ನಟ ಶರತ್​ಬಾಬು ನನ್ನ ಆಸ್ತಿಯನ್ನೆಲ್ಲ ಕಬಳಿಸಿದ್ದಾರೆಂದು ಆರೋಪಿಸಿದ ಮಾಜಿ ಪತ್ನಿ

ಚೆನ್ನೈ: ತೆಲುಗು ಹಿರಿಯ ನಟಿ ರಮಾ ಪ್ರಭಾ ತಮ್ಮ ಮಾಜಿ ಪತಿ ನಟ ಶರತ್​ ಬಾಬು ಬಗ್ಗೆ ಈಗ ಆರೋಪವನ್ನೊಂದನ್ನು ಮಾಡಿದ್ದಾರೆ.

ಶರತ್​ಬಾಬು 1988ರಲ್ಲಿ ನನ್ನಿಂದ ವಿಚ್ಛೇದನ ತೆಗೆದುಕೊಂಡ ಸಂದರ್ಭದಲ್ಲಿ ನನ್ನ ಆಸ್ತಿಗಳನ್ನೆಲ್ಲ ಸುಲಿಗೆ ಮಾಡಿದ್ದಾರೆ. ಚೆನ್ನೈನಲ್ಲಿದ್ದ ನನ್ನ ಮನೆಯನ್ನು ಬಲವಂತವಾಗಿ ಕಬಳಿಸಿದ್ದಾರೆ ಎಂದು ಶನಿವಾರ ಆರೋಪ ಮಾಡಿದ್ದಾರೆ.

ಸುಮಾರು 100 ಚಲನಚಿತ್ರಗಳಲ್ಲಿ ಅಭಿನಯಿಸಿರುವ ರಮಾ ಪ್ರಭಾ ಹೀಗೆ ಆರೋಪ ಮಾಡಿದ್ದು ಟಾಲಿವುಡ್​ನಲ್ಲಿ ವಿವಾದ ಸೃಷ್ಟಿಸಿದೆ.

ರಮಾ ಪ್ರಭಾ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ನಟ ಶರತ್​ ಬಾಬು, ಇವೆಲ್ಲ ಆಧಾರವೇ ಇಲ್ಲದ ಹೇಳಿಕೆಗಳು. ರಮಾ ಅವರಿಂದ ಯಾವುದೇ ಆಸ್ತಿ, ಮನೆಗಳನ್ನೂ ಲೂಟಿ ಮಾಡಿಲ್ಲ ಎಂದಿದ್ದಾರೆ.

ನಾವು 1980ರ ಮೊದಲು ಲಿವ್​-ಇನ್​ ರಿಲೇಶನ್​ಶಿಪ್​ನಲ್ಲಿದ್ದಾಗ ಅಲ್ವಾರ್​ಪೇಟ್​ನಲ್ಲಿ ಒಂದು ಮನೆಯಿತ್ತು. ಅದನ್ನು ರಮಾ ಅವರೇ ಇಟ್ಟುಕೊಂಡಿದ್ದಾರೆ. ಇನ್ನೊಂದು ಮನೆ ಎಗ್ಮೋರೆ ಬೆನಿಫಿಟ್ ಸೊಸೈಟಿಯಲ್ಲಿದೆ. ಎರಡು ಮನೆಗಳಲ್ಲಿ ಒಂದನ್ನು ಅವರ ಮೊದಲ ಪತಿಯಿಂದ ಪಡೆದಿದ್ದರು ಎಂಬುದು ನನಗೆ ನಂತರ ತಿಳಿಯಿತು ಎಂದು ಶರತ್​ ಬಾಬು ತಿಳಿಸಿದ್ದಾಗ ಸ್ಥಳೀಯ ವೆಬ್​ಸೈಟ್​ ವರದಿ ಮಾಡಿದೆ.

ನಾನು ನನ್ನ ಕೃಷಿ ಭೂಮಿಯನ್ನು ಮಾರಿ ಅದರಲ್ಲಿ ಬಂದ ಹಣದಲ್ಲಿ ಉಮಾಪಥಿ ರಸ್ತೆಯಲ್ಲಿ ಮನೆಯೊಂದನ್ನು ಕೊಂಡಿದ್ದೇನೆ. ಅಲ್ಲದೆ ರಮಾ ಅವರ ಹಳೇ ಮನೆಯ ನವೀಕರಣಕ್ಕೆ 1-2 ಲಕ್ಷ ರೂಪಾಯಿ ಸುರಿದ್ದೇನೆ ಎಂದಿದ್ದಾರೆ.

ಶರತ್​ ಬಾಬು ಹಾಗೂ ರಮಾ ಪ್ರಭಾ 1980ರಲ್ಲಿ ಮದುವೆಯಾಗಿ 1988ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಶರತ್​ಬಾಬು ಅವರು ತಮಿಳು, ತೆಲಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.