ಕಿರುಉದ್ಯಮದಿಂದ ಸ್ವಾವಲಂಬಿ

| ವೃಷಾಂಕ್ ಖಾಡಿಲ್ಕರ್

ಶ್ಯಾವಿಗೆಯ ಪ್ರತಿ ಎಳೆಗಳನ್ನೂ ಮಕ್ಕಳು ಬೆರಗಿನಿಂದ ಬಿಡಿಸಿ ತಿನ್ನುತ್ತಾರೆ. ಶ್ಯಾವಿಗೆ ತಿನ್ನುವಾಗಲೆಲ್ಲ ಇದನ್ನು ಎಲ್ಲಿ, ಹೇಗೆ ತಯಾರಿಸುತ್ತಾರೆ ಎನ್ನುವ ಕುತೂಹಲ ಸಹಜ. ಇಂಥ ಶ್ಯಾವಿಗೆ ತಯಾರಿಸುವ ಕಿರುಉದ್ಯಮ ಘಟಕ ಸ್ಥಾಪಿಸಿಕೊಂಡು ಯಶಸ್ವಿಯಾದವರು ಸುನೀತಾ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸವಳಂಗ ಗ್ರಾಮದ ಸುರಹೊನ್ನೆ ಪ್ರದೇಶದ ಹೆಚ್ಚಿನ ಕಡೆಗಳಲ್ಲಿ ಶ್ಯಾವಿಗೆ ತಯಾರಿ ಯಂತ್ರಗಳ ಸದ್ದು ಕೇಳಿ ಬರುತ್ತದೆ, ಅಷ್ಟರಮಟ್ಟಿಗೆ ಇಲ್ಲಿ ಶ್ಯಾವಿಗೆ ತಯಾರಿಸುವ ಘಟಕಗಳಿವೆ. ಸುರಹೊನ್ನೆಯ ಶ್ಯಾವಿಗೆ ರಾಜ್ಯದೆಲ್ಲೆಡೆ ಹೆಸರುವಾಸಿ. ಶ್ಯಾವಿಗೆಯನ್ನು ಬಟ್ಟೆಯಂತೆ ಒಣಗಲು ಹಾಕಿರುವ ದೃಶ್ಯ ಇಲ್ಲಿ ಸಾಮಾನ್ಯ. ಇಲ್ಲಿನ ಘಟಕವೊಂದರ ಒಡತಿ ಸುನೀತಾ. ಮಾರ್ಗದರ್ಶನ ಮತ್ತು ಆರ್ಥಿಕ ಸಹಕಾರ ಸಿಕ್ಕರೆ ಯಾವುದೇ ಕೆಲಸಗಳನ್ನು ಮಹಿಳೆ ಯಶಸ್ವಿಯಾಗಿ ಮಾಡಿ ಇತರರಿಗೆ ಮಾದರಿಯಾಗಬಲ್ಲಳು ಎಂಬುದಕ್ಕೆ ಸುನೀತಾ ಉದಾಹರಣೆ.

ಬದುಕಿಗೆ ಆಧಾರ: ಹಿಂದೆ ಹತ್ತಾರು ಕೆಲಸಗಳನ್ನು ಮಾಡಿಕೊಂಡಿದ್ದ ಸುನೀತಾ, ಪ್ರಸ್ತುತ ಶ್ಯಾವಿಗೆ ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಶ್ಯಾವಿಗೆ ಘಟಕವೊಂದರಲ್ಲಿ ದಿನಗೂಲಿಯಾಗಿ ಹದಿನಾಲ್ಕು ವರ್ಷ ಕೆಲಸ ಮಾಡಿದ್ದರು. ಅಲ್ಲಿ ಎಷ್ಟು ದುಡಿದರೂ ಹೆಚ್ಚೇನೂ ಸಂಪಾದನೆಯಾಗುತ್ತಿರಲಿಲ್ಲ. ಹೀಗಾಗಿ ತಾವೂ ಸ್ವಂತ ಘಟಕ ಸ್ಥಾಪಿಸಬೇಕೆಂದು ನಿರ್ಧರಿಸಿ, ಮನೆಯ ಸುತ್ತಮುತ್ತಲಿನ ಅನೇಕ ಮಹಿಳೆಯರಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸೇರಿಕೊಂಡರು. ಅಲ್ಲಿ ಮಾರ್ಗದರ್ಶನ, ಸ್ವಉದ್ಯೋಗ ತರಬೇತಿ ಪಡೆದು ಕಳೆದ ಎರಡು ವರ್ಷಗಳಿಂದ ಬಾಡಿಗೆ ಕೊಠಡಿಯಲ್ಲಿ ಸ್ವಂತ ಘಟಕವನ್ನು ನಡೆಸುತ್ತಿದ್ದಾರೆ.

