ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿ ಫ್ಲಿಪ್​ಕಾರ್ಟ್​​ ಸಿಇಒ ಸ್ಥಾನ ತೊರೆದ ಬಿನ್ನಿ ಬನ್ಸಾಲ್

ನವದೆಹಲಿ: ಭಾರತೀಯ ಇ-ಕಾಮರ್ಸ್‌ ಸಂಸ್ಥೆಯಾದ ಫ್ಲಿಪ್‌ಕಾರ್ಟ್‌ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲೈಂಗಿಕ ಆರೋಪದ ಸ್ವತಂತ್ರ ತನಿಖೆಯ ನಂತರ ಸಿಇಒ ಹುದ್ದೆಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ.

37 ವರ್ಷದ ಬಿನ್ನಿ ಬನ್ಸಾಲ್‌ ಅವರ ಮೇಲೆ ಕೇಳಿಬಂದಿದ್ದ ಆರೋಪದ ಕುರಿತು ಸ್ವತಂತ್ರ ತನಿಖೆ ನಡೆಸಿದ ತಕ್ಷಣವೇ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮಾತೃಸಂಸ್ಥೆ ವಾಲ್‌ಮಾರ್ಟ್‌ ಹೇಳಿದೆ.

ಕಳೆದ ಜುಲೈ ಅಂತ್ಯದಲ್ಲಿಯೇ ಆರೋಪ ಕೇಳಿಬಂದಿತ್ತು. ಯಾವುದೇ ಮಾಹಿತಿಯನ್ನು ಸಾರ್ವಜನಿಕಗೊಳಿಸಬಾರದೆಂದು ಅವರಿಂದ ಮನವಿ ಕೇಳಿಬಂದ ಹಿನ್ನೆಲೆಯಲ್ಲಿ ವಿಷಯವನ್ನು ಬಹಿರಂಗಗೊಳಿಸಿರಲಿಲ್ಲ. ಸಂತ್ರಸ್ತೆಯು ಮಾಜಿ ಫ್ಲಿಪ್‌ಕಾರ್ಟ್‌ ಉದ್ಯೋಗಿಯಾಗಿದ್ದು, ಅಲ್ಲಿನ ಪರಿಸ್ಥಿತಿಯಿಂದಾಗಿ ಕೆಲಸವನ್ನೇ ತೊರೆದಿದ್ದರು ಎಂದು ಸಂತ್ರಸ್ತೆಗೆ ಸಂಬಂಧಿಸಿದವರೊಬ್ಬರು ತಿಳಿಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ ಆಕೆ ಫ್ಲಿಪ್​ಕಾರ್ಟ್​ ನೌಕರಳಲ್ಲ ಎಂದು ಹೇಳಲಾಗಿದೆ.

ಬಿನ್ನಿ ವಿರುದ್ಧದ ಆರೋಪ ಕುರಿತ ತನಿಖೆಯಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲದಿದ್ದರೂ ಕೂಡ ಬಿನ್ನಿ ತಮ್ಮ ‘ವ್ಯವಹಾರದಲ್ಲಿ ಪಾರದರ್ಶಕತೆ ಕೊರತೆ ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿರುವುದರಿಂದ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ವಾಲ್‌ಮಾರ್ಟ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆದರೆ, ತನಿಖಾಧಿಕಾರಿಗಳು ಮಹಿಳೆ ಮತ್ತು ಬಿನ್ನಿ ಒಪ್ಪಿತ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ತೀರ್ಮಾನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಬಿನ್ನಿ ರಾಜೀನಾಮೆ ಕುರಿತು ವಾಲ್‌ಮಾರ್ಟ್‌ ಘೋಷಿಸಿದ ಬಳಿಕ ಮಾತನಾಡಿರುವ ಬಿನ್ನಿ ಫ್ಲಿಪ್‌ಕಾರ್ಟ್‌ನಲ್ಲಿನ ಷೇರು ಉಳಿಸಿಕೊಳ್ಳುವ ಜತೆಗೆ ಮಂಡಳಿ ಸದಸ್ಯನಾಗಿ ಮುಂದುವರಿಯುತ್ತೇನೆ ಎಂದು ತಿಳಿಸಿದ್ದಾರೆ.

ಅಮೆರಿಕ ಮೂಲದ ವಾಲ್​ಮಾರ್ಟ್​ ಆಗಸ್ಟ್‌ನಲ್ಲಿ ಫ್ಲಿಪ್​ಕಾರ್ಟ್​ ಅನ್ನು 16 ಬಿಲಿಯನ್​ ಡಾಲರ್​ಗೆ ಖರೀದಿಸಿತ್ತು. ಸದ್ಯ ಕಲ್ಯಾಣ್ ಕೃಷ್ಣಮೂರ್ತಿ ಫ್ಲಿಪ್​ಕಾರ್ಟ್​ ಸಿಇಒ ಆಗಿ ಮುಂದುವರಿಯಲಿದ್ದಾರೆ. (ಏಜೆನ್ಸೀಸ್​)