ಬಿಗ್‌ಬಾಸ್‌ ಮನೆಯಲ್ಲಿ ಮಾನಸಿಕ ಕಿರುಕುಳ? ಮಹಿಳಾ ಆಯೋಗಕ್ಕೆ ದೂರು ನೀಡಿದ ಕವಿತಾ

ಬೆಂಗಳೂರು: ಕಿರುತೆರೆಯ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಅವರು ಬಿಗ್‌ಬಾಸ್‌ ಸೀಸನ್‌ 6ರ ಸ್ಪರ್ಧಿಯಾಗಿದ್ದ ಆಂಡಿ ಎಂಬುವರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಆ್ಯಂಡಿ ತನಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ. ಆ್ಯಂಡಿ ಹಾಗೂ ಕವಿತಾ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿಗಳಾಗಿದ್ದರು.

ಬಿಗ್‌ಬಾಸ್‌ನಲ್ಲಿ ನಾನು ಸ್ಪರ್ಧಿಯಾಗಿದ್ದೆ. ಅಲ್ಲಿ ಮತ್ತೊಬ್ಬ ಸ್ಪರ್ಧಿ ನನಗೆ ಕಿರುಕುಳ ನೀಡುತ್ತಿದ್ದರು. ಕೆಟ್ಟದಾಗಿ ಮಾತನಾಡುವುದು ಅಲ್ಲದೆ ನನ್ನ ಹಿಂದೆ ಸುತ್ತಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿಗೆ ಕವಿತಾ ದೂರು ನೀಡಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಕವಿತಾ ಜತೆ ಆಂಡಿ ಅಸಭ್ಯವಾಗಿ ವರ್ತಿಸುತ್ತಿದ್ದರಂತೆ. ಆ್ಯಂಡಿ ಅಸಭ್ಯ ವರ್ತನೆಯಿಂದಾಗಿ ಬೇಸತ್ತಿದ್ದ ಕವಿತಾ, ಬಿಗ್‌ಬಾಸ್‌ ಮನೆಯಿಂದ ಹೊರಬಂದು ಎರಡು ವಾರ ಸುಮ್ಮನಿದ್ದು ಇದೀಗ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ. (ದಿಗ್ವಿಜಯ ನ್ಯೂಸ್)