ಮಕ್ಕಳಲ್ಲಿ ಬೆಳೆಯಲಿ ದೇಶಾಭಿಮಾನ

ವಿಜಯವಾಣಿ ಸುದ್ದಿಜಾಲ ಬೀದರ್
ಮಕ್ಕಳಲ್ಲಿ ದೇಶಾಭಿಮಾನ ಮತ್ತು ಸ್ವಾಭಿಮಾನ ಇರಬೇಕು. ಬಾಲ್ಯದಿಂದಲೇ ದೇಶದ ಬಗ್ಗೆ ಹೆಮ್ಮೆ ಹೊಂದಿರಬೇಕು. ಪ್ರತಿಯೊಬ್ಬರೂ ವೀರ ಯೋಧರನ್ನು ಗೌರವಿಸಬೇಕು ಎಂದು ಜ್ಞಾನಸುಧಾ ವಿದ್ಯಾಲಯದ 5 ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಶಿವಕುಮಾರ ಕಟ್ಟೆ ಹೇಳಿದಳು.

ನೌಬಾದ್ ಬಸವ ಮಂಟಪದಲ್ಲಿ ಶರಣ ಸಂಸ್ಕೃತಿ ವೇದಿಕೆಯಿಂದ ಬುಧವಾರ ನಡೆದ ಶರಣ ಸಂಗಮ ಹಾಗೂ ವೀರ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪುಲ್ವಾಮಾ ಘಟನೆ ನಮ್ಮನ್ನೆಲ್ಲ ಘಾಸಿಗೊಳಿಸಿದೆ. ಯೋಧರ ಸಾವು ಮನಸ್ಸಿಗೆ ತೀವ್ರ ನೋವು ತಂದಿದೆ. ಹುತಾತ್ಮರ ಪರಿವಾರದ ನೋವು ಮನ ಮಿಡಿಸುತ್ತಿದೆ. ಭಾರತೀಯರ, ಭಾರತ ಮಾತೆಯ ರಕ್ಷಣೆಗೆ ನಿಂತಿರುವ ಅವರು ನಮಗಾಗಿ ಹುತಾತ್ಮರಾಗಿದ್ದಾರೆ. ಸೈನಿಕರಿಂದಲೇ ನಾವು ನೆಮ್ಮದಿಯಿಂದ ಇದ್ದೇವೆ. ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡುವ ವೀರ ಯೋಧರು ನಮಗೆ ದೇವರ ಸಮಾನ ಎಂದಳು.

ಸಾಹಿತಿ ಪ್ರೊ. ಓಂಪ್ರಕಾಶ ಧಡ್ಡೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವಕರಲ್ಲಿ ದೇಶ ಭಕ್ತಿ ಕಮ್ಮಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ 5ನೇ ಓದುತ್ತಿರುವ ವಿದ್ಯಾರ್ಥಿನಿ ಭೂಮಿಕಾ ಕಟ್ಟೆ, ತನ್ನ ಜನ್ಮ ದಿನ ಆಚರಿಸಿಕೊಳ್ಳುವ ಬದಲು ಆ ಹಣ ಸೈನಿಕ ಕಲ್ಯಾಣ ನಿಧಿಗೆ ಸಮರ್ಪಣೆ ಮಾಡಿ ಮಾದರಿಯಾಗಿದ್ದಾಳೆ. ಅವಳ ದೇಶಭಕ್ತಿ ಇತರರಿಗೆ ಪ್ರೇರಣೆಯಾಗಿದೆ. ಮಕ್ಕಳಲ್ಲಿ ದೇಶಾಭಿಮಾನ ಬೆಳೆದಾಗ ಸದೃಢ, ಸಶಕ್ತವಾದ ಭಾರತ ನಿಮರ್ಾಣ ಸಾಧ್ಯ ಎಂದು ಪ್ರತಿಪಾದಿಸಿದರು.

ಡಾ. ರಘುಶಂಖ ಭಾತಂಬ್ರಾ ಮಾತನಾಡಿದರು. ಹಂಪಿ ವಿವಿ ಪಿಎಚ್ಡಿ ಪಡೆದ ಡಾ. ಸುನೀತಾ ಕೂಡ್ಲೀಕರ್ ಅವರಿಗೆ ಸನ್ಮಾನಿಸಲಾಯಿತು. ಬಸವ ಮಂಟಪದ ಸಿದ್ರಾಮಪ್ಪ ಕಪಲಾಪುರೆ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ ಕಟ್ಟೆ, ಕಲ್ಯಾಣರಾವ ಚಳಕಾಪುರೆ, ಡಾ. ರಾಜಕುಮಾರ ಅಲ್ಲೂರೆ, ರಮೇಶ ಬಿರಾದಾರ, ಬಸವರಾಜ ಗಾದಗಿಕರ್, ಸಂಗಮ್ಮ ಕಪಲಾಪುರೆ ಇತರರಿದ್ದರು. ಶ್ರೀದೇವಿ ಹೂಗಾರ ಪ್ರಾಸ್ತಾವಿಕ ಮಾತನಾಡಿದರು. ವಿಜಯಲಕ್ಷ್ಮೀ ಸುಲೆಪೇಟ ನಿರೂಪಣೆ ಮಾಡಿದರು. ನೀಲಾಂಬಿಕಾ ಟೇಕುರೆ ವಂದಿಸಿದರು.