ಆಲಸ್ಯವೇ ಮನುಷ್ಯನ ನಿಜವಾದ ಶತ್ರು

ಶಹಾಪುರ: ಆಲಸ್ಯವೇ ಮನುಷ್ಯನ ನಿಜವಾದ ಶತ್ರುವಾಗಿದ್ದು, ಸಾಧನೆ ಪಥದಲ್ಲಿರುವ ಪ್ರತಿಯೊಬ್ಬ ಮನುಷ್ಯ ಆಲಸಿಯಾಗಬಾರದು ಎಂದು ಸಾಹಿತಿ ಅಶೋಕ ಚೌಧರಿ ಸಲಹೆ ನೀಡಿದರು.

ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಗ್ರಾಮೀಣ ಗೆಳೆಯರ ಬಳಗ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವ ತಯಾರಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತೀಕರಣ ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಓದು ಕುಂಠಿತವಾಗುತ್ತಿದೆ. ಮಕ್ಕಳ ಯಶಸ್ಸಿನಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ಮುಖ್ಯವಾಗುತ್ತದೆ. ಮಕ್ಕಳು ಪುಸ್ತಕ ಪ್ರೀತಿಸಿದರೆ, ಅದು ಅವರನ್ನು ಉದ್ಧರಿಸುತ್ತದೆ. ಪುಸ್ತಕಗಳು ಓದುಗನ ಜ್ಞಾನಮಿತ್ರ ಎಂದು ಹೇಳಿದರು.

ವಿದ್ಯಾರ್ಥಿ ಜೀವನ ಬರೀ ಆಟವಲ್ಲ, ಬದುಕಿನ ಪಾಠ. ವಿದ್ಯಾರ್ಥಿಗಳು ಅಂಕಕ್ಕಾಗಿ ಓದದೆ ಜ್ಞಾನಕ್ಕಾಗಿ ಓದಬೇಕು. ಜ್ಞಾನ ಸಂಗ್ರಹವಾದರೆ ಅಂಕ ಸಲೀಸಾಗಿ ಬರುತ್ತದೆ. ಇಂದಿನ ಸ್ಪಧರ್ಾತ್ಮಕ ಜಗತ್ತಿನಲ್ಲಿ ಶಿಕ್ಷಣದ ಜತೆ ಕೌಶಲವೂ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಕ ಗುರುಲಿಂಗಯ್ಯ ಮಾತನಾಡಿ, ಬದುಕಲು ಶಿಕ್ಷಣ ಅನಿವಾರ್ಯ. ಮಾನವೀಯ ಸಂಬಂಧ, ಮೌಲ್ಯಗಳು ಕುಸಿಯುತ್ತಿವೆ. ಮಕ್ಕಳು ಸಮಾಜದ ಮಧ್ಯೆ ಬೆಳೆಯಬೇಕಾಗಿದ್ದರಿಂದ ಉತ್ತಮ ಗುರಿ ಇಟ್ಟುಕೊಂಡು ಸತತ ಅಧ್ಯಯನದಿಂದ ಸದಾ ಸುಖಿಯಾಗಬೇಕಿದೆ. ಸಮಯದ ಜತೆ ಹೆಜ್ಜೆ ಹಾಕುವವರು ಬಯಸಿದ್ದನ್ನು ಪಡೆಯಬಹುದಾಗಿದೆ ಎಂದು ಕಿವಿಮಾತು ಹೇಳಿದರು.

ಮುಖ್ಯಗುರು ಬಸಪ್ಪ ಎಚ್. ಅಧ್ಯಕ್ಷತೆ ವಹಿಸಿದ್ದರು. ಗೆಳೆಯರ ಬಳಗದ ಅಧ್ಯಕ್ಷ ಮಾಂತೇಶ ಗಿಂಡಿ ಪ್ರಾಸ್ತಾವಿಕ ಮಾತನಾಡಿದರು. ಅನೀಲಕುಮಾರ ಎಂ.ಅನವಾರ, ವರಲಕ್ಷ್ಮೀ ಸಿಂಪಿ, ಮೌನೇಶ, ಶರಣಮ್ಮ, ಗೊಲ್ಲಾಳಪ್ಪ ಇದ್ದರು.