ಹರಿಯುತ್ತಿದೆ ಶೌಚಗುಂಡಿ ನೀರು

ಅನ್ಸಾರ್ ಇನೋಳಿ ಉಳ್ಳಾಲ

ಗುಂಡಿಯೊಳಗಿಂದ ಸರಾಗವಾಗಿ ಹರಿದು ಎಲ್ಲೆಲ್ಲೋ ಸೇರುತ್ತಿದೆ ನೀರು. ಪರಿಣಾಮ ಪರಿಸರದಲ್ಲಿ ಬೀರುತ್ತಿದೆ ದುರ್ನಾತ. ಸೊಳ್ಳೆಗಳ ಕೇಂದ್ರ ಸ್ಥಾನವಾಗಿ ಮಾರ್ಪಟ್ಟ ