20.3 C
Bangalore
Sunday, December 15, 2019

ಷಾ ಗೃಹ ಪ್ರವೇಶ, ರಾಜನಾಥ್ ರಕ್ಷಣೆ

Latest News

ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಭಾನುವಾರ) ಆಸ್ಪತ್ರೆಯಿಂದ ಬಿಡುಗೆಯಾಗಿ ಮನೆಗೆ ತೆರಳಲಿದ್ದಾರೆ.ಸ್ಟಂಟ್​ನಲ್ಲಿ...

ಜೆಡಿಎಸ್ ಜನ್ಮ ಜಾಲಾಟ, ವರಿಷ್ಠರಿಗೆ ಪೀಕಲಾಟ

ಬೆಂಗಳೂರು: ಸಾಲು ಸಾಲು ಸೋಲಿನಿಂದ ದಳಪತಿಗಳು ಕಂಗೆಟ್ಟಿದ್ದಾರೆ. ಲೋಕಸಭಾ ಚುನಾವಣೆ ಸೋಲಿ ನಿಂದ ಬೇಗುದಿ ಹೆಚ್ಚುತ್ತಿದ್ದು, ಮೈತ್ರಿ ಸರ್ಕಾರ ಪತನ, ಉಪಚುನಾವಣೆಯ ಹೀನಾಯ...

ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ...

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ ಹಾವು: ವಿಡಿಯೋ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ...

ವಿದೇಶಿ ಮಹಿಳೆಯಿಂದ ಪಿಂಡಪ್ರದಾನ

ಹೊಸಪೇಟೆ (ಬಳ್ಳಾರಿ): ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ತಾಯಿಯ ಆತ್ಮಕ್ಕೆ ಶಾಂತಿ, ಸದ್ಗತಿ ದೊರೆಯಲೆಂದು ಶನಿವಾರ ಹಂಪಿ ನದಿ ತೀರದಲ್ಲಿ ಪುರೋಹಿತರ ನೇತೃತ್ವದಲ್ಲಿ ಹಿಂದು ಧಾರ್ವಿುಕ ವಿಧಿವಿಧಾನಗಳಂತೆ...

ನವದೆಹಲಿ: ಎನ್​ಡಿಎ ಎರಡನೇ ಅವಧಿಯ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಚಿವರ ಹೊಣೆಗಾರಿಕೆ ಪ್ರಕಟಿಸಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾಗೆ ಗೃಹ ಹಾಗೂ ರಾಜನಾಥ್ ಸಿಂಗ್​ಗೆ ರಕ್ಷಣಾ ಸಚಿವಾಲಯದ ಜವಾಬ್ದಾರಿ ನೀಡಲಾಗಿದೆ. ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್​ಗೆ ಹಣಕಾಸು ಹಾಗೂ ನಿವೃತ್ತ ಅಧಿಕಾರಿ ಎಸ್.ಜೈಶಂಕರ್ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ಮುಂದಿನ 5 ವರ್ಷದ ಅವಧಿಗೆ ಮೋದಿ ಸೇನೆ ತಯಾರಾಗಿದ್ದು, ಮೊದಲ ದಿನವೇ ಬಹುತೇಕ ಸಚಿವರು ಅಧಿಕಾರ ಸ್ವೀಕರಿಸಿದ್ದಾರೆ. ಜತೆಗೆ ಪ್ರಧಾನಿ ಮೋದಿ ಸೂಚನೆ ಮೇರೆಗೆ ಜುಲೈ 5ರಂದು ನಡೆಯುವ ಬಜೆಟ್​ಗೆ ತಯಾರಿಯನ್ನು ಸಚಿವರು ಆರಂಭಿಸಿದ್ದಾರೆ.

ಶೇ.2 ಜಿಡಿಪಿ ಉಳಿತಾಯದ ಸಂಪುಟ: ದೇಶದ ಅಭಿವೃದ್ಧಿಗೆ ಸರ್ಕಾರದ ಆಂತರಿಕ ವ್ಯವಸ್ಥೆಯೇ ರೆಡ್ ಟೇಪ್ ಆಗಿದೆ ಎಂದು ವರ್ಷದ ಹಿಂದೆ ನೀತಿ ಆಯೋಗ ಪ್ರಧಾನಿಗೆ ವರದಿ ನೀಡಿತ್ತು. ಹೀಗಾಗಿ ಈ ಬಾರಿ ಸಚಿವರಿಗೆ ಖಾತೆ ಹಂಚಿಕೆ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಇಲಾಖೆಗಳನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದ್ದಾರೆ. ನೀರಾವರಿಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಜಲಶಕ್ತಿ ವ್ಯಾಪ್ತಿಗೆ ತಂದಿದ್ದರೆ, ಕೃಷಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯನ್ನು ಒಂದೇ ಸಚಿವರಿಗೆ ನೀಡಲಾಗಿದೆ. ಹಾಗೆಯೇ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಕೂಡ ಇದೇ ರೀತಿಯಾಗಿದೆ. ಈ ಬದಲಾವಣೆಯಿಂದ ಒಂದು ಕಡತಕ್ಕೆ 2-3 ಇಲಾಖೆಗೆ ಸುತ್ತು ಹೊಡೆಯುವ ಕೆಲಸಕ್ಕೆ ತೆರೆ ಬೀಳಲಿದೆ. ನೀತಿ ಆಯೋಗದ ವರದಿ ಪ್ರಕಾರ ಇಂತಹ ರೆಡ್ ಟೇಪ್ ವ್ಯವಸ್ಥೆಯಿಂದ ಭಾರತದ ಶೇ.2 ಜಿಡಿಪಿ ನಷ್ಟವಾಗುತ್ತಿತ್ತು.

