ಭಕ್ತಿ, ಆತ್ಮ ವಿಶ್ವಾಸದೊಂದಿಗೆ ಗುರಿ ಸಾಧಿಸಿ

ಶನಿವಾರಸಂತೆ: ಪ್ರತಿಯೊಬ್ಬರು ತಾವು ಮಾಡುವ ಕೆಲಸದಲ್ಲಿ ನಂಬಿಕೆ, ವಿಶ್ವಾಸ ಹೊಂದಿದರೆ ಗುರಿ ಸಾಧಿಸಲು ಸಾಧ್ಯ ಎಂದು ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸುನೀತಾ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ವತಿಯಿಂದ ಗೋಣಿಮರೂರು ಗ್ರಾಮದ ಜ್ಞಾನವಿಕಾಸ ಕೇಂದ್ರದಲ್ಲಿ ಮೂಢನಂಬಿಕೆ ಕುರಿತು ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಮೂಢನಂಬಿಕೆ ಮೈಗೂಡಿಸಿಕೊಂಡರೆ ಯಾವುದೇ ಕೆಲಸದಲ್ಲೂ ಯಶಸ್ಸು ಕಾಣಲು ಸಾಧ್ಯವಿಲ್ಲ, ಆಧ್ಯಾತ್ಮಿಕತೆಯ ಒಲವು ಹಾಗೂ ದೇವರಲ್ಲಿ ಭಕ್ತಿ ಹೊಂದುವಂತೆ ಮಹಿಳೆಯರಿಗೆ ಸಲಹೆ ನೀಡಿದರು.

ಹೆಬ್ಬಾಲೆ ವಲಯ ಮೇಲ್ವಿಚಾರಕ ಕೆ.ವಿನೋದ್‌ಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳಲ್ಲಿ ಹಲವಾರು ಮಹಿಳಾ ಪರ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಮಹಿಳೆಯರು ಮಾಹಿತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜಾಗೃತಿ ಹೊಂದಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಸಬಲರಾಗಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸುವ ಜತೆಯಲ್ಲಿ ಮಹಿಳೆಯರು ಮೂಢನಂಬಿಕೆಯಂತಹ ಸಾಮಾಜಿಕ ಪಿಡುಗುಗಳಿಂದ ಜಾಗೃತಿಗೊಳಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಜ್ಞಾನವಿಕಾಸ ಸಮನ್ವಯಾಧಿಕಾರಿ ಪದ್ಮ, ಗೋಣಿಮರೂರು ಒಕ್ಕೂಟದ ಅಧ್ಯಕ್ಷೆ ಮಣಿ, ಸೇವಾ ಪ್ರತಿನಿಧಿ ಸರೋಜಾ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.