ಶಬರಿಮಲೆಗೆ ಸರ್ಕಾರವೇ ವಿಲನ್

«ಬಿಜೆಪಿ ತಂಡ ಅವಲೋಕನ , 2 ದಿನದಲ್ಲಿ ಅಮಿತ್ ಷಾಗೆ ವರದಿ»

ಮಂಗಳೂರು/ಬದಿಯಡ್ಕ: ಶಬರಿಮಲೆಯಲ್ಲಿ ರಾಜ್ಯ ಸರ್ಕಾರವೇ ಭಯಾನಕ ಪರಿಸ್ಥಿತಿ ನಿರ್ಮಾಣ ಮಾಡಿದಂತೆ ತೋರುತ್ತಿದೆ ಎಂದು ಪರಿಸ್ಥಿತಿ ಅವಲೋಕನಕ್ಕೆ ತೆರಳಿರುವ ಬಿಜೆಪಿ ನಿಯೋಗದ ಪ್ರಮುಖ, ಕೇರಳ ಬಿಜೆಪಿ ಉಸ್ತುವಾರಿಯೂ ಆಗಿರುವ ದ.ಕ. ಸಂಸದ ನಳಿನ್‌ಕುಮಾರ್ ಕಟೀಲು ಅಭಿಪ್ರಾಯಪಟ್ಟಿದ್ದಾರೆ.

ಮೇಲ್ನೋಟಕ್ಕೆ ಶಬರಿಮಲೆಯಲ್ಲಿ ಕಾಶ್ಮೀರದ ಸ್ಥಿತಿ ಕಾಣಿಸುತ್ತಿದೆ, ಎಲ್ಲಿ ನೋಡಿದರೂ ಪೊಲೀಸರೇ ತುಂಬಿದ್ದಾರೆ. ಇಂದು ಭಕ್ತರು ಸುಮಾರು 2 ಸಾವಿರ ಮಂದಿ ಇದ್ದಿರಬಹುದು, ಆದರೆ 10 ಸಾವಿರದಷ್ಟು ಭದ್ರತಾ ಸಿಬ್ಬಂದಿ ಶಬರಿಮಲೆಯಲ್ಲಿ ಇದ್ದಾರೆ. ಅವರಿಗೂ ಯಾವ ವ್ಯವಸ್ಥೆ ಇಲ್ಲ. ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಶರಣುಗರೆದರೂ ಬಂಧಿಸುತ್ತಾರೆ, ನಾಲ್ಕು ಮಂದಿ ಒಟ್ಟಿಗೆ ತೆರಳಿದರೂ ವಶಕ್ಕೆ ಪಡೆಯುತ್ತಾರೆ ಎಂದು ನಳಿನ್ ‘ವಿಜಯವಾಣಿ’ಗೆ ತಿಳಿಸಿದರು.

ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದು ಮರಳುತ್ತಿರುವಾಗ ನಮ್ಮ ಸಮ್ಮುಖ ಕೆಲವು ಯಾತ್ರಿಗಳನ್ನು ಪೊಲೀಸರು ವಿನಾಕಾರಣ ಬಂಧಿಸಿದ್ದು, ಅದಕ್ಕಾಗಿ ಪ್ರತಿಭಟನೆಯನ್ನೂ ನಡೆಸಿದ್ದೇವೆ. ಸರ್ಕಾರವೇ ಸೃಷ್ಟಿಸಿರುವ ಭೀತಿ, ಗೊಂದಲದ ವಾತಾವರಣದಿಂದಾಗಿ ಬರುವ ಯಾತ್ರಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಮುರಳೀಧರನ್, ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ಪದ್ಮಕುಮಾರ್, ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ ಹಾಗೂ ಸಂತೋಷ್ ಕುಮಾರ್ ರೈ ಬೊಳಿಯಾರ್ ತಂಡದಲ್ಲಿದ್ದರು. ಅವಲೋಕನ ಕುರಿತ ವರದಿಯನ್ನು ಎರಡು ದಿನಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ನಳಿನ್ ತಿಳಿಸಿದ್ದಾರೆ.