ತಯಾರಿ ಹೇಗೆ?: ಡಿಸೆಂಬರ್​ನಿಂದ ಮೇ ತಿಂಗಳು ಶ್ಯಾವಿಗೆ ತಯಾರಿಸುವ ಸೀಸನ್. ಶ್ಯಾವಿಗೆ ತಯಾರಿಸಲು ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚದ ಎರಡು ವಿದ್ಯುತ್​ಚಾಲಿತ ಯಂತ್ರಗಳನ್ನು ಖರೀದಿಸಿದ್ದಾರೆ. ಹಿಟ್ಟು ಕಲಸಲು ಮತ್ತು ತಯಾರಿಗೆ ಬೇಕಾದ ಚಿರೋಟಿ ರವೆಯನ್ನು ಮಹಾರಾಷ್ಟ್ರದ ಪೂನಾದಿಂದ ವಾರಕ್ಕೊಮ್ಮೆ ತರಿಸುತ್ತಾರೆ. ತಯಾರಿಗೆ ತಂಪಾದ ವಾತಾವರಣವಿರಬೇಕು. ರಾತ್ರಿ 7 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಮೂರು ಮಂದಿ ಶ್ಯಾವಿಗೆ ತಯಾರಿಸುತ್ತಾರೆ. ‘50 ಕೆ.ಜಿ. ರವೆ ಹುಡಿಯ ಚೀಲದಲ್ಲಿ 47 ಕೆ.ಜಿ.ಯಷ್ಟು ಶ್ಯಾವಿಗೆ ತಯಾರಿಸಬಹುದು. ಒಂದು ರಾತ್ರಿ ಇಡೀ ಕೆಲಸ ಮಾಡಿದರೆ ಹತ್ತು ಕ್ವಿಂಟಾಲ್​ವರೆಗೆ ಶ್ಯಾವಿಗೆ ತಯಾರಿಸಬಹುದು’ ಎಂಬುದು ಸುನೀತಾರ ಅನುಭವ. ನಂತರದ್ದು ಶ್ಯಾವಿಗೆ ಒಣಗಿಸುವ ಕೆಲಸ. ಶ್ಯಾವಿಗೆ ಮಾಡಿ ಸುಮಾರು 12 ಗಂಟೆಗಳ ಕಾಲ ಒಣಗಿಸಬೇಕಾಗುತ್ತದೆ. ಶ್ಯಾವಿಗೆಗಳನ್ನು ಕಟ್ಟುವ ಕೆಲಸ ಹಗಲು ಹೊತ್ತಿನಲ್ಲಿ ನಡೆಯುತ್ತದೆ.

ವ್ಯರ್ಥ ಶ್ಯಾವಿಗೆಗೂ ಬೇಡಿಕೆ

ಒಣಗಿಸುವ ವೇಳೆ ಶ್ಯಾವಿಗೆ ತುಂಡಾಗಿ, ಬೀಳುವುದು ಸಾಮಾನ್ಯ. ಇದು ವ್ಯರ್ಥವಲ್ಲ. ಪ್ರಾಣಿಗಳಿಗೆ ತಿನಿಸಾಗಿ ನೀಡಬಹುದು. ಹೈನುಗಾರರು, ಮೀನು ಸಾಕಣೆ ಮಾಡುವವರು, ಕೋಳಿ ಸಾಕುವವರು ಇದನ್ನು ಖರೀದಿಸುತ್ತಾರೆ. ಎರಡು, ಮೂರು ವರ್ಷಗಳ ಕಾಲ ಶ್ಯಾವಿಗೆ ಕೆಡುವುದಿಲ್ಲ. ಗ್ರಾಹಕರು ಘಟಕಕ್ಕೆ ಬಂದು ಖರೀದಿಸುತ್ತಾರೆ. ಇವರು ಹುಬ್ಬಳ್ಳಿ, ಗದಗ, ಹಾವೇರಿ, ಬಳ್ಳಾರಿ ಮೊದಲಾದ ಜಿಲ್ಲೆಗಳಿಗೆ ಮಾರಾಟ ಮಾಡುತ್ತಾರೆ. ಮನೆಯಲ್ಲಿದ್ದುಕೊಂಡೇ ತಿಂಗಳಿಗೆ ಸುಮಾರು 25 ಸಾವಿರ ರೂಪಾಯಿ ಆದಾಯ ಗಳಿಸುತ್ತಾರೆ.