ದುರ್ನಾತ ವಾತಾವರಣದಲ್ಲಿ ಜನರ ಬದುಕು

ಚಿಕ್ಕಮಗಳೂರು: ಕೋಟೆ ಬಡಾವಣೆ, ಕುವೆಂಪು ನಗರ, ಹೊಸಮನೆ ಬಡಾವಣೆ ಪ್ರದೇಶದಲ್ಲಿ ಹೋಗುವ ಜನರು ಮೂಗು ಮುಚ್ಚಿಕೊಂಡೇ ಹೋಗಬೇಕು. ಮೂಗು ಮುಚ್ಚಿಕೊಂಡು ಬನ್ನಿ ಎಂಬ ಬೋರ್ಡ್ ಹಾಕುವುದು ಮಾತ್ರ ಇಲ್ಲಿ ಬಾಕಿ ಉಳಿದಿದೆ. ಏಕೆಂದರೆ ಅಷ್ಟೊಂದು ದುರ್ನಾತ ಹಬ್ಬಿದೆ.

ಇಂತಹ ಅಸಹ್ಯ ವಾತಾವರಣದಿಂದ ಪಾರು ಮಾಡುವಂತೆ ನೂರಾರು ಬಾರಿ ಮನವಿ ಮಾಡಿದರೂ ಯಾರೂ ಇವರ ಅಹವಾಲಿಗೆ ಓಗೊಟ್ಟಿಲ್ಲ. ಪ್ರತಿಷ್ಠಿತರು ಈ ಬಡಾವಣೆಗಳಲ್ಲಿ ವಾಸ ಮಾಡುತ್ತಾರೆ. ಹಾಗಾಗಿ ಬಹಳಷ್ಟು ನಾಗರಿಕರು ಈ ಬಡಾವಣೆಗೆ ಬಂದು ಹೋಗುತ್ತಾರೆ. ಅವರೆಲ್ಲರೂ ಗಬ್ಬು ವಾಸನೆ ಕುಡಿಯುವುದು ಅನಿವಾರ್ಯ.

ಯಾವಾಗಲೊಮ್ಮೆ ಬರುವವರಿಗೆ ಇಂಥ ಯಾತನೆಯಾದರೆ, ಇಲ್ಲಿಯೇ ಮನೆ ಕಟ್ಟಿಕೊಂಡು ವಾಸ ಮಾಡುವವರು ನರಕಾನುಭವ ಅನುಭವಿಸಲೇಬೇಕಿದೆ.

ಹೊಸಮನೆ, ಕೋಟೆ, ಜಯನಗರ, ಕುವೆಂಪುನಗರ, ವಿಜಯನಗರ ಸೇರಿ ಕೆಲ ಬಡಾವಣೆ ಹಾದು ಹೋಗುತ್ತಿರುವ ಸಣ್ಣ ನೀರಾವರಿ ಇಲಾಖೆಯ ಶಾಖಾ ನಾಲೆಗೆ ಒಳಚರಂಡಿ ನೀರು ಸೇರ್ಪಡೆಯಾಗಿದೆ. ರಾಮೇಶ್ವರ ಕೆರೆಯಿಂದ ನೀರು ಪೂರೈಕೆಗಿದ್ದ ಈ ನಾಲೆ ಈಗ ಒಳಚರಂಡಿ ನೀರು ಹರಿಯುವ ಗಟಾರವಾಗಿದೆ.

ಉಪ್ಪಳ್ಳಿಯಿಂದ, ಪಾಯಸ್ ಕಾಂಪೌಂಡ್, ಬೋಳರಾಮೇಶ್ವರ ಸಮೀಪ, ಜಯನಗರ, ವಿಜಯನಗರ, ಕೋಟೆ ಕಣದಾಳು ರಸ್ತೆಯಿಂದ ಕೋಟೆ ಕೆರೆ ಮೂಲಕ ಅಂಬಳೆ ಕೈಗಾರಿಕೆ ಪ್ರದೇಶಕ್ಕೆ ಹೋಗುತ್ತದೆ. ಅಲ್ಲಿಯ ತನಕವೂ ನೀರು ವಿತರಣೆ ನಾಲೆ ಈಗ ಒಳ ಚರಂಡಿ ನೀರು ಹರಿಯುವ ರಾಜ ಕಾಲುವೆಯಾಗಿದೆ.

ಒಳ ಚರಂಡಿ ವ್ಯವಸ್ಥೆಗೆ ಪರ್ಯಾಯ ಮಾರ್ಗವಿಲ್ಲದೆ ಇದೆ ನಾಲೆಯಲ್ಲಿ ಒಳ ಚರಂಡಿ ಕೊಚ್ಚೆ ನೀರುನ್ನು ಬಹುತೇಕ ಬಡಾವಣೆಉಯಲಿ ಸಂಪರ್ಕ ಮಾಡಲಾಗಿದೆ. ಈ ನಾಲೆಯಲ್ಲಿ ನೀರು ಸಾರಾಗವಾಗಿ ಹರಿಯದ ಕಾರಣ ನಿಂತು ದುರ್ವಾಸನೆ ನಿತ್ಯ ಅಕ್ಕಪಕ್ಕದ ಜನರು ಹಗಲು ರಾತ್ರಿ ಕುಡಿಯುವಂತಾಗಿದೆ.

ಸಣ್ಣ ನೀರಾವರಿ ಇಲಾಖೆ ಹಾಗೂ ನಗರಸಭೆ ಒಬ್ಬರ ಮೇಲೊಬ್ಬರು ಸಬೂಬು ಹೇಳಿ ಇದನ್ನು ಅಭಿವೃದ್ಧಿ ಮಾಡದೆ ಹಿಂದೇಟು ಹಾಕುತ್ತಿದ್ದಾರೆ. ನಾಲೆಯ ಮೇಲ್ಭಾಗ ಕವರ್ ಮಾಡಿ, ಕೊಚ್ಚೆ ನೀರು ನಿಲ್ಲದಂತೆ ಓಟ ಕೊಟ್ಟರೆ ವಾಸನೆ ಒಂದಿಷ್ಟು ಕಡಿಮೆಯಾಗಲಿದೆ. ಇಲ್ಲಿನ ನಿವಾಸಿಗಳೂ ಸಾಕಷ್ಟು ಮನವಿ ಮಾಡಿದರೂ ನಗರಸಭೆ ಹಲವು ವರ್ಷಗಳಿಂದ ದಿನ ನೂಕುತ್ತಲೇ ಇದೆ.

ಈ ನಾಲೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಅದುವೇ ಅಭಿವೃದ್ಧಿ ಮಾಡಬೇಕೆಂದು ನಗರಸಭೆ ಹೇಳುತ್ತಿದೆ. ಒಳ ಚರಂಡಿ ನೀರನ್ನು ನಾಲೆಗೆ ಬಿಟ್ಟಿರುವ ನಗರಸಭೆಯೇ ಇದರ ಅಭಿವೃದ್ಧಿ ಮಾಡಬೇಕೆಂದು ಸಣ್ಣ ನೀರಾವರಿ ಇಲಾಖೆ ವಾದ ಮಾಡುತ್ತಿದೆ. ಈ ಎರಡೂ ಇಲಾಖೆಯ ಕಚ್ಚಾಟದಿಂದ ಇಲ್ಲಿನ ನಾಗರಿಕರು ನಿತ್ಯ ಕೆಟ್ಟ ವಾಸನೆಯಲ್ಲಿ ನಿತ್ಯ ಬದುಕು ನಡೆಸುವಂತಾಗಿದೆ.