ಅಮಿತ್ ಷಾಗೆ ಗೃಹ ಖಾತೆ ಏಕೆ?

ಮೋದಿ ಸರ್ಕಾರದ ಮುಂದಿನ 5 ವರ್ಷಗಳ ನಡೆ ಹಾಗೂ ಬಿಜೆಪಿ ಪ್ರಣಾಳಿಕೆ ಈಡೇರಿಕೆ ನಿಟ್ಟಿನಲ್ಲಿ ಗೃಹ ಖಾತೆ ಪ್ರಮುಖ ಪಾತ್ರವಹಿಸಲಿದೆ. ಮೋದಿಯ ವೇಗ ಹಾಗೂ ಆಕಾಂಕ್ಷೆಗೆ ತಕ್ಕಂತೆ ಕೆಲಸ ಮಾಡುವ ಕಠಿಣ ವ್ಯಕ್ತಿಯ ರೂಪದಲ್ಲಿ ಅಮಿತ್ ಷಾ ಗೃಹ ಸಚಿವಾಲಯದಲ್ಲಿ ಆಸೀನರಾಗಿದ್ದಾರೆ. ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯ, ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಕಾನೂನು ಸುವ್ಯವಸ್ಥೆ ಸರಿಪಡಿಸುವುದು ಷಾ ಮೇಲಿನ ಮೊದಲ ಜವಾಬ್ದಾರಿಯಾಗಿದೆ. ಇದರ ಜತೆಗೆ ಈ ರಾಜ್ಯಗಳಲ್ಲಿನ ನುಸುಳುಕೋರರ ಸಮಸ್ಯೆಗೆ ಅಂತ್ಯ ಹಾಡುತ್ತೇವೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ಮಾಡುತ್ತೇವೆ ಎಂದಿದ್ದ ಮಾತನ್ನು ಉಳಿಸಿಕೊಳ್ಳಲು ಷಾ ಮುಂದಾಗಬೇಕಿದೆ. ಇದರ ಜತೆಗೆ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ರಕ್ತಪಾತಕ್ಕೆ ನಿಯಂತ್ರಣ ಹೇರಬೇಕಿದೆ. ವಿಶೇಷವಾಗಿ ಪಶ್ಚಿಮ ಬಂಗಾಳ ಹಾಗೂ ಕಾಶ್ಮೀರದಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಷಾ ಅವರಂಥ ಕಠಿಣ ವ್ಯಕ್ತಿ ಅಗತ್ಯವಿದೆ. ಇದೇ ಕಾರಣಕ್ಕೆ ರಾಜನಾಥ್ ಬದಲು ಷಾಗೆ ಜವಾಬ್ದಾರಿ ನೀಡಲಾಗಿದೆ. ಅಂದ್ಹಾಗೆ ಗುಜರಾತ್​ನಲ್ಲಿಯೂ ಮೋದಿ ಸರ್ಕಾರದಲ್ಲಿ ಷಾ ಗೃಹ ಸಚಿವರಾಗಿದ್ದರು. ಸಂಸತ್ತಿಗೆ ಪ್ರವೇಶಿಸಿದ ಮೊದಲ ಬಾರಿಗೆ ಪ್ರಭಾವಿ ಖಾತೆಯನ್ನು ಪಡೆದಿದ್ದಾರೆ.

ಅನುಭವಕ್ಕೆ ರಕ್ಷಣೆ

ಬಿಜೆಪಿಯಲ್ಲಿ ಎ.ಬಿ.ವಾಜಪೇಯಿ ನಂತರ ಅಜಾತಶತ್ರು ಎಂದು ಕರೆಯಿಸಿಕೊಳ್ಳುವ ರಾಜನಾಥ್ ಸಿಂಗ್​ಗೆ ಅತಿ ಮುಖ್ಯ ರಕ್ಷಣಾ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಪಾಕಿಸ್ತಾನದ ಜತೆಗಿನ ಬಾಂಧವ್ಯ ಹದಗೆಟ್ಟಿರುವುದು, ರಕ್ಷಣಾ ಸಾಮಗ್ರಿಗಳ ಖರೀದಿ ಕಾರಣದಿಂದ ಈ ಸಚಿವಾಲಯಕ್ಕೆ ಹಿರಿಯ ಹಾಗೂ ಅನುಭವಿ ರಾಜಕಾರಣಿಯ ಅಗತ್ಯವಿತ್ತು. ಹೊಸಬರಿಗೆ ಈ ಜವಾಬ್ದಾರಿ ನೀಡಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಮೋದಿ ತಯಾರಿರಲಿಲ್ಲ. ಇದರ ಜತೆಗೆ ಅಮಿತ್ ಷಾಗೆ ಗೃಹ ಸಚಿವ ಸ್ಥಾನ ನೀಡುವ ಉದ್ದೇಶದಿಂದಲೂ ಈ ಬದಲಾವಣೆ ಮಾಡಲಾಗಿದೆ. ರಾಜನಾಥ್ ಹಿರಿತನ ಹಾಗೂ ವರ್ಚಸ್ಸಿಗೆ ರಕ್ಷಣೆ ಹೊರತುಪಡಿಸಿ ಬೇರ್ಯಾವ ಇಲಾಖೆಯೂ ಹೊಂದಿಕೆಯಾಗದಿರುವುದರಿಂದ ಈ ನಿರ್ಧಾರ ಮಾಡಲಾಗಿದೆ.

