More

    ಕಾಂಗ್ರೆಸ್ ಸೋಲಿಗೆ ಭಿನ್ನಾಭಿಪ್ರಾಯ ಕಾರಣ

    ಶನಿವಾರಸಂತೆ: ಕಾಂಗ್ರೆಸ್‌ನಲ್ಲಿದ್ದ ಗೊಂದಲ, ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪಕ್ಷವನ್ನು ಬಲಪಡಿಸುವ ಕಾಲಬಂದಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಅನಂತ್‌ಕುಮಾರ್ ಹೇಳಿದರು.

    ಕೊಡ್ಲಿಪೇಟೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪಕ್ಷದಲ್ಲಿ ನಾಯಕರ ಗೊಂದಲ, ಭಿನ್ನಾಭಿಪ್ರಾಯ, ಪಕ್ಷ ಸಂಘಟನೆಯಲ್ಲಿ ವಿಫಲತೆಯಿಂದ ಕೊಡಗು ಜಿಲ್ಲೆಯಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳು ಸೇರಿದಂತೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಲು ಕಾರಣವಾಗಿತ್ತು ಎಂದು ತಿಳಿಸಿದರು.

    ಆದರೆ, ಇದೀಗ ಕಾಂಗ್ರೆಸ್ ಮತ್ತೆ ಬಲಿಷ್ಠಗೊಂಡಿದೆ. ನಾಯಕರು ಕೆಳಹಂತದಿಂದ ಪಕ್ಷವನ್ನು ಬಲಪಡಿಸುವ ಸಲುವಾಗಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದೆ ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಕೆಳಹಂತದಿಂದಲೇ ಸಂಘಟಿಸುವ ಕಾರ್ಯವನ್ನು ಚುರುಕುಗೊಳಿಸಲಾಗುತ್ತಿದೆ ಎಂದರು.

    ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಂವಿಧಾನ ವಿರೋಧಿ ನೀತಿ, ದೇಶದಲ್ಲಿ ಆರ್ಥಿಕ ಮುಗ್ಗಟು, ಜನರು ಸಮಸ್ಯೆಗಳ ಸುಳಿಯಲ್ಲಿ ನಲುಗಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಳ್ಳುವ ಮೂಲಕ ಪಕ್ಷವನ್ನು ಸಂಘಟಿಸಬೇಕು. ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರಲು ಸಹಕರಿಸುವಂತೆ ಮನವಿ ಮಾಡಿದರು.

    ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಪಿ.ಎಚ್.ಹಸೈನರ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ನಾಯಕರಿಗಿಂತ ಪಕ್ಷದ ಕಾರ್ಯಕರ್ತರೇ ದೊಡ್ಡವರು. ಕಾರ್ಯಕರ್ತರು ಪಕ್ಷವನ್ನು ಸಂಘಟಿಸುವ ಮೂಲಕ ಚುನಾವಣೆಯಲ್ಲಿ ನಾಯಕರನ್ನು ಗೆಲ್ಲಿಸುತ್ತಾರೆ. ಈ ಸಿದ್ಧಾಂತದಡಿ ಪಕ್ಷದ ನಾಯಕರು ಮೊದಲು ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್‌ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಕೊಡ್ಲಿಪೇಟೆ ವಲಯದ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್ ಮಾತನಾಡಿದರು. ಪ್ರಮುಖರಾದ ಡಾ.ಉದಯಕುಮಾರ್, ಜಿ.ಎಂ.ಕಾಂತರಾಜು, ಜೆ.ಆರ್.ಪಾಲಾಕ್ಷ, ಬ್ಯಾಡಗೊಟ್ಟ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts