ರಾಡರ್ ತಯಾರಿಕೆಯಲ್ಲಿ ಕರಾವಳಿಯ ಮಹಿಳೆ
ಸ್ವದೇಶಿ ನಿರ್ಮಾಣಕ್ಕೆ ಬಲ ನೀಡಿದ್ದ ಕನ್ನಡತಿ ಶಾಂತಾ
ಪ್ರಶಾಂತ ಭಾಗ್ವತ, ಉಡುಪಿ
ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಪರಾಕ್ರಮ ಮೆರೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯು ದೇಶವಾಸಿಗರಿಗೆ ಇನ್ನೂ ರೋಮಾಂಚನ ಮೂಡಿಸುತ್ತಿದೆ. ಬ್ರಹ್ಮೋಸ್, ಸುದರ್ಶನ ಚಕ್ರ (ಎಸ್-400) ಹಾಗೂ ಆಕಾಶ್ ಕ್ಷಿಪಣಿಗಳು ತನ್ನ ಸಾಮರ್ಥ್ಯ ಏನೆಂಬುದನ್ನು ವಿಶ್ವಕ್ಕೆ ತೋರ್ಪಡಿಸಿವೆ.

ಭಾರತದ ಮೇಲೆ ಶತ್ರು ಪಾಕಿಸ್ತಾನ ಹಾರಿಸಿಬಿಟ್ಟಿದ್ದ ನೂರಾರು ಅಪಾಯಕಾರಿ ಡ್ರೋಣ್ಗಳನ್ನು ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿ ರ್ನಿದಿಷ್ಟ ಗುರಿಯೊಂದಿಗೆ ಶೇ.90ರಷ್ಟನ್ನು ಹೊಡೆದುರುಳಿಸಿತ್ತು. ಅಂತಹ ಪ್ರಬಲ ಆಕಾಶ್ ನಿರ್ಮಾಣದಲ್ಲಿ ಕರಾವಳಿ ಭಾಗದ ಉಡುಪಿಯ ಮಹಿಳೆ, ಕನ್ನಡತಿ ಶಾಂತಾ ನಾಯಕ ಅವರೂ ಸಹ ಮಹತ್ವದ ಕೊಡುಗೆ ನೀಡಿದ್ದರು.
ಸಬ್ ಸಿಸ್ಟಮ್ ಜತೆಗೆ ಸಂಪರ್ಕ
ಕ್ಷಿಪಣಿಗಳನ್ನು ನಭಕ್ಕೆ ಹಾರಿಸುವ ರಾಜೇಂದ್ರ ಹೆಸರಿನ ರಾಡರ್ನ ಸಬ್ ಸಿಸ್ಟಮ್ (ಉಪವ್ಯವಸ್ಥೆ)ನಲ್ಲಿ ಶಾಂತಾ ಕಾರ್ಯ ನಿರ್ವಹಿಸಿದ್ದರು. ರಾಡರ್ ನಿರ್ಮಾಣದ ಡಿಸೈನ್ ವರ್ಕ್, ಟೆಸ್ಟಿಂಗ್, ಅಭಿವೃದ್ಧಿ ಪಡಿಸಿದ ಬಳಿಕ ಪರೀಕ್ಷಿಸಿ ಮುಖ್ಯ ರಾಡರ್ನ ಇನ್ನಿತರ ಸಿಸ್ಟಮ್ ಜತೆಗೆ ಸಂಪರ್ಕ ಮಾಡುವ ತಾಂತ್ರಿಕ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು.