ನಿರ್ಮಲಾಗೆ ವಿತ್ತೀಯ ಹೊಣೆ

ಪ್ರಧಾನಿ ಮೋದಿಯ ಅತಿ ನಂಬಿಕಸ್ಥ ಸಚಿವರಲ್ಲಿ ನಿರ್ಮಲಾ ಸೀತಾರಾಮನ್ ಒಬ್ಬರು. ಈ ಹಿಂದಿನ ಸರ್ಕಾರದಲ್ಲಿ ಕಾರ್ಪೆರೇಟ್ ವ್ಯವಹಾರ, ವಾಣಿಜ್ಯ ಹಾಗೂ ರಕ್ಷಣಾ ಇಲಾಖೆಯನ್ನು ಸಮರ್ಥ ಹಾಗೂ ಕಳಂಕ ರಹಿತವಾಗಿ ನಿಭಾಯಿಸಿದ್ದು ಹಣಕಾಸು ಇಲಾಖೆ ಜವಾಬ್ದಾರಿ ನೀಡಲು ಕಾರಣವಾಗಿದೆ. ಹಣಕಾಸು ವಲಯದಲ್ಲಿ ಅನುಭವದ ಜತೆಗೆ ಪರಿಸ್ಥಿತಿಗೆ ತಕ್ಕಂತೆ ಕಾರ್ಯನಿರ್ವಹಿಸುವ ಚಾಕಚಕ್ಯತೆ ಹೊಂದಿರುವ ನಿರ್ಮಲಾ ಮೇಲೆ ಆರ್ಥಿಕ ಸ್ಥಿತಿ ಸುಧಾರಣೆ, ಉದ್ಯೋಗ ಸೃಷ್ಟಿ, ಬ್ಯಾಂಕ್​ಗಳಿಗೆ ಮರು ಜೀವ ಸೇರಿ ಪ್ರಮುಖ ಸವಾಲುಗಳು ಕಾದಿವೆ. ಅಷ್ಟಕ್ಕೂ ಈ ಸರ್ಕಾರದಲ್ಲಿ ಪ್ರಧಾನಿ ಕಾರ್ಯಾಲಯದ ಸೂಚನೆಯಂತೆ ಹಣಕಾಸು ಇಲಾಖೆ ನಡೆಯುವ ಹಿನ್ನೆಲೆಯಲ್ಲಿ ಮೋದಿ ಮಾತು ಕೇಳುವ ಹಾಗೂ ಅದನ್ನು ಅನುಷ್ಠಾನ ಮಾಡುವ ವ್ಯಕ್ತಿ ಬೇಕಿತ್ತು. ಅದಕ್ಕೆ ನಿರ್ಮಲಾ ಸೀತಾರಾಮನ್ ಹೇಳಿ ಮಾಡಿಸಿದಂತಿದ್ದಾರೆ.

ಮಾಜಿ ಶಿಕ್ಷಕನೇ ಶಿಕ್ಷಣ ಸಚಿವ

ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆಸುವ ಸರಸ್ವತಿ ಶಿಶು ಮಂದಿರದಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ರಮೇಶ್ ಪೋಕ್ರಿಯಾಲ್​ಗೆ ಈಗ ಮಾನವ ಸಂಪನ್ಮೂಲ ಅಭಿವೃದ್ಧಿ ಅಥವಾ ಶಿಕ್ಷಣ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ. ಕಲೆ, ಸಂಸ್ಕೃತಿ ಹಾಗೂ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ರಮೇಶ್ ಮೇಲೆ ಭಾರತೀಯ ಶಿಕ್ಷಣ ವ್ಯವಸ್ಥೆ ಜಾರಿ ಹಾಗೂ ನೂತನ ಶಿಕ್ಷಣ ನೀತಿ ಅನುಷ್ಠಾನಗೊಳಿಸುವ ಗುರುತರ ಹೊಣೆಗಾರಿಕೆಯಿದೆ. ಬಿಜೆಪಿ ಅವಧಿಯಲ್ಲಿ ಅತಿ ವಿವಾದಿತ ಇಲಾಖೆಯಾಗಿ ಸುದ್ದಿಯಲ್ಲಿರುವ ಎಚ್​ಆರ್​ಡಿಯನ್ನು ಸೂಕ್ಷ್ಮವಾಗಿ ನಡೆಸಿಕೊಂಡು ಹೋಗುವ ಅಗತ್ಯವೂ ಇದೆ.

