ಅವಿನ್ ಶೆಟ್ಟಿ, ಉಡುಪಿ
ನಗರ ಕೇಂದ್ರಿತ ಪ್ರದೇಶಗಳಲ್ಲಿ ಸಲಿಂಗಕಾಮಿಗಳ ಹಾವಳಿ ಹೆಚ್ಚುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬರುತ್ತಿದೆ. ಬೆಂಗಳೂರು, ಮುಂಬೈನಂಥ ಮಹಾನಗರದಲ್ಲಿದ್ದ ಇಂಥ ಕಿರುಕುಳದ ಹಾವಳಿ ಕರಾವಳಿಗೂ ಕಾಲಿಟ್ಟಿದೆ.
ಬಸ್, ರೈಲ್ವೆ ನಿಲ್ದಾಣ, ಸಾರ್ವಜನಿಕ ಉದ್ಯಾನವನ, ಚಿತ್ರಮಂದಿರಗಳಲ್ಲಿ ಯುವಕರು ಮತ್ತು ಮಧ್ಯ ವಯಸ್ಕ ಪುರುಷರ ಮೇಲೆ ಸಲಿಂಗ ಕಾಮ ದೌರ್ಜನ್ಯ ಹೆಚ್ಚುತ್ತಿದೆ. ಕೆಲವರು ಹಗಲಿನಲ್ಲೇ ಕೈಚಳಕ ತೋರಿದರೆ, ಬಸ್, ರೈಲ್ವೆ ನಿಲ್ದಾಣಗಳಲ್ಲಿ ರಾತ್ರಿ 8- 9 ಗಂಟೆ ಬಳಿಕ ಹಾವಳಿ ಶುರುವಾಗುತ್ತದೆ. ದೂರದ ಊರುಗಳಿಂದ ಬಂದು ಬಸ್ ಕಾಯುತ್ತಿದ್ದರೆ ಹತ್ತಿರ ಬಂದು ನಿಲ್ಲುವುದು, ಮೈ ತಾಗಿಸುವುದು, ಮೈ ಮೇಲೆ ಕೈ ಹಾಕುವುದು, ದೇಹ ಸ್ಪರ್ಶಿಸುವುದು, ಅಸಭ್ಯವಾಗಿ ವರ್ತಿಸುವುದು ಮಾಡುತ್ತಾರೆ. ನಗರದ ರೈಲ್ವೆ ಮತ್ತು ಚಿತ್ರಮಂದಿರಗಳಲ್ಲೂ ಇಂಥ ಕಿರುಕುಳ ನಡೆಯುತ್ತದೆ ಎಂಬ ಆರೋಪ ಕೇಳಿ ಬಂದಿದೆ.
ಪಾರ್ಕ್ಗಳಲ್ಲಿ ಹೆಚ್ಚು: ನಗರದ ಪ್ರಮುಖ ಉದ್ಯಾನವನ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಕೆಲ ತಿಂಗಳಿನಿಂದ ಈ ಹಾವಳಿ ಹೆಚ್ಚಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ವಿಷಯದ ಬಗ್ಗೆ ಆರು ತಿಂಗಳ ಹಿಂದೆ ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗಿದೆ. ಮಧ್ಯಾಹ್ನ, ಸಾಯಂಕಾಲ ಪಾರ್ಕ್ನ ಬೆಂಚ್ ಮೇಲೆ ಜನ ಕುಳಿತಿದ್ದರೆ ಪಕ್ಕದಲ್ಲಿ ಕುಳಿತು ಮೈ ಸವರುವುದು, ಕೈ, ಕಣ್ಸನ್ನೆ ಮೂಲಕ ಕೆಟ್ಟದಾಗಿ ವರ್ತಿಸುವುದು ನಡೆಯುತ್ತಿದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.
ಹೇಳಿಕೊಳ್ಳಲು ಮುಜುಗರ: ಬಾಲಕರು, ಕಾಲೇಜು ವಿದ್ಯಾರ್ಥಿಗಳ ಮೇಲೂ ಕಿರುಕುಳ ನಡೆಯುತ್ತದೆ. ಇಂಥ ಪ್ರಕರಣಗಳು ಹೊರಗೆ ಬರುತ್ತಿಲ್ಲ. ಹೆಚ್ಚಿನವರು ಹೇಳಿಕೊಳ್ಳಲು ಮುಜುಗರ ಪಡುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ. ಬಾಲಕರಿಗೆ, ವಿದ್ಯಾರ್ಥಿಗಳಿಗೆ ದುಡ್ಡಿನ ಆಸೆ, ಇತರೆ ಆಮಿಷ ತೋರಿಸಿ ಸಲಿಂಗ ಕಾಮಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಇದೆ.
ಉಡುಪಿ ನಗರದ ಸಾರ್ವಜನಿಕ ಉದ್ಯಾನವನ, ಬಸ್ ನಿಲ್ದಾಣಗಳಲ್ಲಿ ಬೀಟ್ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಈ ರೀತಿಯ ಕಿರುಕುಳಕ್ಕೆ ಸಂಬಂಧಿಸಿ ನಿರ್ದಿಷ್ಟ ಪ್ರಕರಣಗಳಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಕುಮಾರಚಂದ್ರ ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಉಡುಪಿ ಜಿಲ್ಲೆಉಡುಪಿ ನಗರದ ಭುಜಂಗ ಪಾರ್ಕ್, ಕೆಎಸ್ಆರ್ಟಿಸಿ, ಸರ್ವೀಸ್ ಬಸ್ ನಿಲ್ದಾಣದಲ್ಲಿ ಸಲಿಂಗ ಕಾಮ ಕಿರುಕುಳ ಹೆಚ್ಚಿದೆ. ಸಾರ್ವಜನಿಕರಿಂದ ಈ ಬಗ್ಗೆ ಸಾಕಷ್ಟು ದೂರು ಕೇಳಿ ಬಂದಿತ್ತು. ನಿರ್ದಿಷ್ಟವಾಗಿ ಯಾರು ಎಂದು ತಿಳಿದು ಬರುವುದಿಲ್ಲ. ಪ್ರತಿರೋಧ ಬಂದ ಕೂಡಲೆ ಜಾಗ ಖಾಲಿ ಮಾಡುತ್ತಾರೆ. ಇಂಥವರು ಹೆಚ್ಚಾಗಿ ಸಾರ್ವಜನಿಕ ಸ್ಥಳವನ್ನೇ ಆಯ್ದುಕೊಳ್ಳುತ್ತಾರೆ. ಆರು ತಿಂಗಳ ಹಿಂದೆ ನಗರದ ಪೊಲೀಸರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ.
ತಾರಾನಾಥ್ ಮೇಸ್ತ ಸಾಮಾಜಿಕ ಕಾರ್ಯಕರ್ತ