಪೂರ್ಣ ಹಣವನ್ನು ದೀನ ದಲಿತರಿಗಾಗಿ ಮೀಸಲಿಟ್ಟಿದ್ದಾರೆ.

    ರೈಲ್ವೆ ನಿಲ್ದಾಣವೇ ಆಸರೆ: ಎಲ್ಲಿಯೋ ಇದ್ದ ಬಾಲೆಯೊಬ್ಬಳು ಇಂದು ಇಷ್ಟು ಉನ್ನತ ಸ್ಥಾನಕ್ಕೆ ಏರುವಂತಾಗಿರುವ ಹಿಂದೆ ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದನ್ನು ಅವರ ಬಾಯಿಯಿಂದಲೇ ಕೇಳಬೇಕು. ‘ನನ್ನ ತಂದೆ ಸೌದಿ ಅರೇಬಿಯಾದಲ್ಲಿ ನೌಕರಿ ಮಾಡುತ್ತಿದ್ದರು. ಮನೆಗೆ ಬರುವುದು ತುಂಬಾ ವಿರಳವಾಗಿತ್ತು. ಮಕ್ಕಳನ್ನೆಲ್ಲಾ ನೋಡಿಕೊಳ್ಳುವ ಜವಾಬ್ದಾರಿ ತಾಯಿಯ ಮೇಲೆ ಇತ್ತು. ನಾನು 10ನೇ ತರಗತಿಯಲ್ಲಿದ್ದಾಗ, ಎಷ್ಟು ಗೋಗರೆದರೂ ಕೇಳದೇ ಮದುವೆ ಮಾಡಿಬಿಟ್ಟರು. ಹಾಗೆ ನೋಡಿದರೆ ನನ್ನಂಥ ಎಷ್ಟೋ ಬಾಲಕಿಯರು ಪ್ರೌಢಶಾಲೆ ಹತ್ತುವ ಮೊದಲೇ ಮದುವೆಯೆಂಬ ಬಂಧನಕ್ಕೆ ಸಿಲುಕಿ ಬಿಟ್ಟಿದ್ದರು.

    ನನ್ನ ಗಂಡನನ್ನು ಕಳೆದುಕೊಂಡಾಗ ಪಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇತ್ತು. ಬೆಂಗಳೂರಿನಲ್ಲಿ ನನ್ನ ಕೆಲ ಪರಿಚಯದವರು ಇದ್ದರು. ತಾವು ಸಹಾಯ ಮಾಡುತ್ತೇವೆ ಎಂದು ಹೇಳಿದ್ದರು. ಅವರನ್ನು ನಂಬಿ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿಗೆ ಬಂದಾಗ, ಯಾರೂ ನೆರವಾಗಲಿಲ್ಲ. ಉಳಿಯಲು ಜಾಗವೂ ಸಿಗಲಿಲ್ಲ. ಎರಡು ರಾತ್ರಿ ರೈಲ್ವೆ ನಿಲ್ದಾಣದಲ್ಲಿ ಕಳೆದೆ. ಕಿರಿಯ ಮಗನಿಗೆ ಆಗ ಒಂದು ವರ್ಷವಷ್ಟೇ. ಜ್ವರದಿಂದ ಬಳಲುತ್ತಿದ್ದ. ಇಬ್ಬರಿಗೂ ಸಾವು ಬರಬಾರದೇ ಎನ್ನಿಸಿದ್ದು ನಿಜ. ಆದರೆ ಧೈರ್ಯವನ್ನು ತಂದುಕೊಂಡೆ. ನನ್ನ ಪುಣ್ಯ. ಮಹಿಳೆಯೊಬ್ಬರು ನನ್ನನ್ನು ನೋಡಿದರು, ಮಾತ್ರವಲ್ಲದೇ ಮನೆಗೆ ಕರೆದುಕೊಂಡು ಹೋಗಿ ಆಹಾರ ಕೊಟ್ಟು ಆಶ್ರಯವನ್ನೂ ನೀಡಿದರು. ಅಂದು ಅವರು ಬರದೇ ಹೋಗಿದ್ದರೆ ನಾನು ಎಲ್ಲಿರುತ್ತಿದ್ದೇನೋ ಗೊತ್ತಿಲ್ಲ’.

