ಚುಂಚಶ್ರೀಗಳಿಂದ ಶಮಿ ಪೂಜೆ

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕುಂದೂರಿನ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಜಯದಶಮಿ ಅಂಗವಾಗಿ ಶಮಿ ಪೂಜೆ ನೆರವೇರಿಸಿದರು.

ಕುಂದೂರು ಮಠದ ಆವರಣದಿಂದ ಸಮೀಪದಲ್ಲಿನ ಸುಬ್ರಹ್ಮಣ್ಯ ದೇವಾಲಯದ ಆವರಣದವರೆಗೆ ಸ್ವರ್ಣಲೇಪಿತ ಕಿರೀಟ ಧರಿಸಿ ಖಡ್ಗ ಹಿಡಿದು ಮೆರವಣಿಗೆಯಲ್ಲಿ ಶ್ರೀಗಳು ಆಗಮಿಸಿ ಬನ್ನಿ ವೃಕ್ಷ ಹಾಗೂ ರಂಗನಾಥಸ್ವಾಮಿ ಉತ್ಸವ ಮೂರ್ತಿಗೆ ಶೋಡಷೋಪಚಾರ ಪೂಜೆ ನೆರವೇರಿಸಿ, ದೇವರ ಸನ್ನಿಧಾನದಲ್ಲಿನ ಬಾಳೆಕಂದು ಕಡಿದರು. ಬನ್ನಿ ವೃಕ್ಷದ ಎಲೆಗಳನ್ನು ಬಿಡಿಸಿ ಭಕ್ತರಿಗೆ ವಿತರಣೆ ಮಾಡಿದರು.

ಬಳಿಕ ಆಶೀರ್ವಚನ ನೀಡಿ, ಮನುಷ್ಯ ಮೊದಲು ಅಂತರಂಗದಲ್ಲಿನ ದ್ವೇಷ, ಅಸೂಯೆಯನ್ನು ತ್ಯಜಿಸಬೇಕು. ನವರಾತ್ರಿ ಅಂತರಂಗದ ಸಾಧನೆಗೆ ಒಳ್ಳೆಯ ಅವಕಾಶವಾಗಿದೆ. ಇಂತಹ ಹಬ್ಬವನ್ನು ಎಲ್ಲರೂ ಆಚರಣೆ ಮಾಡುವ ಮೂಲಕ ಅಂತರಂಗ ಶುದ್ಧಿ ಮಾಡಿಕೊಳ್ಳಬೇಕು ಎಂದರು ಹೇಳಿದರು.

ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶಂಭುನಾಥಸ್ವಾಮೀಜಿ, ಕಬ್ಬಳಿ ಶಿವಪುತ್ರ ಸ್ವಾಮೀಜಿ, ಮೈಸೂರಿನ ಸೋಮೇಶ್ವರನಾಥ ಸ್ವಾಮೀಜಿ, ಚುಂಚನಕಟ್ಟೆ ಶಿವಾನಂದನಾಥ ಸ್ವಾಮೀಜಿ, ಬೆಂಗಳೂರಿನ ಪ್ರಕಾಶನಾಥ ಸ್ವಾಮೀಜಿ, ಹುಳಿಮಾವು ಮಠದ ಶ್ರೀಶೈಲನಾಥ ಸ್ವಾಮೀಜಿ, ಕನಕಪುರದ ವಿದ್ಯಾಧರನಾಥ ಸ್ವಾಮೀಜಿ ಹಾಗೂ ಸ್ಥಳಿಯ ಮುಖಂಡರು ಹಾಜರಿದ್ದರು.