ಜಲಸಾಧಕನಿಗೆ ಜಲಶಕ್ತಿ

ಮುಂದಿನ ಐದು ವರ್ಷಗಳ ಕಾಲ ಶುದ್ಧ ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುವುದು ಎಂದು ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಇದಕ್ಕಾಗಿ ನೂತನ ಸಚಿವಾಲಯ ರಚಿಸುವುದಾಗಿ ಘೋಷಿಸಿದ್ದರು. ಹೀಗಾಗಿ ಜಲಕ್ಕೆ ಸಂಬಂಧಿಸಿದ್ದ 7-8 ಇಲಾಖೆ ಸೇರಿಸಿ ಜಲಶಕ್ತಿ ಎಂಬ ನೂತನ ಸಚಿವಾಲಯ ಆರಂಭಿಸಲಾಗಿದೆ. ಎನ್​ಡಿಎ ಸರ್ಕಾರದ ನಿರ್ಣಾಯಕ ಇಲಾಖೆಯ ಜವಾಬ್ದಾರಿಯನ್ನು ರಾಜಸ್ಥಾನದ ಗಜೇಂದ್ರ ಸಿಂಗ್ ಶೇಖಾವತ್​ಗೆ ನೀಡಲಾಗಿದೆ. ಲೋಕಸಭಾ ಕ್ಷೇತ್ರ ಜೋಧ್​ಪುರದಲ್ಲಿ ಜಲ ಸಂರಕ್ಷಣೆಯಲ್ಲಿ ಕೆಲಸ ಮಾಡಿರುವ ಶೇಖಾವತ್, ಈಗ ದೇಶಾದ್ಯಂತ ಶುದ್ಧ ಕುಡಿಯುವ ನೀರು ಹಾಗೂ ಕೃಷಿಗೆ ನೀರಾವರಿ ಯೋಜನೆ ರೂಪಿಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ.

ವಿದೇಶಾಂಗಕ್ಕೆ ಜೈಶಂಕರ್

ವಿದೇಶಾಂಗ ಇಲಾಖೆಗೆ ಎರಡನೇ ಬಾರಿಗೆ ಐಎಫ್​ಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗುತ್ತಿದೆ. ರಾಜಕೀಯ ಅನುಭವವೇ ಇಲ್ಲದ ಜೈಶಂಕರ್ ಅವರ ವಿದೇಶಿ ವ್ಯವಹಾರಗಳಲ್ಲಿನ ಅನುಭವ ಆಧರಿಸಿ ಅತಿಮುಖ್ಯವಾದ ವಿದೇಶಾಂಗ ಸಚಿವ ಸ್ಥಾನ ನೀಡಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮೋದಿಯ ವಿಶ್ವಾಸ ಗೆದ್ದಿದ್ದ ಅಧಿಕಾರಿಯಲ್ಲಿ ಜೈಶಂಕರ್ ಕೂಡ ಒಬ್ಬರು. ಹೀಗಾಗಿ ಮೊದಲ ಅವಕಾಶದಲ್ಲಿಯೇ ಸಂಪುಟ ದರ್ಜೆ ಸ್ಥಾನಮಾನದ ಜತೆಗೆ ಹಾಗೂ ಭದ್ರತಾ ಸಮಿತಿಯಲ್ಲೂ ಅವಕಾಶ ನೀಡಲಾಗಿದೆ. ಈ ಹಿಂದೆ ನಟ್ವರ್ ಸಿಂಗ್ ಕೂಡ ಐಎಫ್​ಎಸ್ ಹಿನ್ನೆಲೆಯಿಂದ ಬಂದು ವಿದೇಶಾಂಗ ಸಚಿವರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ನಿವೃತ್ತ ಅಧಿಕಾರಿಗಳ ಮೇಲೆ ಮೋದಿ ವಿಶ್ವಾಸ

ನಿವೃತ್ತ ಸರ್ಕಾರಿ ಅಧಿಕಾರಿಗಳ ಮೇಲೆ ಪ್ರಧಾನಿ ಮೋದಿ ಅತಿಯಾದ ವಿಶ್ವಾಸ ತೋರಿದಂತಿದೆ. ಜೈಶಂಕರ್ ಜತೆಗೆ ನಿವೃತ್ತ ಅಧಿಕಾರಿಗಳಾದ ಆರ್.ಕೆ.ಸಿಂಗ್ ಹಾಗೂ ಹರ್​ದೀಪ್ ಸಿಂಗ್ ಪುರಿ ಕಾರ್ಯವೈಖರಿಗೂ ಮೋದಿ ಫಿದಾ ಆದಂತಿದೆ. ಇದೇ ಕಾರಣಕ್ಕೆ ಹಿಂದಿನ ಸರ್ಕಾರದಲ್ಲಿ ಅವರು ಹೊಂದಿದ್ದ ಇಲಾಖೆಯನ್ನು ಮತ್ತೆ ನೀಡಿದ್ದಾರೆ. ಸಿಂಗ್​ಗೆ ವಿದ್ಯುತ್ ಹಾಗೂ ಪುರಿಗೆ ವಸತಿ, ನಗರಾಭಿವೃದ್ಧಿ ಜವಾಬ್ದಾರಿಯಿದೆ. ಈ ಕ್ಷೇತ್ರಗಳು ಎನ್​ಡಿಎ ಸರ್ಕಾರದ ಆದ್ಯತಾ ವಲಯದಲ್ಲಿವೆ.

ನಂಬಿಕಸ್ಥನಿಗೆ ಕೃಷಿ-ಗ್ರಾಮೀಣ

ನೀತಿ ಆಯೋಗದ ಶಿಫಾರಸಿನಂತೆ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ-ಪಂಚಾಯತ್​ರಾಜ್ ಇಲಾಖೆಯನ್ನು ಒಗ್ಗೂಡಿಸಿ ಇಬ್ಬರೇ ಸಚಿವರ ನೇಮಕ ಮಾಡಲಾಗಿದೆ. ಕೃಷಿಕರ ಆದಾಯ ದುಪ್ಪಟ್ಟು ಹಾಗೂ ಗ್ರಾಮೀಣ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿಯ ಹೊಣೆಯನ್ನು ನರೇಂದ್ರ ಸಿಂಗ್ ಥೋಮರ್​ಗೆ ನೀಡಲು ಅವರ ಕಾರ್ಯವೈಖರಿಯೇ ಕಾರಣ. ಮೊದಲ ಅವಧಿಯಲ್ಲಿನ ಕೆಲಸದಿಂದ ಪ್ರಭಾವಿತರಾಗಿರುವ ಮೋದಿ, ಮಧ್ಯಪ್ರದೇಶ ಬಿಜೆಪಿಯ ಮಾಜಿ ಅಧ್ಯಕ್ಷರಿಗೆ ಮತ್ತೆ ಈ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಹೆದ್ದಾರಿಗೆ ಎಂಎಸ್​ಎಂಇ

ಕಳೆದೈದು ವರ್ಷದಲ್ಲಿ ಕೆಲಸದ ಮೂಲಕ ಮೋದಿ ಹಾಗೂ ದೇಶದ ಜನತೆಯ ಪ್ರಶಂಸೆಗೆ ಪಾತ್ರರಾದ ಸಚಿವ ನಿತಿನ್ ಗಡ್ಕರಿ. ಗಡ್ಕರಿ ಯಶಸ್ಸಿನ ಹಾದಿಗೆ ಮೋದಿ ಮನ್ನಣೆ ನೀಡಿದ್ದು, ಸತತ ಎರಡನೇ ಬಾರಿ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವಾಲಯದ ಹೊಣೆ ಹೊರಿಸಿದ್ದಾರೆ. ಇದರ ಜತೆಗೆ ನಮೋ-1 ಸರ್ಕಾರದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದ ಎಂಎಸ್​ಎಂಇ ವಲಯ ಮೇಲೆತ್ತುವ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ಗಡ್ಕರಿ ಹೆಗಲ ಮೇಲೆ ಬಿದ್ದಿದೆ.

ಖಾತೆ ಉಳಿಸಿಕೊಂಡ ಬ್ಲ್ಯೂಆಯ್ಡ್​ ಬಾಯ್ಸ್​

ಮೋದಿ ಹಾಗೂ ಷಾ ಅವರ ಬ್ಲ್ಯೂ ಆಯ್್ಡ ಬಾಯ್್ಸ ಪಕ್ಷ, ಸರ್ಕಾರ ವಹಿಸುವ ಕೆಲಸ ಮುಗಿಸುವ ವ್ಯಕ್ತಿಗಳು ಎಂಬ ಹಣೆಪಟ್ಟಿ ಹೊಂದಿರುವ ಪಿಯೂಷ್ ಗೋಯಲ್ ಹಾಗೂ ಧರ್ವೇಂದ್ರ ಪ್ರಧಾನ್​ಗೆ ಹಿಂದಿನ ಸರ್ಕಾರದಲ್ಲಿ ನೀಡಿರುವ ಖಾತೆಗಳನ್ನು ಮತ್ತೆ ನೀಡಲಾಗಿದೆ. ಜತೆಗೆ ಹೆಚ್ಚುವರಿಯಾಗಿ ವಾಣಿಜ್ಯ ಹಾಗೂ ಉಕ್ಕಿನ ಖಾತೆಯನ್ನೂ ನೀಡಲಾಗಿದೆ.

42 ಪಿಎಸ್​ಯುುಗಳ ಖಾಸಗೀಕರಣ!

ಕೇಂದ್ರ ಸರ್ಕಾರ ನಡೆಸುತ್ತಿರುವ 42 ಸಾರ್ವಜನಿಕ ಉದ್ದಿಮೆಗಳು ಶೀಘ್ರದಲ್ಲೇ ಖಾಸಗೀಕರಣಗೊಳ್ಳಲಿವೆ. ನೀತಿ ಆಯೋಗದ ಪ್ರಕಾರ ಮುಂದಿನ 100 ದಿನಗಳೊಳಗೆ ಈ ಸಂಸ್ಥೆಗಳನ್ನು ಖಾಸಗೀಕರಣ ಹಾಗೂ ಬಂಡವಾಳ ಹಿಂತೆಗೆತ ನಡೆಯಲಿದೆ. ಭಾರಿ ನಷ್ಟದಲ್ಲಿರುವ ಈ ಬಿಳಿ ಆನೆಗಳನ್ನು ಸಾಕುವುದು ಸಾಧ್ಯವಿಲ್ಲ. ಸರ್ಕಾರ ತನ್ನ ಆದ್ಯತೆಗೆ ತಕ್ಕಂತೆ ಕೆಲಸ ಮಾಡಲಿದ್ದು, ಉದ್ಯಮ ನಡೆಸುವುದನ್ನು ಖಾಸಗಿ ವಲಯಕ್ಕೆ ಬಿಡಲಾಗುವುದು ಎಂದು ನೀತಿ ಆಯೋಗ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಜುಲೈನಲ್ಲಿ ಮಂಡನೆಯಾಗಲಿರುವ ಬಜೆಟ್ ಅಧಿವೇಶನದಲ್ಲಿ ಸ್ಪಷ್ಟ ಸಂದೇಶ ದೊರೆಯಲಿದೆ.

ಶೀಘ್ರದಲ್ಲೇ ಸಮಗ್ರ ಬದಲಾವಣೆ

 • ಕಾರ್ವಿುಕ ನೀತಿಗೆ ಸಂಬಂಧಿಸಿ 44 ಭಿನ್ನ ಕಾನೂನುಗಳಿದ್ದು, ಅದನ್ನು ಸರಳೀಕರಣಗೊಳಿಸಿ ವೇತನ, ಉದ್ಯಮ ಸಂಬಂಧ, ಸಾಮಾಜಿಕ ಭದ್ರತೆ ಹಾಗೂ ಕಾರ್ಯಸ್ಥಿತಿ ಕುರಿತು ಹೊಸ ಕಾನೂನು ಬಜೆಟ್ ಅಧಿವೇಶನದಲ್ಲಿ ಮಂಡನೆ.
 • ಸಾರ್ವಜನಿಕ ಉದ್ದಿಮೆಗಳು ಬಳಸದ ಜಾಗವನ್ನು ಉದ್ಯಮಗಳಿಗೆ ನೀಡಿ ಬಂಡವಾಳ ಹೂಡಿಕೆಗೆ ಆಕರ್ಷಿಸುವುದು
 • ಉದ್ಯೋಗ ಸೃಷ್ಟಿ, ಹಣಕಾಸು ನೆರವು, ಬಂಡವಾಳ ಹೂಡಿಕೆಗೆ ಇನ್ನಷ್ಟು ಉತ್ತೇಜನ

100 ದಿನಗಳ ಮುನ್ನೋಟ

 • ನೂತನ ಶಿಕ್ಷಣ ನೀತಿ ಅನುಷ್ಠಾನ
 • ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಸೂಕ್ತ ನಿಯಮ ರಚನೆ ಹಾಗೂ ದರ ಪರಿಷ್ಕರಣೆ
 • ಕಟ್ಟಡ ಕಾಮಗಾರಿ, ಜವಳಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ
 • ರೈಲ್ವೆ ಖಾಸಗೀಕರಣ ಹಾಗೂ ಹೊಸ ಮಾರ್ಗಗಳಿಗೆ ಚಾಲನೆ.
 • ಸರ್ಕಾರದ ಆಡಳಿತ ವ್ಯವಸ್ಥೆಗೆ ನೇರ ನೇಮಕ
 • ದೇಶಾದ್ಯಂತ ಎನ್​ಆರ್​ಸಿ ಅನುಷ್ಠಾನಕ್ಕೆ ಹೆಜ್ಜೆ
 • ಆದಾಯ ತೆರಿಗೆ ಮಿತಿ ಇಳಿಕೆ
 • ಜಿಎಸ್​ಟಿ ಸುಧಾರಣೆ ಹಾಗೂ ಪೆಟ್ರೋಲಿಯಂ, ಮದ್ಯವನ್ನು ಜಿಎಸ್​ಟಿ ವ್ಯಾಪ್ತಿಗೆ ತರುವುದು

ಸ್ಮೃತಿಗೆ ಮಹಿಳಾ ಕಲ್ಯಾಣ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಅಮೇಠಿಯಲ್ಲಿ ಸೋಲಿಸುವ ಮೂಲಕ ಭಾರಿ ಸುದ್ದಿಯಲ್ಲಿರುವ ಸ್ಮೃತಿ ಇರಾನಿಗೆ ಹಾಲಿ ಜವಳಿ ಖಾತೆ ಜತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಲಾಗಿದೆ.

ಸಂಪುಟ ಭದ್ರತಾ ಸಮಿತಿ

ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಷಾ, ನಿರ್ಮಲಾ ಸೀತಾರಾಮನ್ ಹಾಗೂ ಎಸ್.ಜೈಶಂಕರ್.

23 ಸಚಿವ ಸ್ಥಾನ ಖಾಲಿ

ಮೋದಿ ಸೇರಿ ಕೇಂದ್ರ ಸಂಪುಟಕ್ಕೆ 58 ಜನರನ್ನು ಭರ್ತಿ ಮಾಡಲಾಗಿದೆ. ನಿಯಮಗಳ ಪ್ರಕಾರ ಇನ್ನೂ 23 ಸಚಿವರನ್ನು ಸೇರಿಸಿಕೊಳ್ಳಲು ಪ್ರಧಾನಿಗೆ ಅವಕಾಶವಿದೆ. ಮೊದಲ 100 ದಿನಗಳ ಕಾಲ ಹಾಲಿ ಸಚಿವರ ಕಾರ್ಯವೈಖರಿ ಆಧರಿಸಿ ಸಂಪುಟ ವಿಸ್ತರಣೆಗೆ ಮೋದಿ ಕೈ ಹಾಕಲಿದ್ದಾರೆ ಎನ್ನಲಾಗಿದೆ.

ಲೋಕಸಭೆ ಮುಂದಿನ ಸೀಟು ಯಾರಿಗೆ?

ಹದಿನೇಳನೇ ಲೋಕಸಭೆಯಲ್ಲಿ ಮುಂದಿನ ಸಾಲಿನ 20 ಸೀಟುಗಳಲ್ಲಿ ಈ ಬಾರಿ ಕೆಲ ಹೊಸ ಮುಖಗಳು ಕಾಣಿಸಿಕೊಳ್ಳಲಿವೆ. ಕಾಂಗ್ರೆಸ್​ನ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಎಲ್.ಕೆ.ಆಡ್ವಾಣಿ, ಸುಷ್ಮಾ ಸ್ವರಾಜ್, ಎಐಎಡಿಎಂಕೆಯ ಎಂ.ತಂಬಿದೊರೈ ಮೊದಲ ಸಾಲಿನಲ್ಲಿ ಕಾಣಿಸುವುದಿಲ್ಲ. ಖರ್ಗೆ ಹಾಗೂ ತಂಬಿದೊರೈ ಸೋತಿದ್ದರೆ, ಆಡ್ವಾಣಿ ಹಾಗೂ ಸುಷ್ಮಾ ಚುನಾವಣೆಗೆ ಸ್ಪರ್ಧಿಸಿಲ್ಲ. ಇದರ ಜತೆಗೆ ಬಿಜೆಡಿ ಕೂಡ ಮೊದಲ ಸಾಲಿನ ಸೀಟು ಕಳೆದುಕೊಳ್ಳಲಿದೆ. ಒಟ್ಟು 20 ಸೀಟುಗಳ ಪೈಕಿ ಬಿಜೆಪಿಗೆ 10 ಸೀಟು ಹಾಗೂ ಮೈತ್ರಿಪಕ್ಷಗಳಿಗೆ ಮೂರು ಸೀಟು ದೊರೆಯಲಿವೆ. ಉಳಿದ 7 ಸೀಟುಗಳಲ್ಲಿ ಒಂದು ಲೋಕಸಭಾ ಉಪಾಧ್ಯಕ್ಷ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸಮಾಜವಾದಿ, ಡಿಎಂಕೆ, ಟಿಎಂಸಿ ಹಾಗೂ ವೈಎಸ್​ಆರ್ ಕಾಂಗ್ರೆಸ್ ನಾಯಕರು ಆಸೀನರಾಗಲಿದ್ದಾರೆ. ಸೋನಿಯಾ ಗಾಂಧಿ ಪಕ್ಕದಲ್ಲಿ ರಾಹುಲ್ ಕೂರುತ್ತಾರೆಯೇ ಅಥವಾ ಬೇರೊಬ್ಬರನ್ನು ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗುತ್ತದೆಯೇ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಏತನ್ಮಧ್ಯೆ ಬಿಜೆಪಿಯ 10 ಸ್ಥಾನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಷಾ, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ, ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕೂರುವ ಸಾಧ್ಯತೆಯಿದೆ.

ಶೈಕ್ಷಣಿಕ ನೀತಿ ವರದಿ ಸಲ್ಲಿಕೆ

ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಶೈಕ್ಷಣಿಕ ನೀತಿಗೆ ಸಂಬಂಧಿಸಿ ಕೆ.ಕಸ್ತೂರಿ ರಂಗನ್ ವರದಿಯು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಶುಕ್ರವಾರ ಸಲ್ಲಿಕೆಯಾಗಿದೆ. ಜೂನ್ ಮೊದಲ ವಾರದಲ್ಲಿ ಈ ವರದಿಯು ಬಹಿರಂಗಗೊಳ್ಳಲಿದ್ದು, ಬಳಿಕ ಸಾರ್ವಜನಿಕರ ಅಭಿಪ್ರಾಯ ಪಡೆದು ಲೋಕಸಭೆಗೆ ಬರಲಿದೆ. ನೂತನ ಸಚಿವರಿಗೆ ಮೊದಲ ದಿನವೇ ಹೊಸ ಸವಾಲು ಎದುರಾಗಿದೆ.

ವರದಿಯ ಪ್ರಮುಖಾಂಶ: =ಭಾರತೀಯ ಶಿಕ್ಷಣ ವ್ಯವಸ್ಥೆ ಅನುಷ್ಠಾನ =ಭಾರತದ ಇತಿಹಾಸ ಹಾಗೂ ಹಿನ್ನೆಲೆಗೆ ಹೆಚ್ಚಿನ ಒತ್ತು =ಪಠ್ಯದಲ್ಲಿ ಭಾರತೀಯ ಸಾಧಕರ ಮಾಹಿತಿ ಹೆಚ್ಚಳ =ಸೆಮಿಸ್ಟರ್ ಅವಧಿಯಲ್ಲಿ ವಿದ್ಯಾರ್ಥಿಗಳು ತಾವು ಸಿದ್ಧ ಎನಿಸಿದಾಗ ನಿಗದಿತ ವಿಷಯದ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ =ಯಾವುದಾದರೂ ವಿಷಯದ ಬಗ್ಗೆ ಹೆಚ್ಚಿನ ಕಲಿಕೆ ಅಗತ್ಯ ಎಂದು ವಿದ್ಯಾರ್ಥಿಗೆ ಎನಿಸಿದರೆ ಮರು ಕಲಿಕೆಗೆ ಅವಕಾಶ =ಖಾಸಗಿ ಶಿಕ್ಷಣ ಸಂಸ್ಥೆಗಳ ಅನಿಯಮಿತ ಶುಲ್ಕ ಏರಿಕೆಗೆ ಕಡಿವಾಣ, ಶುಲ್ಕ ನಿಗದಿಗೆ ಪ್ರತ್ಯೇಕ ಸಂಸ್ಥೆ ರಚನೆ