ಕನ್ನಡಿಗರಿಗೂ ಹೆಮ್ಮೆ
ಆಕಾಶ್ ಏರ್ ಡಿಫೆನ್ಸ್ ಸಿಸ್ಟಮ್, ರಾಜೇಂದ್ರ ರಾಡರ್ ಮತ್ತು 3ಡಿ ಸಿಎಆರ್ (ಕೇಂದ್ರ ಸ್ವಾಮ್ಯದ ರಾಡರ್)ಗಳನ್ನು 1990-2000ನೇ ವರ್ಷದಲ್ಲಿ ಅಭಿವೃದ್ಧಿ ಪಡಿಸಿ ಸೇನೆಗೆ ಹಸ್ತಾಂತರಿಸಲಾಗಿತ್ತು. ಈ ಕಾರ್ಯದಲ್ಲಿ ಉಡುಪಿಯ ಆರ್ಎಸ್ಬಿ ಸಮಾಜದ ಶಾಂತಾ ಅವರೂ ಸಹ ಅಮೂಲ್ಯ ಸೇವೆ ಸಲ್ಲಿಸಿರುವುದು ಕನ್ನಡಿಗರಿಗೂ ಹೆಮ್ಮೆ ತಂದಿದೆ. 1987ರಲ್ಲಿ ತಾಂತ್ರಿಕ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿದ್ದ ಅವರು, 2022ರಲ್ಲಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಡಾ. ಎಪಿಜೆ ಅಬ್ದುಲ್ ಕಲಾಂ ಜತೆ ಕಾರ್ಯ
ಕೇಂದ್ರ ರಕ್ಷಣಾ ಇಲಾಖೆಯ ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವೆಲೆಪ್ಮೆಂಟ್ ಒರ್ಗಾನೈಜೇಷನ್ (ಡಿಆರ್ಡಿಒ)ನ ಅಡಿಯಲ್ಲಿ ಇಲೆಕ್ಟ್ರಾನಿಕ್ ಆ್ಯಂಡ್ ರಾಡರ್ ಡೆವೆಲಪ್ಮೆಂಟ್ ಸಂಸ್ಥೆ (ಆರ್ಡಿಇ)ಯಲ್ಲಿ ಆಕಾಶ್ ಕ್ಷಿಪಣಿಗೆ ಸಂಬಂಧಿಸಿದ ರಾಡರ್ ನಿರ್ಮಿಸುವ ಯೋಜನೆ ಆರಂಭಗೊಂಡಿತ್ತು. ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಮುಖ ಯೋಜನಾಧಿಕಾರಿಯಾಗಿದ್ದರು. ಹಲವಾರು ವಿಜ್ಞಾನಿಗಳು, ತಂತ್ರಜ್ಞರು ಸೇವೆ ನೀಡಿದ್ದು, ಶಾಂತಾ ಅವರೂ ಸಹ ಓರ್ವ ತಾಂತ್ರಿಕ ಅಧಿಕಾರಿಯಾಗಿದ್ದರು. ಡಾ. ಕಲಾಂ ಬಳಿಕ ಕನ್ನಡಿಗರೇ ಆದ ಬೆಂಗಳೂರಿನ ವಿಜ್ಞಾನಿ ಡಾ. ಪ್ರಲ್ಹಾದ ಆರ್. ರಾವ್ ಅವರು ಯೋಜನಾ ನಿರ್ದೇಶಕರಾಗಿ ಮುಂದುವರಿದರು. ಈ ವೇಳೆಯಲ್ಲೂ ಸಹ ಶಾಂತಾ ಅತ್ಯುತ್ತಮವಾಗಿ ತಾಂತ್ರಿಕ ಕಾರ್ಯ ನಿರ್ವಹಿಸಿದ್ದರು. ಅವರ ಕಾರ್ಯ ಗುರುತಿಸಿ ಡಿಆರ್ಡಿಒ ಹಲವಾರು ಪ್ರಶಸ್ತಿ ನೀಡಿ ಅಭಿನಂದಿಸಿದೆ.
ಭಾರತ ನಿರ್ಮಿತ 3ಡಿ ಕಾರ್ ಹಾಗೂ ರಾಜೇಂದ್ರ ರಾಡರ್ಗಳು ಶತ್ರು ದೇಶಗಳಿಂದ ಬರುವ ಡ್ರೋಣ್, ಮಿಸೈಲ್ ರಾಕೆಟ್ ಮುಂತಾದ ವಿದೇಶಿ ಅಸ್ತ್ರ ಗುರುತಿಸಿ, ಅವುಗಳನ್ನು ಟ್ರ್ಯಾಕ್ ಮಾಡಿ ನಾಶಪಡಿಸುವ ಶಕ್ತಿ ಹೊಂದಿದೆ. ಗಣರಾಜ್ಯೋತ್ಸವದ ಪರೇಡ್ನಲ್ಲಷ್ಟೇ ದೇಶದ ಜನರು ಆಕಾಶ್ ಕ್ಷಿಪಣಿ ನೋಡುತ್ತಿದ್ದರು. ಆದರೆ, ಆಪರೇಷನ್ ಸಿಂಧೂರದಲ್ಲಿ ಆಕಾಶ್ನ ಅತ್ಯದ್ಭುತ ಸಾಮರ್ಥ್ಯ ತಿಳಿಯಿತು. ಶತ್ರುಗಳ ನೂರಾರು ಡ್ರೋಣ್ ಹಾಗೂ ಕ್ಷಿಪಣಿಯನ್ನು ಧ್ವಂಸ ಮಾಡಿರುವುದು ತುಂಬ ತೃಪ್ತಿಯಾಯಿತು. ನಾನೂ ಸಹ ಈ ರಾಡರ್ ಹಾಗೂ ಆಕಾಶ್ ನಿರ್ಮಾಣದಲ್ಲಿ ಅಳಿಲು ಸೇವೆ ಸಲ್ಲಿಸಿದ್ದರಿಂದ ಈಗ ಅತ್ಯಂತ ಹೆಮ್ಮೆ ಆಗುತ್ತಿದೆ.
|ಶಾಂತಾ ನಾಯಕ. ನಿವೃತ್ತ ತಾಂತ್ರಿಕ ಅಧಿಕಾರಿ, ಆರ್ಡಿಇ