    ವಾಪಸ್ ತವರಿಗೆ ವಾಪಸಾದ ಸೈಫಿಯಾ ಕೇರಳದ ಕಾಲ್ ಸೆಂಟರ್ ಒಂದರಲ್ಲಿ ಕೆಲಸಕ್ಕೆ ಶೆಇಕೊಂಡರು. ಅದೇ ಸಮಯದಲ್ಲಿ ದೂರಶಿಕ್ಷಣದ ಮೂಲಕ ಪಿಯುಸಿಯನ್ನೂ ಮುಗಿಸಿದರು. ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್, ಎಂಎಸ್​ಡಬ್ಲ್ಯು ಪದವಿ ಪೂರೈಸಿದರು. ಕಾಲ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಲೇ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೂ ಹಣ ಹೊಂದಿಸಿದರು. ಅವರ ಸಂಬಳ ಸಾಕಾಗದಿದ್ದಾಗ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿದರು. ಜತೆಗೆ ಮಕ್ಕಳಿಗೆ ಟ್ಯೂಷನ್ ಮಾಡಿದರು. ಇಂಥ ದಿಟ್ಟ ವನಿತೆ ಇಂದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಏನಿದು ಪ್ರಶಸ್ತಿ?: ಗಗನಸಖಿಯಾಗಿದ್ದ ನೀರಜಾ ಭಾನೋಟ್ ವಿಮಾನಯಾನದ ಇತಿಹಾಸದಲ್ಲಿ ಒಂದು ಮರೆಯಲಾರದ ತಾರೆ. 300ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿಸಿ, 24ನೇ ವಯಸ್ಸಿನಲ್ಲಿಯೇ ತಮ್ಮ ಪ್ರಾಣವನ್ನು ಬಲಿದಾನ ಮಾಡಿದವರು ಇವರು. ಪ್ಯಾನ್ ಅಮೆರಿಕನ್ ಕ್ಲಿಪ್ಪರ್-73 ವಿಮಾನದ ಗಗನ ಸಖಿಯರ ಮುಖ್ಯಸ್ಥೆಯಾಗಿದ್ದ ನೀರಜಾ ಅವರು ಪ್ರಯಾಣಿಸುತ್ತಿದ್ದ ವಿಮಾನ ಹೈಜಾಕ್ ಮಾಡಲಾಗಿತ್ತು. ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಬಂಧಿತವಾಗಿದ್ದ ನೀರಜಾರವರ ಹಣೆಗೆ ಗುಂಡಿಟ್ಟು ನಿಂತಿದ್ದರು ನಾಲ್ವರು ಭಯೋತ್ಪಾದಕರು. ನೀರಜಾ ಮನಸ್ಸು ಮಾಡಿದ್ದರೆ ಸುಲಭದಲ್ಲಿ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಬಹುದಿಲ್ಲ. ಆದರೆ ಅವರು ಹಾಗೆ ಮಾಡಲಿಲ್ಲ. ವಿಮಾನದಲ್ಲಿದ್ದ 300 ಕ್ಕೂ ಅಧಿಕಮಂದಿ ಪ್ರಯಾಣಿಕರ ಜೀವವನ್ನು ಉಳಿಸಿ, ತಾವು ಭಯೋತ್ಪಾದಕರ ಗುಂಡಿಗೆ ಆಹುತಿಯಾದರು. ಇದು ನಡೆದದ್ದು 1986ರ ಸೆಪ್ಟೆಂಬರ್​ನಲ್ಲಿ. ಅವರ ನೆನಪಿಗಾಗಿ ಅಪರೂಪದ ಸಾಧನೆ ಮಾಡಿದ ವನಿತೆಯರಿಗೆ ಪ್ರತಿವರ್ಷವೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

    ಕಷ್ಟದಲ್ಲಿರುವವರಿಗೆ ನೆರವಾಗುವ ಚಿಥಾಲ್

    2015ರಲ್ಲಿ ಚಿಥಾಲ್ ಎಂಬ ಸ್ವಯಂ ಸೇವಾ ಸಂಸ್ಥೆಯೊಂದನ್ನು ಹುಟ್ಟುಹಾಕಿ ರುವ ಸೈಥಲ್ ಊರೂರು ಅಲೆದು ಹಲವಾರು ವಿಧವೆಯರನ್ನು ಭೇಟಿಯಾಗಿ, ಅವರ ಜೀವನಕ್ಕೆ ಆಧಾರವಾಗಿದ್ದಾರೆ. ಆರಂಭದಲ್ಲಿ ತಮ್ಮ ಸಂಬಳದಲ್ಲಿಯೇ ಸ್ವಲ್ಪ ಹಣವನ್ನು ಅಗತ್ಯ ಇರುವವರಿಗೆ ನೀಡಿದರು. ನಂತರ ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯರಿಗೆ, ಮಕ್ಕಳಿಗೆ, ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಲು ಆರಂಭಿಸಿದರು. ‘ಚಿಥಾಲ್ ಎಂದರೆ ಮಲಯಾಳ ಭಾಷೆಯಲ್ಲಿ ಗೆದ್ದಲು ಹುಳು. ಗೆದ್ದಲು ಯಾರಿಗೂ ತಿಳಿಯದಂತೆ ಎಲ್ಲವನ್ನೂ ತಿನ್ನುತ್ತದೆ. ಅದೇ ರೀತಿ ನಾನು ಯಾರಿಗೂ ತಿಳಿಯದಂತೆ ಎಲ್ಲರ ಕಷ್ಟಗಳನ್ನು ತಿನ್ನಲು ಬಯಸಿದ್ದೇನೆ. ಗೆದ್ದಲು ಬಂದಾಗ ಅಸಡ್ಡೆ ತೋರಿ ಇಷ್ಟು ಸಣ್ಣ ಹುಳು ಅದೇನು ಮಾಡತ್ತೆ ಬಿಡು ಎನ್ನುತ್ತಾರೆ. ಆದರೆ ಅದು ತನ್ನ ಕೆಲಸವನ್ನು ಸಲೀಸಾಗಿ ಮುಗಿಸಿ ಹೋಗುತ್ತದೆ. ಇದು ನಕಾರಾತ್ಮಕ ಎನಿಸಬಹುದು. ಆದರೆ ನನ್ನನ್ನು ಸಕಾರಾತ್ಮಕ ಕಾರ್ಯ. ಇಷ್ಟು ಚಿಕ್ಕವಳು ಏನು ಮಾಡಲು ಸಾಧ್ಯ ಎಂದು ಎಲ್ಲರೂ ಅಂದು ಕೊಂಡಾಗಲೇ ನಾನು ಸದ್ದಿಲ್ಲದೇ ಕಷ್ಟದಲ್ಲಿ ಇರುವವರ ಜೀವನಕ್ಕೆ ನೆರವಾಗಲು ಬಯಸಿರುವ ಕಾರಣಕ್ಕೆ ಈ ಹೆಸರು ಇಟ್ಟಿದ್ದೇನೆ’ ಎನ್ನುತ್ತಾರೆ ಸೈಥಲ್.

    ಸುಚೇತನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts