ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ಮೋದಿಗಾಗಿ ಕೆಲಸ ಮಾಡಿ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಒಂದಂಶದ ಸೂತ್ರ ರಾಜ್ಯ ಬಿಜೆಪಿ, ಚುನಾವಣಾ ಕಣದ ಮೇಲೆ ನೇರ ಪರಿಣಾಮ ಬೀರಿದೆ. ಅಲ್ಲದೆ ಪಕ್ಷದ ಅಭ್ಯರ್ಥಿಗಳು, ದಳಪತಿಗಳ ಆತಂಕವನ್ನೂ ದೂರ ಮಾಡಿದೆ. ಚನ್ನಪಟ್ಟಣ ರೋಡ್ ಶೋ, ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡುವುದಕ್ಕಾಗಿ ಅಮಿತ್ ಷಾ ರಾಜ್ಯಕ್ಕೆ ಬಂದಿದ್ದರು. ಆದರೆ ಅವರು ಮೊದಲು ಕೈಗೆತ್ತಿಕೊಂಡದ್ದು ಅಸಮಾಧಾನ ಶಮನ, ಸಿಟ್ಟು ಸೆಡವು ಮಾಡಿಕೊಂಡವರ ರಿಪೇರಿ. ಇದಕ್ಕೂ ಮುನ್ನವೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಾಧ್ಯವಾದಷ್ಟು ಬಿಕ್ಕಟ್ಟು ಸಡಿಲಿಸಿದ್ದರು. ರಾಜಿ ಸಂಧಾನದ ಮುಖೇನ ಒಂದೇ ದಿನ ಮೂರು ಕ್ಷೇತ್ರಗಳ ಬಂಡಾಯಕ್ಕೂ ತೆರೆ ಎಳೆದಿದ್ದರು.
ಅಮಿತ್ ಷಾ ಮುದ್ರೆ: ಟಿಕೆಟ್ ವಂಚಿತರ ಅಸಮಾಧಾನ ಮತ್ತಷ್ಟು ಉಲ್ಬಣಿಸುವುದನ್ನು ತಡೆಯಲು ಬಿಎಸ್ವೈ, ಬಿವೈವಿ ಬಳಸಿದ್ದ ಉಜ್ವಲ ಭವಿಷ್ಯದ ಭರವಸೆ, ಮತ್ತೊಮ್ಮೆ ಮೋದಿ ಪ್ರಧಾನಿ ಮಾಡಲು ವೈಯಕ್ತಿಕ ಹಿತ ಬದಿಗಿಡಿ ಎಂದು ತಿಳಿಸಿ ಮನವೊಲಿಸಿದ್ದರು. ಈ ತಂತ್ರಗಾರಿಕೆಗೆ ಅಮಿತ್ ಷಾ ಒಪ್ಪಿಗೆ ಮುದ್ರೆಯೊತ್ತಿದರು. ಆರು ಕ್ಷೇತ್ರಗಳಲ್ಲಿ ಬೂದಿಮುಚ್ಚಿದ ಕೆಂಡವಾಗಿದ್ದ ಭಿನ್ನಮತ, ಅತೃಪ್ತಿಗೂ ‘ಮೋದಿ ಮತ್ತೊಮ್ಮೆ ಪ್ರಧಾನಿ’ ಮದ್ದು ಪ್ರಯೋಗಿಸಿ, ಎಲ್ಲವನ್ನು ಹಳಿಗೆ ತಂದು ನಿಲ್ಲಿಸಿದ್ದಾರೆ. ಇದು, ಕಮಲಪಡೆಯ ಕಾರ್ಯಕರ್ತರಲ್ಲಿ ಅಮಿತ ಉತ್ಸಾಹ ಹುಟ್ಟಿಹಾಕಿದೆ. ಪ್ರಚಾರದ ಭರಾಟೆ ಹೆಚ್ಚಿಸಲು, ಮನೆ ಮನೆಗೆ ಭೇಟಿ ಮಾಡಲು ಸನ್ನದ್ಧರಾಗಿದ್ದಾರೆ. ನಿಗದಿತ ಕಾರ್ಯ ಯೋಜನೆಯಂತೆ ಪೇಜ್ ಪ್ರಮುಖ್, ಬೂತ್ ಸಮಿತಿಗಳು ಕಾರ್ಯೋನ್ಮುಖವಾಗಿವೆ. ಅಮಿತ್ ಷಾ ಅವರ ನಿರಂತರ 12 ತಾಸುಗಳ ಕಾರ್ಯಾಚರಣೆ ಪಕ್ಷದೊಳಗಿನ ವಾತಾವರಣ ಬದಲಿಸಿ, ಬಿಜೆಪಿ-ಜೆಡಿಎಸ್ ಸಮನ್ವಯ ಕೆಳಗೆ ಇಳಿಸುವುದು ಸಾಧ್ಯವೆಂಬ ಆತ್ಮವಿಶ್ವಾಸ ಮೂಡಿಸಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ವಿಶ್ಲೇಷಿಸಿದರು.