ವ್ರತಾನುಷ್ಠಾನ ಚರ್ಚೆ
ಬಿಜೆಪಿ ತಂಡ ಅಯ್ಯಪ್ಪ ಮಾಲೆ ಧಾರಣೆ ಮಾಡಿರಲಿಲ್ಲ, ಆದರೆ ಕಪ್ಪು ಧೋತಿ, ಶಾಲು ಹಾಗೂ ಚಪ್ಪಲಿ ಧರಿಸಿದ್ದರು ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಯಿತು. ಬಿಜೆಪಿ ನಿಯೋಗದ ಸದಸ್ಯರು ಪಂಪಾ, ನೀಲಕ್ಕಲ್, ನಡುಪಟದಲ್ ಮೂಲಕ ತೆರಳಿದ್ದು, 18 ಮೆಟ್ಟಿಲು ಏರದೆ ಬೇರೆ ದಾರಿಯ ಮೂಲಕ ಅಯ್ಯಪ್ಪ ದರ್ಶನ ಪಡೆದಿದ್ದಾರೆ.

ಭಕ್ತರ ಬಿಡುಗಡೆಗೊಳಿಸಿದ ನಳಿನ್
ಶಬರಿಮಲೆಯಲ್ಲಿ ಮಂಗಳವಾರ ಒಂಭತ್ತು ಅಯ್ಯಪ್ಪ ವ್ರತಧಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶಬರಿಮಲೆಯಲ್ಲಿದ್ದ ಸಂಸದ ನಳಿನ್ ಈ ವಿಚಾರ ತಿಳಿದು ಪಂಪಾ ಠಾಣೆಗೆ ತೆರಳಿ ಯಾವ ಕಾನೂನಿನನ್ವಯ ಭಕ್ತರನ್ನು ವಶಕ್ಕೆ ತೆಗೆದುಕೊಂಡಿದ್ದೀರಿ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಪೊಲೀಸರು ಈ ಭಕ್ತರನ್ನು ಬಿಡುಗಡೆ ಮಾಡಿ ಕಳುಹಿಸಿದ್ದಾರೆ. ಈ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ನಳಿನ್ ಸ್ಥಳೀಯ ಎಸ್‌ಪಿಯನ್ನು ಆಗ್ರಹಿಸಿದ್ದಾರೆ.


ಕೇರಳ ಸರ್ಕಾರದ ವಿರುದ್ಧ ವಿಹಿಂಪ ರಾಷ್ಟ್ರೀಯ ಚಳವಳಿ ಎಚ್ಚರಿಕೆ

ನವದೆಹಲಿ: ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ವಿರುದ್ಧ ಕೇರಳ ಸರ್ಕಾರ ಎಸಗುತ್ತಿರುವ ದೌರ್ಜನ್ಯವನ್ನು ಸಹಿಸಲಾಗುತ್ತಿಲ್ಲ. ಇದು ಹೀಗೆ ಮುಂದುವರಿದಲ್ಲಿ ಕೇರಳ ಸರ್ಕಾರದ ವಿರುದ್ಧ ನಾವು ರಾಷ್ಟ್ರೀಯ ಚಳವಳಿ ಪ್ರಾರಂಭಿಸಲಿದ್ದೇವೆ ಎಂದು ವಿಶ್ವ ಹಿಂದು ಪರಿಷತ್‌ನ ಅಂತಾರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಪರಿಣಾಮ ಈ ಸಮಸ್ಯೆ ಉದ್ಭವವಾಗಿದೆ. ಸರ್ಕಾರ ಕೂಡ ಭಕ್ತರ ಭಾವನೆಗಳನ್ನು ಕೆರಳಿಸಿರುವುದಲ್ಲದೆ, ಶಬರಿಮಲೆಯಲ್ಲಿ ಭಕ್ತರಿಗೆ ಯಾವುದೇ ಮೂಲಸೌಕರ್ಯಗಳನ್ನು ಒದಗಿಸದೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿ ಕಾರಿದರು.

