ವೀರಶೈವ ಮಹಾಸಭೆಗೆ ಶಾಮನೂರು ಪುನರಾಯ್ಕೆ

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವಿರೋಧವಾಗಿ ಮುಂದಿನ ಐದು ವರ್ಷಗಳ ಅವಧಿಗೆ ಪುನರಾಯ್ಕೆ ಆಗಿದ್ದಾರೆ.

ಗುರುವಾರ ಮಹಾಸಭಾದ ಕೇಂದ್ರ ಕಚೇರಿ ವೀರಶೈವ- ಲಿಂಗಾಯತ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಂಚವಾರ್ಷಿಕ ಅವಧಿಗೆ ನಡೆದ ಚುನಾವಣೆ ಪ್ರಕ್ರಿಯೆ ಪೂರ್ಣ ಗೊಂಡಿದೆ. ಕರ್ನಾಟಕ, ಕೇರಳ ರಾಜ್ಯ ಘಟಕಗಳಿಗೆ ಚುನಾವಣೆ ನಡೆದಿದ್ದು, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯ ಘಟಕಗಳಿಗೆ 1 ವರ್ಷದ ಒಳಗಾಗಿ ಚುನಾವಣೆ ನಡೆಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಎನ್. ತಿಪ್ಪಣ್ಣ ಬಹುಮತದಿಂದ ಆಯ್ಕೆಯಾಗಿದ್ದು, ರಾಜ್ಯದ ಜಿಲ್ಲಾ- ತಾಲೂಕು ಘಟಕಗಳಿಗೆ ಚುನಾವಣೆ ನಡೆದಿದೆ. ರಾಷ್ಟ್ರೀಯ, ರಾಜ್ಯ ಘಟಕದ ಪದಾಧಿಕಾರಿಗಳ ಆಯ್ಕೆ ಶೀಘ್ರ ನಡೆಯಲಿದೆ. ಹಾಗೇ ಉಳಿದ ರಾಜ್ಯಗಳ ಜಿಲ್ಲಾ ಘಟಕಗಳಿಗೂ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದರು.

ಬೆಂಗಳೂರಿನಲ್ಲಿ ಅಧ್ಯಯನ ಮಾಡುತ್ತಿರುವ ಸಮಾಜದ ವಿದ್ಯಾರ್ಥಿಗಳಿಗಾಗಿ ತರಹುಣಸೆ ಗ್ರಾಮದಲ್ಲಿ 2 ಎಕರೆ ಜಾಗದಲ್ಲಿ ವಿದ್ಯಾರ್ಥಿಗಳ ಉಚಿತ ವಸತಿ ನಿಲಯ ಸ್ಥಾಪಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವೀರಶೈವ- ಲಿಂಗಾಯತ ಭವನ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯ ಸ್ಥಾಪಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ, ಮುಖಂಡರಾದ ಬಿ.ಎಸ್.ಸಚ್ಚಿದಾನಂದ ಮೂರ್ತಿ, ಎಚ್.ಎಂ.ರೇಣುಕ ಪ್ರಸನ್ನ, ಗುರುರಾಜ ಹುಣಸಿಮರದ, ಎಂ.ಎಸ್. ಕೋರಿಶೆಟ್ಟರ್ ಇದ್ದರು.

ವೀರಶೈವ ಮಹಾಸಭಾ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ರಾಜಕೀಯ ನಿಲುವು ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟ ವಿಚಾರ. ಆದರೆ ವೀರಶೈವ ಲಿಂಗಾಯತರಿಗೆ ರಾಜಕೀಯ ಪಕ್ಷಗಳು ಹೆಚ್ಚು ಟಿಕೆಟ್ ನೀಡಬೇಕೆಂದು ಮಹಾಸಭೆ ಬಯಸುತ್ತದೆ ಹೊರತು ಯಾರ ಪರ ಅಥವಾ ವಿರೋಧವಾಗಿ ಕೆಲಸ ಮಾಡುವುದಿಲ್ಲ.

| ಶಾಮನೂರು ಶಿವಶಂಕರಪ್ಪ, ಅಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ

Leave a Reply

Your email address will not be published. Required fields are marked *