ಸುಧಾರಿತ ಜೀವನಕ್ಕಾಗಿ ವಾರದ ಆರು ದಿನ ಆರು ಬಾರಿ ಲೈಂಗಿಕ ಕ್ರಿಯೆ ನಡೆಸಿ ಎಂದು ಉದ್ಯೋಗಿಗಳಿಗೆ ಸಲಹೆ!

ಬೀಜಿಂಗ್: ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಬೆಳೆದ ಚೀನಾ ಮೂಲದ ಅಲಿಬಾಬ ಸಂಸ್ಥೆಯ ಸಂಸ್ಥಾಪಕ ಜಾಕ್​ ಮಾ ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮುಂದುವರಿದ ಭಾಗದಂತೆ ಮತ್ತೆ ಹೇಳಿಕೆ ನೀಡಿ ಭಾರೀ ಸುದ್ದಿಗೆ ಗ್ರಾಸವಾಗಿದ್ದಾರೆ.

ದಿನಕ್ಕೆ ‘996’ ಫಾರ್ಮುಲದ ಪ್ರಕಾರ ದುಡಿಯುವಂತೆ ಅಂದರೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆ ತನಕ ಕೆಲಸ ಮಾಡಬೇಕು. ಅಂಥ ಯುವಕರನ್ನು ಮಾತ್ರ ನಾನು ನನ್ನ ಕಂಪನಿಗೆ ಸ್ವಾಗತಿಸುತ್ತೇನೆ ಎಂದು ಹೇಳಿ ವಿವಾದಕ್ಕೀಡಾಗಿದ್ದ ಜಾಕ್ ಮಾ ಅವರು, ಇದೀಗ ತಮ್ಮ ಕಂಪನಿ ಸಿಬ್ಬಂದಿ “ಮನೆ ಮತ್ತು ಕೆಲಸ ಎರಡನ್ನೂ ಹೊಂದಾಣಿಕೆ ಮಾಡಿಕೊಂಡು ಸುಧಾರಿತ ಜೀವನ ನಡೆಸಲು “669” ಸೂತ್ರ ಪಾಲಿಸಿ” ಎಂದು ಸಲಹೆ ನೀಡಿದ್ದಾರೆ.

669 ಅಂದರೆ ನಿಮ್ಮ ಜೀವನದ ಸುಧಾರಣೆಗಾಗಿ ವಾರದಲ್ಲಿ ಆರು ದಿನ ಆರು ಬಾರಿ ಸೆಕ್ಸ್‌ ಮಾಡಿ, ಸಮಯ ಸುಮಾರು 9 ಗಂಟೆ ಆಗಿರಲಿ ಎಂದು ಚೀನಾದ ಅಗರ್ಭ ಶ್ರೀಮಂತ ಜಾಕ್‌ ಮಾ ಅವರು ತಮ್ಮ ಕಂಪನಿಯ ಉದ್ಯೋಗಿಯೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೇಳಿದ್ದಾರೆ. ಹಾಗೆಯೇ ಕೆಲಸದ ವೇಳೆ 996 ಸೂತ್ರ, ನಿಮ್ಮ ಜೀವನದಲ್ಲಿ 669 ಸೂತ್ರವನ್ನು ಪಾಲಿಸಲೇಬೇಕು ಎಂದು ಹೇಳಿದ್ದಾರೆ.

ಇತ್ತೀಚೆಗೆ ಕಂಪೆನಿಯ ಸಭೆ ಒಂದರಲ್ಲಿ ಮಾತನಾಡಿದ್ದ ಜಾಕ್ ಮಾ, ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ‘996’ ಸೂತ್ರದ ಪ್ರಕಾರ ದುಡಿಯಬೇಕು. ದಿನಕ್ಕೆ 12 ಗಂಟೆಗಳಂತೆ ವಾರದ 6 ದಿನಗಳಲ್ಲಿ ಶ್ರಮಿಸಬಲ್ಲ ಉದ್ಯೋಗಿಗಳು ಮಾತ್ರ ತಮ್ಮ ಕಂಪನಿಗೆ ಬೇಕು. 8 ಗಂಟೆಗಳ ಆಫೀಸ್‌ ಲೈಫ್ ಸ್ಟೈಲ್ ಬಯಸುವ ಉದ್ಯೋಗಿಗಳು ಆಲಿಬಾಬಾ ಗ್ರೂಪ್‌ಗೆ ಅಗತ್ಯವಿಲ್ಲ ಎಂದಿದ್ದರು. ಇವರ ಈ ರೀತಿಯ ಹೇಳಿಕೆಯು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಸದ್ಯ ಚೀನಾದ ಕೆಲವು ಕಂಪೆನಿಗಳಲ್ಲಿ 996 ಗಂಟೆ ದುಡಿಯುವ ಸಿಸ್ಟಮ್ ಇದೆ. ಆದರೆ ಚೀನಾದ ಕಾರ್ಮಿಕ ಕಾನೂನುಗಳ ಪ್ರಕಾರ ದಿನಕ್ಕೆ 8 ಗಂಟೆಗಿಂತ ಹೆಚ್ಚು ಕಾಲ ಸಿಬ್ಬಂದಿಯನ್ನು ದುಡಿಸುವಂತಿಲ್ಲ. ವಾರಕ್ಕೆ ಸರಾಸರಿ 44 ಗಂಟೆಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ. (ಏಜೆನ್ಸೀಸ್)

Leave a Reply

Your email address will not be published. Required fields are marked *