ಆರ್ತರ ಪೊರೆಯುವ ದುರ್ಗಾಂಬೆ

| ವಿಶ್ವಾಸ್ ಎಸ್. ಭಟ್ ಶೃಂಗೇರಿ

ಶೃಂಗೇರಿ ಶಾರದಾಪೀಠದ ದಕ್ಷಿಣದಿಕ್ಕಿನಲ್ಲಿರುವುದೇ ವಿದ್ಯಾರಣ್ಯಪುರ ಅಗ್ರಹಾರ. ಇಲ್ಲಿಗೆ ಸಮೀಪದಲ್ಲಿಯೇ ದುರ್ಗಾ ಮಲ್ಲಿಕಾರ್ಜುನ ದೇವಾಲಯವಿದೆ. ಇಲ್ಲಿರುವ ಮಲ್ಲಿಕಾರ್ಜುನ ಸ್ವಾಮಿಯ ಲಿಂಗವು ಸ್ವಯಂಭೂ (ಉದ್ಭವ) ಲಿಂಗವಾಗಿದೆ. ಇದು ‘ಹರನು ಒಲಿದ’ ಜಾಗವಾದ ಕಾರಣ ಮುಂದೆ ಜನರ ಮಾತಿನಲ್ಲಿ ‘ಹರಾವರಿ’’ ಎಂದು ರೂಢಿಗೆ ಬಂದಿತು.

ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಇಲ್ಲಿ ದುರ್ಗಮ್ಮನವರ ಮೂರ್ತಿಯನ್ನು ಶಿವಲಿಂಗದ ಎಡಭಾಗದಲ್ಲಿ ಪ್ರತಿಷ್ಠಾಪಿಸಿದರು. ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ದಿಕ್ಪಾಲಕ ದೇವಸ್ಥಾನಗಳಲ್ಲಿ ಈ ದುರ್ಗಮ್ಮನವರು ದಕ್ಷಿಣ ದಿಕ್ಕಿನ ರಕ್ಷಣಾದೇವತೆ ಆಗಿದ್ದು, ಇಲ್ಲಿ ಮಾತ್ರ ರಥೋತ್ಸವ ನಡೆಯುತ್ತದೆ. ಇದನ್ನು ಆಡುಭಾಷೆಯಲ್ಲಿ ದುರ್ಗಾ ದೇವಸ್ಥಾನದ ಜಾತ್ರೆ ಎಂದು ಹೇಳುವುದು ವಾಡಿಕೆ. ರಥೋತ್ಸವದ ದಿನ ಪ್ರಾತಃಕಾಲದಲ್ಲಿ ಜಗದ್ಗುರುಗಳಿಂದ ವಿಶೇಷ ಪೂಜೆ ನೆರವೇರಿದ ಮೇಲೆ ತಾಯಿ ರಥಾರೂಢಳಾಗುತ್ತಾಳೆ. ಸ್ವಲ್ಪ ದೂರ ಕ್ರಮಿಸಿದ ನಂತರ ಸಂಧ್ಯಾಕಾಲದಲ್ಲಿ ರಥೋತ್ಸವ ಜರುಗುತ್ತದೆ.

ಈ ಸಂದರ್ಭದಲ್ಲಿ ದುರ್ಗಾಂಬೆಗೆ ಬೆಳ್ಳಿಯಲ್ಲಿ ಮಾಡಿದ ಆಕೃತಿಗಳನ್ನು ಸಮರ್ಪಿಸುವುದು ಪದ್ಧತಿ. ಅವುಗಳೆಂದರೆ – ಬೆಳ್ಳಿಯ ನಾಲಿಗೆ: ಇದರ ಸಮರ್ಪಣೆಯಿಂದ ವಾಗ್ದೋಷ ಪರಿಹಾರ; ಬೆಳ್ಳಿಯ ಜಾನುವಾರು: ಜಾನುವಾರುಗಳು ಕಳೆದುಹೋದಾಗ, ಅವುಗಳಿಗೆ ರೋಗ-ರುಜಿನಗಳು ಬಂದಾಗ; ತೊಂದರೆ ಆದಾಗ; ಬೆಳ್ಳಿಯ ಕಣ್ಣು: ದೃಷ್ಟಿದೋಷ ಮತ್ತು ಕಣ್ಣಿನ ತೊಂದರೆ ನಿವಾರಣೆ; ಬೆಳ್ಳಿಯ ತೊಟ್ಟಿಲು: ಸಂತಾನದೋಷ ನಿವಾರಣೆ; ಬೆಳ್ಳಿಯ ಚರ್ಮದಾಕೃತಿ: ಚರ್ಮರೋಗಗಳ ಪರಿಹಾರ; ಮೊಸರನ್ನ: ಆರೋಗ್ಯಕ್ಕಾಗಿ – ಹೀಗೆ. ಇಂತಹ ಹಲವಾರು ನಂಬಿಕೆಗಳಿವೆ. ದುರ್ಗಾಂಬೆಯ ಅನುಗ್ರಹಲೀಲೆಗಳು ಇಂದಿಗೂ ನಡೆಯುತ್ತಿದೆ. ಮೂರು ದಿನಗಳ ಕಾಲ ಆಗಮೋಕ್ತವಾಗಿ ನಡೆಯುವ ಜಾತ್ರಾಮಹೋತ್ಸವ, ರಥೋತ್ಸವದ ಮರುದಿನ ನಡೆಯುವ ಅವಭೃಥಸ್ನಾನಕ್ಕೂ ಜನರು ಸಾಲುಗಟ್ಟಿ ನಿಲ್ಲುವುದು ವಿಶೇಷ.

