ಲೈಂಗಿಕ ದೌರ್ಜನ್ಯದ ವಿರುದ್ಧ #Me Too ಚಳವಳಿ: ಐಶ್ವರ್ಯಾ ರೈ ಹೇಳಿದ್ದೇನು?

ಮುಂಬೈ: #Me Too ಚಳವಳಿಗೆ ಬೆಂಬಲ ನೀಡಿರುವ ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈ ಬಚ್ಚನ್​, ನಾನು ಲೈಂಗಿಕ ದೌರ್ಜನ್ಯದ ಬಗ್ಗೆ ಈ ಹಿಂದೆಯೇ ಮಾತನಾಡಿದ್ದೆ. ಈಗಲೂ ಮಾತನಾಡುತ್ತಿದ್ದೇನೆ. ಮುಂದೆಯೂ ಮಾತನಾಡುವೆ ಎಂದು ಹೇಳಿದ್ದಾರೆ.

ಈಗಾಗಲೇ ಬಾಲಿವುಡ್​ ನಟಿಯರಾದ ಸೋನಮ್ ಕಪೂರ್​, ಸ್ವರಾ ಭಾಸ್ಕರ್​, ಟ್ವಿಂಕಲ್ ಖನ್ನಾ, ಪ್ರಿಯಾಂಕಾ ಛೋಪ್ರಾ ಲೈಂಗಿಕ ಶೋಷಣೆ ವಿರುದ್ಧ ಧ್ವನಿ ಎತ್ತಿದ್ದಾರೆ.

ಈಗ ಇದಕ್ಕೆ ಬೆಂಬಲ ಸೂಚಿಸಿರುವ ಐಶ್ವರ್ಯಾ ರೈ, ಲೈಂಗಿಕವಾಗಿ ಶೋಷಣೆಗೆ ಒಳಗಾಗಿರುವ ಬಗ್ಗೆ ಆಗಲೇ ಹೇಳಬೇಕು, ಈಗಲೇ ಹೇಳಬೇಕು ಎಂದೇನೂ ಇಲ್ಲ. ತಮಗಾದ ಕೆಟ್ಟ ಅನುಭವನ್ನು ಹೇಳಿಕೊಂಡಾಗ ಸಹಾಯ ಮಾಡಲು ಸಾಧ್ಯವಾಗುತ್ತದೆ. ಮಹಿಳೆಯರು ಆತ್ಮವಿಶ್ವಾಸ, ಸ್ಥೈರ್ಯದಿಂದ ಹಂಚಿಕೊಳ್ಳಬೇಕು. ಅದರಲ್ಲೂ ಈಗ ಚಳವಳಿ ರೂಪದಲ್ಲಿ ಲೈಂಗಿಕ ದೌರ್ಜನ್ಯವನ್ನು ಹೊರಗೆಳೆಯುತ್ತಿರುವುದು ಸಂತಸ ತಂದಿದೆ ಎಂದರು.

ಐಶ್ವರ್ಯಾ ರೈ 2002ರಲ್ಲಿ ಸಲ್ಮಾನ್​ ಖಾನ್​ ತಮ್ಮ ಜತೆ ಅನುಚಿತವಾಗಿ ವರ್ತಿಸಿದ್ದಾಗಿ ಹೇಳಿದ್ದರು. ಅದಾದ ನಂತರ, ಸಲ್ಮಾನ್​ ಖಾನ್​ ಮತ್ತು ನಾನು ದೂರವಾದ ಬಳಿಕ ಅವರು ನನಗೆ ಫೋನ್​ ಮಾಡಿ ಕೆಟ್ಟದಾಗಿ ಮಾತನಾಡುತ್ತಿದ್ದರು. ಆದರೆ, ಅದೃಷ್ಟವಶಾತ್​ ಅದರಿಂದ ಹೊರಬಂದೆ. ನಂತರ ಏನೂ ಆಗೇ ಇಲ್ಲ ಎಂಬಂತೆ ಕೆಲಸಕ್ಕೆ ಹೋಗಲು ಪ್ರಾರಂಭಿಸಿದೆ ಎಂದು ಹೇಳಿದ್ದರು.

ತನುಶ್ರೀ ದತ್ತಾ ನಾನಾ ಪಾಟೇಕರ್​ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಬೆನ್ನಲ್ಲೇ ಅಲೋಕ್​ ನಾಥ್​, ಉತ್ಸವ್​ ಚರ್ಕವರ್ತಿ, ವಿಕಾಸ್​ ಬಹ್ಲು ಮತ್ತಿತರ ವಿರುದ್ಧವೂ ಈ ಆರೋಪ ಕೇಳಿಬಂದಿತ್ತು.