ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ಕಿಸ್‌ ಆಫ್‌ ಲವ್‌ನ ಫಾತೀಮಾ ವಿರುದ್ಧ ನಟ ಜಗ್ಗೇಶ್ ಆಕ್ರೋಶ!

ಬೆಂಗಳೂರು: ಅಯ್ಯಪ್ಪ ಸ್ವಾಮಿ ಭಕ್ತರ ಭಾರಿ ವಿರೋಧದ ಮಧ್ಯೆಯೂ ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿ ವಾಪಸಾಗಿರುವ ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ವಿರುದ್ಧ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ನೈತಿಕ ಪೊಲೀಸ್‌ಗಿರಿ ವಿರೋಧಿಸಿ ಕಿಸ್‌ ಆಫ್ ಲವ್‌ನಿಂದ ಸುದ್ದಿಯಾಗಿದ್ದ ರೆಹನಾ ಫಾತಿಮಾ ಅಯ್ಯಪ್ಪ ಮಾಲಾಧಾರಿಯ ವೇಷದಲ್ಲಿ ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದು, ಭಕ್ತರು ತಡೆದಿದ್ದರಿಂದಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ, ಫಾತಿಮಾ ವಿರುದ್ಧ ಕಿಡಿಕಾರಿರುವ ಜಗ್ಗೇಶ್‌ ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://twitter.com/Jaggesh2/status/1053153842819256321

ಫೋಟೊವೊಂದರಲ್ಲಿ ರೆಹಾನಾ ಫಾತಿಮಾ ಅಯ್ಯಪ್ಪ ಮಾಲಾಧಾರಿಯಂತೆ ಪೋಸ್ ನೀಡಿದ್ದಾರೆ. ಈ ಫೋಟೊವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಿಂದು ಪರ ಸಂಘಟನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಜಗ್ಗೇಶ್‌ ಟ್ವೀಟ್‌ನಲ್ಲಿ ಏನಿದೆ?

ಅನ್ಯಧರ್ಮೀಯಳು ಈ ಅವತಾರದಲ್ಲಿ ಪೋಲಿಸರ ಬೆಂಗಾವಲಿನಲ್ಲಿ ಅಯ್ಯಪ್ಪನ ದರ್ಶನ ಮಾಡಿ ಸಾಧಿಸಿ ಬಣ್ಣದ ವೇಷತೊಟ್ಟು ಜಾಲತಾಣದಲ್ಲಿ ಹಾಕಿರುವ ಪೋಸ್ಟ್. ಇದು ನಮ್ಮ ಸಂಪ್ರದಾಯಕ್ಕೆ ಕೊಡಲಿ ಪೆಟ್ಟಲ್ಲವೆ! ವಿನಾಶಕಾಲೇ ವಿಪರೀತ ಬುದ್ಧಿ! ಇಂಥವರನ್ನು ಸಂತೈಸಿ ವಿಕೃತ ಆನಂದ ಪಡುತ್ತಿರುವ ಕೇರಳ ಸರ್ಕಾರ! ಬ್ರಿಟಿಷರು ಮೊಘಲ್‌ಗಳಿಗೆ ಬಗ್ಗದ ಹಿಂಧುದರ್ಮ. ಇಂಥವರಿಗಾ? ಜೈಹಿಂದ್. ಎಂದು ಜಗ್ಗೇಶ್‌ ಟ್ವೀಟ್ ಮಾಡಿದ್ದಾರೆ.

ರೆಹಾನಾ ಫಾತಿಮಾ ಮನೆ ಧ್ವಂಸ

ಶಬರಿಮಲೆಗೆ ಪ್ರವೇಶ ಮಾಡಲು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಯತ್ನಿಸಿದ ಮರುಕ್ಷಣವೇ ಅವರ ಕೊಚ್ಚಿ ನಿವಾಸದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.

ಅತ್ತ ರೆಹಾನಾ ಫಾತಿಮಾ ಶಬರಿಮಲೆ ಗುಡ್ಡ ಹತ್ತುತ್ತಿದ್ದಂತೆಯೇ ಇತ್ತ ದುಷ್ಕರ್ಮಿಗಳ ತಂಡ ಆಕೆ ಮನೆಯನ್ನು ಧ್ವಂಸಗೊಳಿಸಿದೆ. ಪೊಲೀಸರ ಮಧ್ಯ ಪ್ರವೇಶದ ಬಳಿಕ ಉದ್ರಿಕ್ತ ಗುಂಪು ಚೆದುರಿದೆ.

ಇಂದು ಮುಂಜಾನೆ ಶಬರಿಮಲೆ ಪ್ರವೇಶಕ್ಕೆ ಪೊಲೀಸರ ಭದ್ರತೆಯಲ್ಲಿ ತೆರಳಿದ್ದ ರೆಹಾನ ಅವರು ಪರಿಸ್ಥಿತಿ ಮಿತಿ ಮೀರುವ ಸೂಚನೆ ಹಿನ್ನೆಲೆಯಲ್ಲಿ ಕೇರಳ ಐಜಿಯೊಂದಿಗೆ ನಡೆದ ಸಭೆಯಲ್ಲಿ ಸಂಧಾನಗೊಂಡು ಮತ್ತೆ ಹಿಂತಿರುಗಿದ್ದರು.