ಉಳ್ಳಾಲ: ವಿದ್ಯೆಯ ಅಧಿದೇವತೆ ಶಾರದೆಯೆಂದರೆ ಜ್ಞಾನ, ಸಂಗೀತ, ಕಾವ್ಯ, ಬೌದ್ಧಿಕ ವಿಚಾರಗಳನ್ನು ಪೋಷಿಸುವ ದೇವತೆ. ಶರದೃತುವಿನ ಶುಕ್ಲ ನವಮಿಯಲ್ಲಿ ವಿಶೇಷವಾಗಿ ಪೂಜಿಸಲ್ಪಡುವ ಶಾರದೆಯು ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯ ಅನುಸಂಧಾನದ ಪ್ರತೀಕ ಎಂದು ತುಳುನಾಡು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಹೇಳಿದರು
ತಲಪಾಡಿ ಶಾರದಾ ವಿದ್ಯಾನಿಕೇತನದ ಭೂವರಾಹ ಸಭಾಂಗಣದಲ್ಲಿ ಶಾರದಾ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ವವಂದ್ಯಳು, ಸರ್ವಮಾನ್ಯಳೂ ಆಗಿರುವ ಶಾರದೆಯ ಆರಾಧನೆಯೆಂದರೆ ಜ್ಞಾನದ ಆರಾಧನೆ. ನವರಾತ್ರಿಯೆಂದರೆ ಅದು ಶಕ್ತಿಯ ಆರಾಧನೆ, ದೇವಿಯ ಉಪಾಸನೆ, ದುಷ್ಟಶಕ್ತಿಯ ನಾಶವೇ ನವರಾತ್ರಿಯ ಒಳಾರ್ಥ ಎಂದರು.
ತುಳುನಾಡು ಎಜುಕೇಶನ್ ಟ್ರಸ್ಟ್ ನಿರ್ದೇಶಕ ಸಮೀರ್ ಪುರಾಣಿಕ್, ಸುನಂದಾ ಪುರಾಣಿಕ್, ಶಾರದಾ ವಿದ್ಯಾ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು,
ಸಂಸ್ಕೃತ ಉಪನ್ಯಾಸಕ ಶುಭಕರ್ ನೇತೃತ್ವದಲ್ಲಿ ಶಾರದಾ ಮಾತೆಯನ್ನು ಷೋಡಷೋಪಚಾರ ಪೂಜೆಯ ಮೂಲಕ ಆರಾಧಿಸಲಾಯಿತು. ಶಾರದಾ ಸಮೂಹ ಸಂಸ್ಥೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಭಜನಾ ಸೇವೆ ನಡೆಯಿತು. ಬಳಿಕ ಶಾರದಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಗರ್ಬಾ ನೃತ್ಯ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಕನ್ನಡ ಉಪನ್ಯಾಸಕ ಸುರೇಶ್‌ರಾವ್ ಅತ್ತೂರು ಕಾರ್ಯಕ್ರಮ ನಿರೂಪಿಸಿದರು.