ಜೆಡಿಯು – ಬಿಜೆಪಿ ಮೈತ್ರಿಗಿಲ್ಲ ಧಕ್ಕೆ

ಪಟನಾ: ಸಂಪುಟ ದರ್ಜೆ ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಬಿರುಕು ಮೂಡಿದೆ ಎನ್ನುವ ಬಗ್ಗೆ ಹುಟ್ಟಿಕೊಂಡಿದ್ದ ಊಹಾಪೋಹಗಳಿಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಪೂರ್ಣವಿರಾಮ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿತೀಶ್ ನಾನಾಗಲಿ ಅಥವಾ ಪಕ್ಷದ ಸಂಸದರಾಗಲಿ ಇಂತಹದ್ದೇ ಖಾತೆಬೇಕೆಂದು ಕೇಳಿಲ್ಲ. ಈ ವಿಚಾರದಲ್ಲಿ ಪಕ್ಷದ ಸಂಸದರಲ್ಲಿ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದ್ದಾರೆ. ಜೆಡಿಯುಗೆ ಒಂದು ಸಚಿವ ಸ್ಥಾನ ನೀಡುವ ಬಗ್ಗೆ ಮಾಹಿತಿ ನೀಡಿದ್ದಾಗ ಸಚಿವ ಸ್ಥಾನದ ಅಗತ್ಯವಿಲ್ಲ ಎಂದು ತಿಳಿಸಿದ್ದೆ. ಈ ಬಗ್ಗೆ ಪಕ್ಷದವರಲ್ಲೂ ಕೇಳಿದ್ದೆ. ಸರ್ಕಾರದಲ್ಲಿ ಸಾಂಕೇತಿಕ ಭಾಗವಹಿಸುವಿಕೆಯ ಅಗತ್ಯ ವಿಲ್ಲ ಎನ್ನುವುದೇ ಅವರ ಅಭಿಪ್ರಾಯವೂ ಆಗಿತ್ತು. ಹೀಗಾಗಿ ಸಚಿವ ಸ್ಥಾನ ಬೇಡವೆಂದು ತಿಳಿಸಿದೆವು. ಇದರಿಂದ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳಿ

ದರು. ಮೂಲಗಳ ಪ್ರಕಾರ ಒಬ್ಬರಿಗೆ ಸಚಿವ ಸ್ಥಾನ ನೀಡಿದರೆ ಜಾತಿ ಸಮೀಕರಣಕ್ಕೆ ಸಮಸ್ಯೆ ಆಗುತ್ತದೆ ಎನ್ನುವುದು ಜೆಡಿಯು ಆಲೋಚನೆಯಾಗಿತ್ತು.

ನಿತೀಶ್ ಒಬ್ಬ ಸ್ವಾರ್ಥಿ. ಅವರ ಅನುಕೂಲಗಳನ್ನು ಆಧರಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬಿಜೆಪಿ ಸಹಾಯದಿಂದ ಬಿಹಾರದಲ್ಲಿ ಅವರು 7 ವರ್ಷಗಳ ಕಾಲ ಸರ್ಕಾರ ನಡೆಸಿದ್ದರು. ಆದರೆ ಯಾವಾಗ ಸ್ವತಂತ್ರರಾಗಿ ಸರ್ಕಾರ ನಡೆಸಲು ಸಾಧ್ಯ ಎಂದಾಯಿತೋ ಬಿಜೆಪಿ ತೊರೆದರು.

| ಗೋಪಾಲ್ ನಾರಾಯಣ್ ಸಿಂಗ್, ಬಿಜೆಪಿ ಸಂಸದ

ಚುನಾವಣೆಯಲ್ಲಿ ಅವಮಾನಕರವಾಗಿ ಸೋತಿರುವ ಒತ್ತಡ ದೂರವಾಗಬೇಕಾದರೆ 10ರಿಂದ 15 ವರ್ಷ ಕಪಾಲಭಾತಿ ಅಭ್ಯಾಸ ಮಾಡಬೇಕು. ಅವರು ಕಪಾಲಭಾತಿ ಜತೆಗೆ ಅನುಲೋಮ ಹಾಗೂ ವಿಲೋಮ ಪ್ರಾಣಾಯಾಮ ಮಾಡಿದರೆ ಒತ್ತಡವನ್ನು ನಿಯಂತ್ರಿಸಬಹುದು.

| ಬಾಬಾ ರಾಮದೇವ್, ಯೋಗಗುರು

ಯಾವ ಖಾತೆಗೆ ಯಾರು ಚೌಕಿದಾರ್

Stay connected

278,754FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...