ಎಸ್​ಐಟಿ ಚರ್ಚೆ ನಡುವೆಯೇ ಬಿಜೆಪಿ ಶಾಸಕ ಶಿವನಗೌಡ ವಿರುದ್ಧ ದೂರು ದಾಖಲಿಸಲು ನಿರ್ಧಾರ

ಬೆಂಗಳೂರು: ಆಪರೇಷನ್​ ಕಮಲದ ಆಡಿಯೋ ಪ್ರಕರಣವನ್ನು ಎಸ್​ಐಟಿಗೆ ವಹಿಸಬೇಕೆ ಬೇಡವೇ ಎಂಬ ಚರ್ಚೆಯ ನಡುವೆಯೇ ಶಾಸಕ ನಾಗನಗೌಡ ಕಂದಕೂರ್​ ಅವರ ಪುತ್ರ ಶರಣಗೌಡ ಕಂದಕೂರ್​ ಅವರು ದೇವದುರ್ಗ ಬಿಜೆಪಿ ಶಾಸಕನ ಶಿವನಗೌಡ ನಾಯಕ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

ಬಜೆಟ್​ ಮಂಡನೆಗೂ ಮುನ್ನ ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ಕರೆದು ಆಪರೇಷನ್​ ಕಮಲಕ್ಕೆ ಸಂಬಂಧಿಸಿದ ಆಡಿಯೋ ಬಿಡುಗಡೆ ಮಾಡಿದ್ದರು. ಜೆಡಿಎಸ್​ನ ಗುರಮಠಕಲ್​ನ ಶಾಸಕ ನಾಗನಗೌಡ ಕಂದಕೂರ್​ ಅವರ ಪುತ್ರ ಶರಣಗೌಡ ಕಂದಕೂರ್​ ಮತ್ತು ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ಅವರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯುಳ್ಳ ಆಡಿಯೋದಲ್ಲಿ ಶಾಸಕ ಶಿವನಗೌಡ ಅವರು ಸ್ಪೀಕರ್​ಗೇ 50 ಕೋಟಿ ಹಣ ನೀಡಿರುವುದಾಗಿ ಹೇಳಿದ್ದರು.

ಇದೇ ವಿಚಾರವಾಗಿ ಇಂದು ರಾಯಚೂರಿನ ದೇವದುರ್ಗಕ್ಕೆ ಆಗಮಿಸುತ್ತಿರುವ ಶರಣಗೌಡ ಕಂದಕೂರ್​ ಅವರು, ತಮಗೆ ಆಮಿಷವೊಡ್ಡಿದ ಮತ್ತು ಸ್ಪೀಕರ್​ ವಿರುದ್ಧ ಹೇಳಿಕೆ ನೀಡಿದ ಕಾರಣಗಳನ್ನು ಮುಂದಿಟ್ಟು ಶಾಸಕ ಶಿವನಗೌಡ ನಾಯಕ​ ಅವರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಲಿದ್ದಾರೆ. ಈ ಕುರಿತು ಸ್ವತಃ ಶರಣಗೌಡ ಕಂದಕೂರ್​ ಅವರು ಮಾಹಿತಿ ನೀಡಿದ್ದಾರೆ.