Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಶಿಕ್ಷಣ ಕಾಳಜಿಯ ಕಾಳೆ

Sunday, 10.06.2018, 3:04 AM       No Comments

|ಜ ಉಮೇಶ್ ಕುಮಾರ್ ಶಿಮ್ಲಡ್ಕ

ತ್ತು ದಿನಗಳ ಹಿಂದಿನ ಮಾತು. ಮಹಾರಾಷ್ಟ್ರದಲ್ಲಿ ಹೈಯರ್ ಸೆಕೆಂಡರಿ ಸರ್ಟಿಫಿಕೇಟ್ ಪರೀಕ್ಷೆ ಫಲಿತಾಂಶ ಘೋಷಣೆ ದಿನ. ಮಹಾರಾಷ್ಟ್ರ ಶಿಕ್ಷಣ ಮಂಡಳಿ ಮುಖ್ಯಸ್ಥೆ ಶಕುಂತಲಾ ಕಾಳೆ ರಾಜ್ಯದ 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಿಸಲಾರಂಭಿಸಿದರು. ಶೇಕಡ 88.41 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಪರೀಕ್ಷಾ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರ ಫಲ ಕಾಣಸಿಕ್ಕಿತ್ತು. ಆ ಖುಷಿಯಲ್ಲಿ ಶಕುಂತಲಾ ಕಾಳೆ, ‘ಪರೀಕ್ಷೆ ನಡೆಯುವಾಗ ಎಲ್ಲಿಯೂ ಗೊಂದಲವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಉತ್ತರ ಪತ್ರಿಕೆಗಳಲ್ಲಿ ಬಾರ್​ಕೋಡ್ ಅಳವಡಿಸಲಾಗಿತ್ತು. ಇದಲ್ಲದೇ, ವಿದ್ಯಾರ್ಥಿಗಳಿಗೆ ಹೊರೆ ಆಗಬಾರದು ಎಂಬ ಕಾರಣಕ್ಕೆ ಪ್ರತಿ ಪರೀಕ್ಷೆಗೆ ನಡುವೆ ಒಂದು ದಿನ ಬಿಡುವು ನೀಡಲಾಗಿತ್ತು’ ಎಂದು ಪ್ರತಿಕ್ರಿಯಿಸಿದ್ದರು.

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಮಹಾರಾಷ್ಟ್ರ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಷನ್ ಬೋರ್ಡ್(ಮಹಾರಾಷ್ಟ್ರ ಶಿಕ್ಷಣ ಮಂಡಳಿ)ನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಅವರು, ಪರೀಕ್ಷಾ ಪ್ರಕ್ರಿಯೆಗಳ ಸುಧಾರಣೆಗೆ ನೀತಿ ರೂಪಣೆ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇವೆ. ಆ ನೀತಿಗಳು ವಿದ್ಯಾರ್ಥಿಸ್ನೇಹಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುತ್ತೇವೆ. ಕಲೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಹೆಚ್ಚುವರಿ ಮಾರ್ಕ್ ಒದಗಿಸುವ ನೀತಿಗೆ ನನ್ನ ಬೆಂಬಲವಿದೆ. ಕೆಲವೊಂದು ನಿಯಮಗಳಲ್ಲಿ ಲೋಪದೋಷಗಳಿವೆ. ಅವುಗಳನ್ನು ಕಾಲಾನುಕ್ರಮದಲ್ಲಿ ಸರಿಪಡಿಸಲಾಗುವುದು’ ಎಂದಿದ್ದರು. ಅಂದಿನ ಆ ಮಾತು ಮತ್ತು ಇತ್ತೀಚೆಗೆ ಫಲಿತಾಂಶ ಪ್ರಕಟಿಸುವಾಗ ಹೇಳಿದ ಮಾತುಗಳನ್ನು ತುಲನೆ ಮಾಡಿದರೆ ಶಿಕ್ಷಣ ಕ್ಷೇತ್ರದ ಸುಧಾರಣೆ ಕಾಳಜಿ ಧ್ವನಿಸುವುದನ್ನು ಗಮನಿಸಬಹುದು.

