ಮೋದಿ ಹವಾಕ್ಕೆ ಷೇರು ಪೇಟೆಯಲ್ಲಿ ಭಾರಿ ಜಿಗಿತ: ಅಲ್ಪಕಾಲದ ಬೆಳವಣಿಗೆ ಎಂದು ಆರ್ಥಿಕ ತಜ್ಞರ ಎಚ್ಚರಿಕೆ

ನವದೆಹಲಿ: ಭಾನುವಾರ ಪ್ರಕಟವಾದ ಮತದಾನೋತ್ತರ ಸಮೀಕ್ಷೆ ಷೇರು ಮಾರುಕಟ್ಟೆ ಮೇಲೂ ಪ್ರಭಾವ ಬೀರಿದ್ದು, ಸೆನ್ಸೆಕ್ಸ್ 1,421. 90 ಅಂಕ ಏರಿಕೆಯೊಂದಿಗೆ 39,352.67ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿಯಲ್ಲಿ 421.10 ಪಾಯಿಂಟ್ ಏರಿಕೆಯಾಗಿದ್ದು, 11,828.25ಕ್ಕೆ ದಿನದ ವಹಿವಾಟು ಮುಗಿದಿದೆ.

ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸರ್ಕಾರ ಸರಳ ಬಹುಮತಕ್ಕೂ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಈ ತೇಜಿ ಕಂಡಿದೆ.

ಬ್ಯಾಂಕಿಂಗ್, ಹೌಸಿಂಗ್ ಫೈನಾನ್ಸ್, ಆಟೋಮೊಬೈಲ್ ವಲಯದ ಷೇರುಗಳು ಏರುಗತಿ ಕಂಡಿವೆ. ಕೆಲವು ಔಷಧ ತಯಾರಿಕಾ ಕಂಪನಿ, ಎಂಟರ್​ಟೈನ್​ವೆುಂಟ್, ಐಟಿ ಕಂಪನಿಗಳ ಷೇರು ಮೌಲ್ಯ ಇಳಿಕೆಯಾಗಿದೆ.

ತಜ್ಞರು ಏನು ಹೇಳುತ್ತಾರೆ?: ಷೇರು ಮಾರುಕಟ್ಟೆ ಈ ಬೆಳವಣಿಗೆ ಅಲ್ಪಕಾಲಕ್ಕೆ ಸೀಮಿತ, ಗುರುವಾರ ಚುನಾವಣಾ ಫಲಿತಾಂಶ ಹೊರಬಿದ್ದಾಗ ಏರಿಕೆ ಓಟಕ್ಕೆ ತಡೆ ಬೀಳಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಸ್ಥಿರ ಸರ್ಕಾರ ಬಂದಲ್ಲಿ ಷೇರು ಮಾರುಕಟ್ಟೆಯ ಏರಿಕೆ ಮುಂದುವರಿಯಲಿದೆ ಎಂಬ ಅಭಿಪ್ರಾಯವನ್ನೂ ಹಲವು ತಜ್ಞರು ವ್ಯಕ್ತಪಡಿಸಿದ್ದಾರೆ.

ರೂಪಾಯಿ ಮೌಲ್ಯ ಏರಿಕೆ: ಮತದಾನೋತ್ತರ ಸಮೀಕ್ಷೆ ಪ್ರಭಾವದ ಕಾರಣ ಸೋಮವಾರ ರೂಪಾಯಿ ಮೌಲ್ಯ ಡಾಲರ್ ಎದುರು 79 ಪೈಸೆ ಏರಿಕೆ ಕಂಡು ಒಂದು ಡಾಲರ್​ಗೆ 69.36 ರೂ. ವರೆಗೂ ತಲುಪಿತ್ತು. ದಿನ ಅಂತ್ಯಕ್ಕೆ ರೂಪಾಯಿ 49 ಪೈಸೆ ಏರಿಕೆಯಾಗಿ ಡಾಲರ್​ಗೆ 69.74 ರೂ.ಕ್ಕೆ ಸ್ಥಿರಗೊಂಡಿತು. ಮುಂದಿನ ದಿನಗಳಲ್ಲೂ ರೂಪಾಯಿ ಮೌಲ್ಯ ವೃದ್ಧಿಸಲಿದ್ದು, ಡಾಲರ್ 68 ರೂ. ಅಸುಪಾಸಿನಲ್ಲಿರುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಇನ್ನೊಂದೆಡೆ ಕಚ್ಚಾತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ತೈಲ ಬೆಲೆ ಶೇ.1.48ರಷ್ಟು ಏರಿಕೆಯಾಗಿ ಪ್ರತಿ ಬ್ಯಾರಲ್​ಗೆ 73.28 ಡಾಲರ್ ಆಗಿದೆ.

ಹೂಡಿಕೆದಾರರ ಆಸ್ತಿ 5.33 ಲಕ್ಷ ಕೋಟಿ ರೂ. ಏರಿಕೆ: ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.3ರಷ್ಟು ಏರಿಕೆ ದಾಖಲಿಸಿದ್ದರಿಂದ ಹೂಡಿಕೆದಾರರ ಸಂಪತ್ತು 5.33 ಲಕ್ಷ ಕೋಟಿ ರೂ. ಗೆ ಏರಿಕೆಯಾಗಿದೆ. ಬಿಎಸ್​ಇ 151.86 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

ಅಗ್ಗವಾಯ್ತು ಚಿನ್ನ: ಸೋಮವಾರ ಚಿನ್ನದ ಬೆಲೆ 150 ರೂ. ಇಳಿಕೆಯೊಂದಿಗೆ 10 ಗ್ರಾಂಗೆ 32,720 ರೂ.ಗೆ ಸ್ಥಿರವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ, ಸ್ಥಳೀಯ ವ್ಯಾಪಾರಿಗಳಿಂದ ಬೇಡಿಕೆ ತಗ್ಗಿದ ಪರಿಣಾಮ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯೂ 250 ರೂ. ಕಡಿಮೆಯಾಗಿ ಕೆಜಿಗೆ 37,350 ರೂ. ಆಗಿದೆ.

16 ವರ್ಷ ಬಳಿಕ ಏರಿಕೆ

ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ 1,482 ಅಂಕಗಳ ಏರಿಕೆಯೊಂದಿಗೆ 39,412.56ಕ್ಕೆ ಏರಿಕೆ ಕಂಡಿತ್ತಾದರೂ ದಿನದಂತ್ಯಕ್ಕೆ 1,421.90ಕ್ಕೆ ಸ್ಥಿರಗೊಂಡಿತು. 2013ರ ಸೆ.10ರ ನಂತರದಲ್ಲಿ ಮೊದಲ ಬಾರಿ ಒಂದೇ ದಿನದಲ್ಲಿ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಇಷ್ಟು ಪ್ರಮಾಣದ ಏರಿಕೆ ದಾಖಲಾಗಿದೆ.

ದಶಕದ ದೊಡ್ಡ ಜಿಗಿತ

ನಿಫ್ಟಿ 438 ಅಂಕಗಳ ಏರಿಕೆಯೊಂದಿಗೆ 11, 845.20ವರೆಗೆ ಏರಿಕೆ ಕಂಡಿತ್ತಾದರೂ 421.10 ಅಂಕಗಳ ಏರಿಕೆಯೊಂದಿಗೆ 11,828.25ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಇದು ದಶಕದಲ್ಲೇ ನಿಫ್ಟಿ ಇಷ್ಟು ದೊಡ್ಡ ಮಟ್ಟದ ಜಿಗಿತ ಕಂಡಿದೆ.