ರಣಾಂಗಣದಲ್ಲಿ ಶಾನ್ವಿ ಪತ್ರಕರ್ತೆ

ಬೆಂಗಳೂರು: ಕನ್ನಡದಲ್ಲಿ ಸೇನೆ ಕುರಿತ ಸಿನಿಮಾಗಳು ಕೊಂಚ ಕಮ್ಮಿಯೇ. ತಕ್ಷಣಕ್ಕೆ ನೆನಪಾಗುವವು ‘ಮುತ್ತಿನ ಹಾರ’, ‘ಸೈನಿಕ’ ಮತ್ತೊಂದಿಷ್ಟು ಸಿನಿಮಾಗಳಷ್ಟೇ. ಹೊಸ ನಿರ್ದೇಶಕ ರೋಹಿತ್ ರಾವ್ ಇದೀಗ ‘ರಣಾಂಗಣ’ ಹೆಸರಿನ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಸಂಪೂರ್ಣ ಸೇನೆಯ ಸುತ್ತವೇ ಈ ಸಿನಿಮಾ ಸಾಗಲಿದೆ. ಕಿರುತೆರೆ ನಟ ಸ್ಕಂದ ಅಶೋಕ್ ಸೈನಿಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ ನಟಿಸುತ್ತಿದ್ದಾರೆ.

‘ಈ ಚಿತ್ರದಲ್ಲಿ ನಾನು ಪತ್ರಕರ್ತೆಯ ಪಾತ್ರ ಮಾಡುತ್ತಿದ್ದೇನೆ. ಆದರೆ, ಪತ್ರಕರ್ತೆ ಹೇಗೆ ಸೇನೆ ಸೇರುತ್ತಾಳೆ ಎಂಬ ಕುತೂಹಲ ನನ್ನ ಪಾತ್ರದಲ್ಲಿದೆ. ಇದೇ ಮೊದಲ ಬಾರಿಗೆ ನನ್ನ ವೃತ್ತಿಜೀವನದಲ್ಲಿ ಇಂತಹ ಪಾತ್ರ ಮಾಡುತ್ತಿದ್ದೇನೆ’ ಎಂದು ಸಂಭ್ರಮಿಸುತ್ತಾರೆ ಶಾನ್ವಿ. ‘ಕನ್ನಡದಲ್ಲಿ ದೇಶಭಕ್ತಿ ಕುರಿತ ಸಿನಿಮಾ ಆಗುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಇಂತಹ ಒಂದು ಪ್ರಾಜೆಕ್ಟ್ ನಲ್ಲಿ ನಾನೂ ಇದ್ದೇನೆ ಎಂಬುದು ನನ್ನ ಖುಷಿ ಹೆಚ್ಚಲಿಕ್ಕೆ ಇನ್ನೊಂದು ಕಾರಣ. ಸೈನ್ಯಕ್ಕೆ ಸಂಬಂಧಿಸಿದ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಇತ್ತೀಚೆಗೆ ಅದು ಹೆಚ್ಚಾಗಿತ್ತು ಕೂಡ. ಅಂಥ ಸಮಯದಲ್ಲಿ ‘ರಣಾಂಗಣ’ದ ಕಥೆ ಕೇಳಿದೆ, ಇಷ್ಟವಾಯಿತು. ಇಲ್ಲ ಅನ್ನುವುದಕ್ಕೆ ಮನಸ್ಸೇ ಬರಲಿಲ್ಲ. ಎಲ್ಲ ಭಾವನೆಗಳು ಮಿಶ್ರಣವಾಗಿರುವ ಕಥೆ ಇದರಲ್ಲಿದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಅವರು. ಮಂಗಳೂರು, ಹಿಮಾಚಲ ಪ್ರದೇಶ ಮುಂತಾದ ಕಡೆ ‘ರಣಾಂಗಣ’ದ ಚಿತ್ರೀಕರಣ ನಡೆಯಲಿದ್ದು, ಹೇಮಂತ್ ಸುವರ್ಣ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು, ರಕ್ಷಿತ್ ಶೆಟ್ಟಿ ಜತೆಗೆ ‘ಅವನೇ ಶ್ರೀಮನ್ನಾರಾಯಣ’, ಗಣೇಶ್ ನಟನೆಯ ‘ಗೀತಾ’ ಹಾಗೂ ರವಿಚಂದ್ರನ್- ಉಪೇಂದ್ರ ಕಾಂಬಿನೇಷನ್​ನ ‘ರವಿಚಂದ್ರ’ ಚಿತ್ರಗಳಲ್ಲಿ ಶಾನ್ವಿ ಬಿಜಿ ಆಗಿದ್ದಾರೆ.