ಶರಣ ಸಂಸ್ಕೃತಿ ಮಹೋತ್ಸವ ಇಂದಿನಿಂದ

ವಿಜಯವಾಣಿ ಸುದ್ದಿಜಾಲ ಹಾವೇರಿ

ತಾಲೂಕಿನ ನರಸೀಪುರ ಗ್ರಾಮದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನ ಪೀಠದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಜ. 14 ಮತ್ತು 15ರಂದು ವಿವಿಧ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ, ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜ. 14ರಂದು ಬೆಳಗ್ಗೆ 11ಕ್ಕೆ ಶರಣ ಸಂಸ್ಕೃತಿ ಮಹೋತ್ಸವವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸು ವರು. ಅಂದು ರಾತ್ರಿ ವಿವಿಧ ಸಾಂಸ್ಕೃತಿಕ ಹಾಗೂ ಜಾನಪದ ಕಲಾ ಮಹೋತ್ಸವ ಜರುಗಲಿದ್ದು, ಸುಮಾರು 15 ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ. 15ರಂದು ಬೆಳಗ್ಗೆ 11.30ಕ್ಕೆ ನಡೆಯುವ ಧಾರ್ವಿುಕ ಕಾರ್ಯಕ್ರಮವನ್ನು ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿ ದ್ದಾರೆ. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ಎರಡು ದಿನಗಳ ಕಾಲ ನಡೆಯುವ ಶರಣ ಸಂಸ್ಕೃತಿ ಉತ್ಸವ ಹಾಗೂ ಶರಣರ ವಚನ ಗ್ರಂಥಗಳ ಪ್ರಥಮ ಮಹಾರಥೋತ್ಸವದಲ್ಲಿ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಅಂಬಿಗರ ಚೌಡಯ್ಯ ಪೀಠದ ಕಾರ್ಯಾಧ್ಯಕ್ಷ ಬಸವರಾಜ ಸಪ್ಪನಗೊಳ, ಪ್ರಮುಖರಾದ ಬಸವರಾಜ ಕಳಸೂರ, ಮಂಜುನಾಥ ಭೋವಿ, ಗಣೇಶ ಬಿಷ್ಟಣ್ಣನವರ ಇತರರಿದ್ದರು.

ಭಕ್ತಿ ಪೂರ್ವಕವಾಗಿ ಆಚರಣೆ:2018ರ ಜನವರಿಯಲ್ಲಿ ಶ್ರೀ ಮಠದಲ್ಲಿ ಏರ್ಪಡಿಸಿದ್ದ ಧಾರ್ವಿುಕ ಕಾರ್ಯಕ್ರಮದ ವೇಳೆ ಗೊಂದಲ ಏರ್ಪಟಿತ್ತು. ಅಲ್ಲದೆ, ಶ್ರೀಗಳ ಮೇಲೆ ಹಲ್ಲೆಗೂ ಯತ್ನಿಸಲಾಗಿತ್ತು. ಈಗ ವಿವಾದ ಬಗೆಹರಿದಿದೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಶಾಸಕ ನಾರಾಯಣ ಸ್ವಾಮಿ, ನಮ್ಮಲ್ಲಿ ಯಾವುದೇ ಬಣ ಹಾಗೂ ಗೊಂದಲವಿಲ್ಲ. ಅಂಬಿಗರ ಚೌಡಯ್ಯನವರ ಕಾರ್ಯಕ್ರಮವನ್ನು ಎಲ್ಲರೂ ಒಗ್ಗೂಡಿ ಭಕ್ತಿ ಪೂರ್ವಕವಾಗಿ ಆಚರಿಸುತ್ತೇವೆ. ನಮ್ಮದು ಹಿಂದುಳಿದ ಸಮಾಜ, ಸರ್ಕಾರದ ಮುಂದೆ ಭಿಕ್ಷೆ ಬೇಡುತ್ತಿದ್ದೇವೆ. ಜತೆಗೆ ಈಗಿನ್ನೂ ಬೆಳೆಯುತ್ತಿದ್ದೇವೆ ಎಂದು ಶಾಸಕರು ಅಸಹಾಯಕತೆ ವ್ಯಕ್ತಪಡಿಸಿದರು.