ಹಿಂದು ಧರ್ಮ ಉದ್ಧಾರಕ್ಕಾಗಿ ಶ್ರಮಿಸಿದ್ದ ಶಂಕರಾಚಾರ್ಯ

ಕೆ.ಆರ್.ಪೇಟೆ: ಶಂಕರಾಚಾರ್ಯರು ಸನಾತನ ಹಿಂದು ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಉದ್ಧಾರಕ್ಕಾಗಿ ಶ್ರಮಿಸಿದ್ದರು ಎಂದು ತಹಸೀಲ್ದಾರ್ ಶಿವಮೂರ್ತಿ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಂಕರಾಚಾರ್ಯರ ತತ್ವ, ಸಿದ್ಧಾಂತಗಳು ಹಾಗೂ ಸಂದೇಶಗಳು ಸಾರ್ವಕಾಲಿಕ ಸತ್ಯ. ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದರಿಂದ ನಂತರ ಅನೇಕ ಸಿದ್ಧಾಂತಗಳು ಹುಟ್ಟಲು ಕಾರಣವಾಯಿತು. ಬೌದ್ಧಿಕ ಮತ್ತು ಆಧ್ಯಾತ್ಮಿಕ ಏಕತೆಗೆ ಅವಿರತವಾಗಿ ಶ್ರಮಿಸಿದ್ದ ಶಂಕರಾಚಾರ್ಯರು ಅಧ್ಯಾತ್ಮ ಕ್ಷೇತ್ರದಲ್ಲಿ ವಿಚಾರಕ್ರಾಂತಿ ನೀಡಿದ ಮಹಾನ್ ದಾರ್ಶನಿಕರು ಎಂದು ಬಣ್ಣಿಸಿದರು.

ಅಪೂರ್ವ ಸಂಘಟಕರಾಗಿ ಜ್ಞಾನಮಾರ್ಗದ ಮೂಲಕ ಉಪನಿಷತ್ತು, ಭಗವದ್ಗೀತೆ ಮತ್ತು ಬ್ರಹ್ಮ ಸೂತ್ರದ ಮೇಲೆ ಭಾಷ್ಯ ಬರೆದು ಸಚ್ಚಿದಾನಂದ ಸ್ವರೂಪಿಯಾದ ಬ್ರಹ್ಮನನ್ನು ಆತ್ಮಗೋಚರವೆಂದು ಸಾಧಿಸಿ ಅಹಂ ಬ್ರಹ್ಮಾಸ್ಮಿ ಎಂದು ಉದ್ಘೋಷಿಸಿ ವೇದಾಂತಕ್ಕೆ ಮಹತ್ವದ ಸ್ಥಾನ ನೀಡಿದವರು ಶಂಕರರು. ಅದ್ವೈತ ಚಿಂತನೆ ನಿಜಕ್ಕೂ ಹೆಚ್ಚು ಮನಮುಟ್ಟುವ ವಿಚಾರಧಾರೆಯಾಗಿದೆ ಎಂದರು.

ಗೋಪಾಲಕೃಷ್ಣ ಅವಧಾನಿ ಉಪನ್ಯಾಸ ನೀಡಿದರು. ಉಪತಹಸೀಲ್ದಾರ್ ಲಕ್ಷ್ಮೀಕಾಂತ್, ಮಹದೇವೇಗೌಡ, ಕಂದಾಯ ನಿರೀಕ್ಷಕಿ ಚಂದ್ರಕಲಾ, ಹಿರಿಯಣ್ಣ, ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ರಘುರಾಮ್ ನಾಡಿಗ್, ವಕೀಲ ಅನಂತರಾಮಯ್ಯ ಸೇರಿ ಹಲವರಿದ್ದರು.