ಅಯ್ಯಪ್ಪ ಭಕ್ತರನ್ನು ವಿಎಚ್‌ಪಿಯ ಗೂಂಡಾಗಳು ಎಂದು ಬಿಂಬಿಸುತ್ತಿರುವುದು ವಿಪರ್ಯಾಸ. ಜನರ ಭಾವನೆಗಳನ್ನು ಗೌರವಿಸದ ಸರ್ಕಾರವನ್ನು ವಜಾಗೊಳಿಸಬೇಕು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವ ಅನಿವಾರ್ಯ ಸನ್ನಿವೇಶ ನಿರ್ಮಾಣವಾಗಿದೆ. ಸುಪ್ರೀಂಕೋರ್ಟ್ ವಿಚಾರಣೆಗೆ ಜನವರಿ ತನಕ ಕಾಯಲು ಸಾಧ್ಯವಿಲ್ಲ. ಅಯ್ಯಪ್ಪನ ಭಕ್ತರ ಬಗ್ಗೆ ಕನಿಷ್ಠ ಕಾಳಜಿಯನ್ನಾದರೂ ಸುಪ್ರೀಂ ಕೋರ್ಟ್ ತೋರಿ ಶೀಘ್ರ ವಿಚಾರಣೆಗೆ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸಚಿವ ಕಣ್ಣಂತಾನಂ ಪರಿಶೀಲನೆ

ಕೇಂದ್ರ ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವ ಅಲ್ಫೋನ್ಸಾ ಕಣ್ಣಂತಾನಂ ಸೋಮವಾರ ಬೆಳಗ್ಗೆ ಪಂಪಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾತ್ರಿಗಳಿಗೆ ಶೌಚಗೃಹ, ಕೊಠಡಿ, ನೀರಿನ ಸರಬರಾಜು ಇತ್ಯಾದಿ ಮೂಲಸೌಕರ್ಯ ಕಲ್ಪಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ 100 ಕೋಟಿ ರೂ. ಮಂಜೂರು ಮಾಡಿದರೂ ಸರ್ಕಾರ ಖರ್ಚು ಮಾಡಿಲ್ಲ ಎಂದು ಆರೋಪಿಸಿದರು.

ಅಪ್ಪ, ಅರವಣ ತಯಾರಿ ಸ್ಥಗಿತ

ಅಯ್ಯಪ್ಪ ಸನ್ನಿಧಾನದಲ್ಲಿ ತುಪ್ಪಾಭಿಷೇಕ್ಕಾಗಿ ರಾತ್ರಿ ತಂಗಲು ಅನುಮತಿ ಇರದ ಹಿನ್ನೆಲೆಯಲ್ಲಿ ಪ್ರಸಾದ ರೂಪದಲ್ಲಿ ಅಪ್ಪ ಹಾಗೂ ಅರವಣ ಪಾಯಸ ಮಾರಾಟದಲ್ಲಿ ಭಾರಿ ಇಳಿಕೆಯಾಗಿದೆ. ಇದರಿಂದಾಗಿ ಅಪ್ಪ ಮತ್ತು ಅರವಣ ತಯಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿವಾದಗಳ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗಿದ್ದು, ದೇವಸ್ಥಾನದ ಆದಾಯದಲ್ಲಿ ಭಾರಿ ಇಳಿಕೆಯಾಗಿದೆ.

ಸರ್ಕಾರಿ ನೌಕರ ಅಮಾನತು

ಭಾನುವಾರ ರಾತ್ರಿ ಶಬರಿಮಲೆಯಲ್ಲಿ ನಾಮಜಪ ಪ್ರತಿಭಟನೆಯ ನೇತೃತ್ವ ವಹಿಸಿದ ಆರೋಪದಲ್ಲಿ ಮಳಯಟ್ಟೂರು ಸರ್ಕಾರಿ ಫಾರ್ಮಸಿಯ ಉದ್ಯೋಗಿಯಾಗಿರುವ ಆರ್.ರಾಜೇಶ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ರಾಜೇಶ್ ಆರ್‌ಎಸ್‌ಎಸ್ ನಿಕಟಪೂರ್ವ ಜಿಲ್ಲಾ ಕಾರ್ಯವಾಹರಾಗಿದ್ದು, ಪ್ರಸ್ತುತ ಎರ್ನಾಕುಳಂ ಮೂವಾಟ್ಟಿಪುಳ ಸಂಘ ಜಿಲ್ಲೆಯ ಕಾರ್ಯಕಾರಿ ಸದಸ್ಯರಾಗಿದ್ದಾರೆ.