19ನೆಯ ಶತಮಾನದ ಉತ್ತರಾರ್ಧ ಹಾಗೂ 20ನೆಯ ಶತಮಾನದ ಪೂರ್ವಾರ್ಧದಲ್ಲಿ ಇಡೀ ಭಾರತದೇಶವೇ ಪ್ಲೇಗ್​ನಿಂದ ತತ್ತರಿಸಿತು. ಸರಿಯಾದ ಔಷಧೋಪಚಾರವಿಲ್ಲದೆ ಸಹಸ್ರಾರು ಜನರು ಮೃತಪಟ್ಟರು. ಶೃಂಗೇರಿ ಜಹಗೀರು ಪ್ರದೇಶದಲ್ಲಿಯೂ ಈ ಪ್ಲೇಗ್ ರೋಗ ಕಾಣಿಸಿಕೊಂಡಿತು. ಜನರು ಕಂಗೆಟ್ಟು, ಪರಿಹಾರ ಕಾಣದೆ ಕೊನೆಗೆ ಆ ಕಾಲಘಟ್ಟದಲ್ಲಿ ವಿರಾಜಮಾನರಾಗಿದ್ದ 33ನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತಿ ಮಹಾಸ್ವಾಮಿಗಳ (ಕ್ರಿ.ಶ. 1879-1912) ಬಳಿ ತಮ್ಮ ಅಳಲನ್ನು ಹೇಳಿಕೊಂಡು ರಕ್ಷಿಸಬೇಕೆಂದು ಅವರಿಗೆ

ಶರಣಾದರು. ಶಿಷ್ಯಜನರ ಈ ದೀನಸ್ಥಿತಿಯನ್ನು ನೋಡಿ ಮರುಗಿದ ಗುರುವರ್ಯರು ಮರುಕ್ಷಣದಲ್ಲಿ ತಾವೇ ಸ್ತೋತ್ರವೊಂದನ್ನು ರಚಿಸಿ ದುರ್ಗಾಂಬೆಯನ್ನು ಸ್ತುತಿಸಿದರು.

ಆ ನಂತರ ಶೃಂಗೇರಿಯ ಜಹಗೀರ್ ಪ್ರದೇಶದಲ್ಲಿ ಮುಂದೆಂದೂ ಪ್ಲೇಗ್ ಕಾಣಿಸಿಕೊಳ್ಳಲಿಲ್ಲ. ಇದೊಂದು ಕೌತುಕ ವಿಚಾರ.

ಈ ತಾಯಿಯ ಮಹಾರಥೋತ್ಸವವು ಪಾಲ್ಗುಣಮಾಸದ ಮೃಗಶಿರಾ ನಕ್ಷತ್ರದಂದು (ಮಾ. 14) ಶ್ರದ್ಧಾಭಕ್ತಿಗಳಿಂದ, ಬಹಳ ವಿಜೃಂಭಣೆಯಿಂದ ಜರುಗಲಿದೆ.

ಮಹಾಸ್ವಾಮಿಗಳಿಂದ ರಚಿತವಾದ ಶ್ರೀ ದುರ್ಗಾಸ್ತವದ ಆಯ್ದ ಭಾಗ ಹೀಗಿದೆ:

ಏತಾವಂತಂ ಸಮಯಂ ಸರ್ವಾಪದ್ಯೋಪಿ ರಕ್ಷಣಂ ಕೃತ್ವಾ |

ಗ್ರಾಮಸ್ಯ ಪರಮಿದಾನೀಂ ತಾಟಸ್ಥ್ಯ ಕೇನ ವಹಸಿ ದುರ್ಗಾಂಬ || 1 ||

(ಹೇ ದುರ್ಗಾಂಬೆ! ಇದುವರೆಗೂ ಎಲ್ಲಾ ರೀತಿಯ ವಿಪತ್ತುಗಳಿಂದಲೂ ಗ್ರಾಮದ (ಶೃಂಗಗಿರಿಯ) ರಕ್ಷಣೆಯನ್ನು ಮಾಡಿ ಇಂದು ಯಾವ ಕಾರಣದಿಂದ ತಟಸ್ಥವಾಗಿದ್ದಿಯಾ?)

ಅಪರಾಧಾ ಬಹುಶಃ ಖಲು ಪುತ್ರಾಣಾಂ

ಪ್ರತಿಪದಂ ಭವಂತ್ಯೇವ |

ಕೋ ವಾ ಸಹತೇ ಲೋಕೇ ಸರ್ವಾಂಸ್ತಾನ್ ಮಾತರಂ ವಿಹಾಯೈಕಾಮ್ || 2 ||

(ಮಕ್ಕಳಿಂದ ಹೆಜ್ಜೆಹೆಜ್ಕೆಗೂ ಅಪರಾಧಗಳು ಅಗುತ್ತಲೇ ಇರುತ್ತವೆಯಷ್ಟೇ. ತಾಯಿಯಾದ ನಿನ್ನೊಬ್ಬಳನ್ನು ಬಿಟ್ಟು ಯಾರು ತಾನೇ ಈ ಲೋಕದಲ್ಲಿ ಅವುಗಳನ್ನೆಲ್ಲ ಸಹಿಸುವರು?)