ಈಶ್ವರಪ್ಪ ಭೇಟಿ ನಿರಾಕರಿಸಿದ ಅಮಿತ್ ಷಾ: ನವದೆಹಲಿ: ಹೈಕಮಾಂಡ್ ಭೇಟಿಗೆ ಸೂಚನೆ ನೀಡಿದ್ದನ್ನೇ ದೊಡ್ಡ ಸುದ್ದಿಯಾಗಿಸಿದ್ದರಿಂದ ಅಸಮಾಧಾನಗೊಂಡಿರುವ ಅಮಿತ್ ಷಾ ಅವರು ಬುಧವಾರ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪಗೆ ಭೇಟಿ ನಿರಾಕರಿಸಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೊಷಿಸಿದ್ದ ಈಶ್ವರಪ್ಪಗೆ ಮಂಗಳವಾರ ಬೆಂಗಳೂರಿನಿಂದ ಕರೆ ಮಾಡಿದ್ದ ಷಾ, ಬಿಜೆಪಿಯಲ್ಲಿ ಈವರೆಗೆ ಸಿಕ್ಕಿರುವ ಅವಕಾಶಗಳ ಬಗ್ಗೆ ವಿವರಿಸಿ ದೆಹಲಿಗೆ ಆಹ್ವಾನಿಸಿದ್ದರು. ದಿಲ್ಲಿಯಲ್ಲಿಯೂ ತಾಳ್ಮೆ ಪ್ರದರ್ಶಿಸದ ಈಶ್ವರಪ್ಪ, ಅಮಿತ್ ಷಾ ನನ್ನನ್ನು ಭೇಟಿ ಮಾಡಿಲ್ಲ ಎಂದರೆ, ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದೇ ಅರ್ಥ. ಹೀಗಾಗಿ ಸ್ಪರ್ಧೆಗೆ ಮುಂದಾಗುತ್ತೇನೆ ಎಂದು ಮತ್ತೆ ಎಡವಟ್ಟು ಮಾಡಿಕೊಂಡು ವಾಪಸಾಗಿದ್ದಾರೆ.
ಅತೃಪ್ತಿ ಶಮನ: ಅಧಿಕೃತ ಅಭ್ಯರ್ಥಿಗಳ ಹೆಸರು ಪ್ರಕಟ, ನಾಮಪತ್ರ ಸಲ್ಲಿಕೆ ಗಡುವು ಸಮೀಪಿಸುತ್ತಿದ್ದರೂ ಗೋ ಬ್ಯಾಕ್, ಭುಗಿಲೆದ್ದ ಬಂಡಾಯ, ಅಸಮಾಧಾನಿತರ ಕಣ್ಣಾಮುಚ್ಚಾಲೆ, ವಂಚಿತರ ಗುಂಪು ಸಭೆಗಳಿಂದ ಪಕ್ಷದ ನಾಯಕರಲ್ಲಿ ದುಗುಡ ಹೆಚ್ಚಿಸಿತ್ತು. ಆದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ರಾಜಿ ಸಂಧಾನದ ಪ್ರಯತ್ನಕ್ಕೆ ವೇಗದ ಸ್ಪರ್ಶ, ಜಿಗುಟು ನಿಲುವಿನಿಂದ ಅತೃಪ್ತರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಕೆ.ಎಸ್.ಈಶ್ವರಪ್ಪ ಸಂಧಾನದ ಬಾಗಿಲು ಮುಚ್ಚಿದ್ದರಿಂದ ಅವರ ಬಂಡಾಯ ಶಮನವನ್ನು ವರಿಷ್ಠರ ಹೆಗಲಿಗೆ ಹಾಕಿದ್ದರು. ಮಾಸ್ಟರ್ವೆುೖಂಡ್ ಅಮಿತ್ ಷಾ ಸೂಚನೆಯಿಂದಾಗಿ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳ ಮುನಿಸು ಮರೆಗೆ ಸರಿದಿದ್ದು, ನಿಟ್ಟುಸಿರು ಬಿಡುವಂತೆ ಮಾಡಿದೆ. ಅಲ್ಲದೆ, ಖಡಕ್ ಕ್ಲಾಸ್, ಮೋದಿಗಾಗಿ ಕೆಲಸ ಮಾಡಬೇಕೆಂಬ ಕಟ್ಟಪ್ಪಣೆಯು ಅಸಮಾಧಾನಿತರ ಬೇರೆ ಕ್ಷೇತ್ರಗಳಿಗೂ ಅಪ್ಪಳಿಸಿದೆ. ಬೆಳಗಾವಿ, ರಾಯಚೂರು, ಬೀದರ್, ಕೊಪ್ಪಳ ಮತ್ತಿತರ ಕ್ಷೇತ್ರಗಳಲ್ಲೂ ಗೊಂದಲ ತಿಳಿಯಾಗಿ ಮುಖಂಡರು ಮೈಕೊಡವಿಕೊಂಡು ಕೆಲಸದತ್ತ ಗಮನಹರಿಸಿದ್ದಾರೆ.
ಇಂದು ಎಚ್ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ
ಮಂಡ್ಯ: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಏ.4ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಗ್ಗೆ 9 ಗಂಟೆಯಿಂದ ವಿವಿಧ ದೇವಸ್ಥಾನದಲ್ಲಿ ಪೂಜೆ ಹಾಗೂ ಗಣ್ಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ 10.30ಕ್ಕೆ ಉಮೇದುವಾರಿಕೆ ಸಲ್ಲಿಸಿ 11 ಗಂಟೆಗೆ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಯೋಜಿಸಿರುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಗೋವಾ ಸಿಎಂ ಪ್ರಮೋದ್ ಸಾವಂತ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮೈಸೂರಿನ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸ್ಪರ್ಧೆಯಿಂದ ಸುಮಲತಾ ಹಿಂದಕ್ಕೆ: ಮಂಡ್ಯದಿಂದ ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ಹಾಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಘೋಷಿಸಿದ್ದಾರೆ. ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರು ಹಾಗೂ ಹಿತೈಷಿಗಳ ಸಭೆಯಲ್ಲಿ ಸ್ಪರ್ಧೆ ಕುರಿತು ಸ್ಪಷ್ಟನೆ ನೀಡಿದ ಸಂಸದೆ, ಬಿಜೆಪಿ ಸೇರ್ಪಡೆಯಾಗುವುದಾಗಿ ಸ್ಪಷ್ಟಪಡಿಸಿದರು. ಆದರೆ, ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವ ವಿಚಾರದ ಖಚಿತ ಮಾಹಿತಿ ನೀಡಲಿಲ್ಲ. ಪಕ್ಷದ ಆದೇಶ, ಸೂಚನೆಗೆ ಬದ್ಧ ಎಂದಷ್ಟೇ ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಕ್ಕಲಿಗರ ಮೇಲೆ ಪ್ರೀತಿ ಬಂದಿದೆ. ಸಾಲ ಮಾಡಿ ಪಕ್ಷ ಸಂಘಟನೆ ಮಾಡಿದ್ದು ನಾವು. ಪೆಂಡಾಲ್ ಹಾಕಿ ವೇದಿಕೆ ಹಾಕಿದ್ದು ನಾವು, ಬಂದು ಭಾಷಣ ಮಾಡಿ ಹೋಗುತ್ತಾ ಇದ್ದಿದ್ದು ಸಿದ್ದರಾಮಯ್ಯ. ಜೆಡಿಎಸ್ ಸಂಘಟನೆಗೆ ಸಿದ್ದರಾಮಯ್ಯ ಎಂದಾದರೂ ಸಾಲ ಮಾಡಿದ್ದಾರಾ? ಸಂಸದೆ ಸುಮಲತಾ ಅವರ ಮನೆಗೆ ಭೇಟಿ ನೀಡಿದ್ದ ವೇಳೆ ನನ್ನನ್ನು ಸಹೋದರನಂತೆ ಕಂಡರು. ಚುನಾವಣೆಯಲ್ಲಿ ನನಗೆ ಬೆಂಬಲ ನೀಡುವ ವಿಶ್ವಾಸವಿದೆ.
| ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ
ಲೋಕಸಭೆ ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕೆಂದು ಡಿ.ಕೆ.ಶಿವಕುಮಾರ್ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಗೊಂದಲದಲ್ಲಿದ್ದಾರೆ. ಎಷ್ಟು ಸೀಟು ಬಂದರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಹಾಗಾಗಿ ಕಾಂಗ್ರೆಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಬಿಜೆಪಿ-ಜೆಡಿಎಸ್ ಇಡೀ ರಾಜ್ಯದಲ್ಲಿ ಒಗ್ಗಟ್ಟಾಗಿ ಹೋಗುತ್ತಿದ್ದೇವೆ.
| ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ವಯನಾಡ್: ಟಿಕೆಟ್ ಕೇಳಿದ್ದಕ್ಕೆ ಚಲಿಸೋ ರೈಲಿಂದ ಟಿಟಿಇಯನ್ನು ಹೊರಗೆ ತಳ್ಳಿದ್ದ ವ್ಯಕ್ತಿ ವಶಕ್ಕೆ