ಶಿಕ್ಷಣ ಮಂಡಳಿ ಮುಖ್ಯಸ್ಥರಾದ ಬಳಿಕ ಇದೇ ಮೊದಲ ಸಲ ಅವರು ಹನ್ನೆರಡನೇ ತರಗತಿ ಮಕ್ಕಳ ಪರೀಕ್ಷೆ ಫಲಿತಾಂಶ ಪ್ರಕಟಿಸಿದರು. ಅದರಲ್ಲೇನು ವಿಶೇಷ ಎಂದು ಹುಬ್ಬೇರಿಸಬೇಡಿ. ಸರ್ಕಾರಿ ಸೇವೆಯಲ್ಲಿ ಉನ್ನತ ಸ್ಥಾನದಲ್ಲಿದ್ದು, ದೊಡ್ಡ ಹೊಣೆಗಾರಿಕೆ ಹೊತ್ತವರ ಬದುಕಿನೆಡೆಗೆ ಜನರ ಗಮನಹರಿಯುವುದು ಅಪರೂಪ. ಕೆಲವರ ಬದುಕು ಇತರರಿಗೆ ಆದರ್ಶ ಮತ್ತು ಪ್ರೇರಣಾದಾಯಿ ಆಗಿರುತ್ತದೆ. ಆದರೆ, ತಾವೆದುರಿಸಿದ ಬವಣೆಗಳನ್ನು ಹೇಳಿಕೊಳ್ಳದ ಹೊರತು ಅಂಥ ಅಧಿಕಾರಿಗಳ ಬದುಕಿನ ಚಿತ್ರಣ ಜನರಿಗೆ ಸಿಗದು. ಅಂಥವರ ಸಾಲಿಗೆ ಸೇರುವವರು ಶಕುಂತಲಾ ಕಾಳೆ (56).

ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ ಮಕ್ಕಳ ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಬಳಿಕ ಪತ್ರಕರ್ತರೊಬ್ಬರ ಬಳಿ ಕಾಳೆ ತಮ್ಮ ಬದುಕಿನ ಹಾದಿಯನ್ನು ತೆರೆದಿಟ್ಟರು. ಆ ಹಾದಿ ಇತರರಿಗೂ ಪ್ರೇರಣಾದಾಯಿ. ಅದು ಅವರೊಬ್ಬರ ಸಂಭ್ರಮವಾಗಿರಲಿಲ್ಲ. ಅವರ ಹುಟ್ಟೂರು ಅಂಬೇಗಾಂವ್ ತಾಲೂಕಿನ ಗ್ರಾಮದ ಜನರ ಸಂಭ್ರಮವೂ ಆಗಿತ್ತು. ಕಾರಣ ಇಷ್ಟೇ- ಕಷ್ಟದಲ್ಲಿ ಬೆಳೆದ ಆ ಊರಿನ ಹೆಣ್ಮಗಳೊಬ್ಬಳು ರಾಜ್ಯದ ಶಿಕ್ಷಣ ಕ್ಷೇತ್ರದ ಅತ್ಯುನ್ನತ ಹೊಣೆಗಾರಿಕೆ ಹೊತ್ತುಕೊಂಡು ಅದರ ಫಲಿತಾಂಶವನ್ನು ಕಣ್ತುಂಬಿಕೊಂಡ ಕ್ಷಣ ಅದು. ಇನ್ನು ಅವರ ಬದುಕಿನ ಹಾದಿಯನ್ನು ಅವರ ಮಾತುಗಳಲ್ಲೇ ಹೇಳುವುದಾದರೆ- ‘ನಾನು ನಾಲ್ಕನೇ ತರಗತಿಗೆ ಬರುವ ತನಕ ಜೀವನ ಉಳಿದ ಎಲ್ಲರಂತೆಯೇ ಇತ್ತು. ಆ ವರ್ಷ ನನ್ನ ತಂದೆ ಅಸ್ತಂಗತರಾದರು. ಮನೆಯ ಪರಿಸ್ಥಿತಿ ಶೋಚನೀಯವಾಗಿತ್ತು. ತಾಯಿ ಕೃಷಿ ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ನಮ್ಮ ಹೊಟ್ಟೆ ಹೊರೆದರು. ಹತ್ತನೇ ತರಗತಿ ಶಿಕ್ಷಣ ಮುಗಿದ ಬೆನ್ನಲ್ಲೇ ನನಗೆ ಮದುವೆ ಮಾಡಿ ಪತಿಯ ಮನೆಗೆ ಕಳುಹಿಸಿದರು. ಆಗ ನನ್ನ ವಯಸ್ಸು 14. ಆಗಿನ ಸಂದರ್ಭದಲ್ಲಿ ಮಹಿಳಾ ಶಿಕ್ಷಣಕ್ಕೆ ಮಹತ್ವವೇ ಇರಲಿಲ್ಲ. ನಮ್ಮ ಗ್ರಾಮದಲ್ಲೂ ಪದವಿಪೂರ್ವ ಕಾಲೇಜೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪರ ಊರಿಗೆ ಹೋಗಿ ಶಿಕ್ಷಣ ಮುಂದುವರಿಸುವುದು ನನ್ನ ಮಟ್ಟಿಗೆ ಕನಸಿನ ಮಾತೇ ಆಗಿತ್ತು.

ಪತಿಯ ಮನೆ ಎಂದರೆ ಅದು ಇಂದಿನಂತೆ ನ್ಯೂಕ್ಲಿಯರ್ ಫ್ಯಾಮಿಲಿ ಆಗಿರಲಿಲ್ಲ. ಕೂಡುಕುಟುಂಬವಾಗಿತ್ತು. ಕಾಲಾನುಕ್ರಮದಲ್ಲಿ ನಾನು ಎರಡು ಮಕ್ಕಳ ತಾಯಿಯೂ ಆದೆ. ಎಲ್ಲ ಗ್ರಾಮಗಳಲ್ಲಿ, ಸಮಾಜದಲ್ಲಿ ಇರುವ ಕಟ್ಟುಪಾಡು ನಮ್ಮ ಗ್ರಾಮದಲ್ಲೂ ಇತ್ತು. ಮಹಿಳೆಯರು ಯಾರೂ ಶಿಕ್ಷಣಕ್ಕಾಗಲೀ, ಕೆಲಸಕ್ಕಾಗಿ ಹೊರ ಹೋಗುವುದಕ್ಕಾಗಲೀ ಅವಕಾಶವೇ ಇರಲಿಲ್ಲ. ಅಂಥ ಸನ್ನಿವೇಶದಲ್ಲಿ ಮತ್ತೆ ಕಲಿಕೆ ಮುಂದುವರಿಸುವ ವಿಚಾರವಾಗಿ ಪತಿ ಮತ್ತು ಮಾವ ನನ್ನಲ್ಲಿ ಇನ್ನಷ್ಟು ಉಮೇದು ತುಂಬಿದರು. ಆರಂಭದಲ್ಲಿ ನನಗೆ ಭರವಸೆ ಇರಲಿಲ್ಲ. ಕ್ರಮೇಣ ಮನೆಯವರ ಸಹಕಾರ ಉತ್ತೇಜನ ನೋಡಿ ಧೈರ್ಯ ತಂದುಕೊಂಡು ಶಿಕ್ಷಣ ಮುಂದುವರಿಸಿದೆ. ಪರಿಣಾಮ, ಡಿಎಡ್ ಶಿಕ್ಷಣ ಮುಗಿಸಿದೆ. ಇದಾದ ನಂತರದಲ್ಲಿ ನಾನು ಕಲಿತ ಶಾಲೆಯಲ್ಲೇ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಹೇಳುವ ಅವಕಾಶ ಒದಗಿಬಂತು. ಒಂದಷ್ಟು ಸೌಲಭ್ಯಗಳು ಇದ್ದಿದ್ದರೆ ಎಂಬ ಭಾವನೆ ನನ್ನನ್ನು ಕಾಡಿದ್ದು ಸುಳ್ಳಲ್ಲ. ಪರಿಸ್ಥಿತಿ ಅನುಕೂಲವಾಗಿಲ್ಲ ಎಂಬುದು ಮನದಟ್ಟಾದ್ದರಿಂದ ನಂತರದಲ್ಲಿ ಮರಾಠಿ ಭಾಷೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನೂ ಪಡೆದೆ. ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಮೂಲಕ ಈ ಪದವಿಗಳನ್ನೆಲ್ಲ ಪಡೆದುದು.

ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವಾಗಲೇ ಮಹಾರಾಷ್ಟ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯಬೇಕೆಂಬ ಕನಸು ಕಂಡೆ. ಆ ಕನಸನ್ನು ನನಸು ಮಾಡಲು ಹರಸಾಹಸ ಮಾಡಬೇಕಾಯಿತು. ಅಂದು ಇಂದಿನಂತೆ ಟಿವಿಯಾಗಲೀ, ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳಾಗಲೀ ಲಭ್ಯವಿರಲಿಲ್ಲ. ನಮ್ಮ ಗ್ರಾಮದಲ್ಲಿ ಒಬ್ಬರ ಮನೆಯಲ್ಲಷ್ಟೇ ಟಿವಿ ಇತ್ತು. ನಿತ್ಯವೂ ಶಾಲಾ ಕೆಲಸ ಮುಗಿಸಿ ಬಂದ ಬಳಿಕ ಮನೆಗೆಲಸ ಮಾಡಬೇಕಿತ್ತು. ನಂತರದಲ್ಲಿ ಮಕ್ಕಳ ಹೋಮ್ರ್ಕ್ ಕಡೆಗೆ ಗಮನಹರಿಸಿ ಅವರನ್ನು ಮಲಗಿಸಬೇಕಾಗಿತ್ತು. ಅದೆಲ್ಲವನ್ನೂ ಮಾಡಿ, ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಓದಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿತ್ತು. ಮನೆಯಲ್ಲಿ ರೇಡಿಯೋ ಇತ್ತು. ಅದರಲ್ಲಿ ಬರುತ್ತಿದ್ದ ಕಾರ್ಯಕ್ರಮಗಳನ್ನು ವಿಶೇಷವಾಗಿ ಸುದ್ದಿಗಳನ್ನು ಆಲಿಸತೊಡಗಿದೆ. ಮನೆ ಕೆಲಸ ಮಾಡುವಾಗಲೇ ರೇಡಿಯೋ ಕೇಳುತ್ತಿದ್ದೆ. ಮನೆಯಲ್ಲಿ ಇದು ಎಷ್ಟು ರೂಢಿಯಾಯಿತೆಂದರೆ, ಕೊನೆಕೊನೆಗೆ, ವಾರ್ತೆ ಪ್ರಸಾರ ಆರಂಭವಾಗುತ್ತಿದ್ದಂತೆ ನನ್ನ ಮಗಂದಿರಿಬ್ಬರೂ, ‘ಅಮ್ಮಾ’ ಎಂದು ಕೂಗುತ್ತಾ ಸ್ಪರ್ಧೆಗೆ ಬಿದ್ದವರಂತೆ ಓಡೋಡಿ ಬಂದು ರೇಡಿಯೋವನ್ನು ನನ್ನ ಪಕ್ಕ ಇರಿಸುತ್ತಿದ್ದರು’.

ಅವರ ದಿನಚರಿ ಮುಂಜಾನೆ ಮೂರಕ್ಕೆ ಆರಂಭವಾದರೆ ರಾತ್ರಿ ಹನ್ನೊಂದರ ಹೊತ್ತಿಗೇ ಮುಗಿಯುತ್ತಿದ್ದುದು. ಕೇವಲ ನಾಲ್ಕು ಗಂಟೆಯಷ್ಟೇ ನಿದ್ದೆ. ಇಷ್ಟೆಲ್ಲ ಕಸರತ್ತು ಮಾಡಿ 1993ರಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಯನ್ನು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾದ ಬಳಿಕ ಸೋಲಾಪುರದಲ್ಲಿ ಶಿಕ್ಷಣ ಇಲಾಖೆಯಲ್ಲಿ ಕೆಲಸ ಸಿಕ್ಕಿತು. 1995ರಲ್ಲಿ ಪ್ರಥಮ ದರ್ಜೆ ಅಧಿಕಾರಿಗಳ ಪರೀಕ್ಷೆ ಬರೆದು ಉತ್ತೀರ್ಣರಾಗಿ ಮಹಿಳಾ ಶಿಕ್ಷಣ ಮತ್ತು ವಿಸ್ತರಣೆ ಇಲಾಖೆಯ ಮುಖ್ಯಸ್ಥೆಯಾಗಿ ನೇಮಿಸಲ್ಪಟ್ಟರು. ಅದೇ ವರ್ಷ, ‘ದ ಪೋಟ್ರೇಯಲ್ ಆಫ್ ವುಮೆನ್ ಇನ್ ರೂರಲ್ ನೋವೆಲ್ಸ್’ ಕುರಿತ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದರು.

ಅವರಿಗೆ ಮಹಾರಾಷ್ಟ್ರ ಶಿಕ್ಷಣ ಮಂಡಳಿ ಮುಖ್ಯಸ್ಥೆಯಾಗಿ ಇನ್ನೆರಡು ವರ್ಷದ ಅಧಿಕಾರಾವಧಿ ಇದ್ದು, ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆಗಳನ್ನು ತಂದು ದೇಶಕ್ಕೆ ಮಾದರಿಯಾಗಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *

Back To Top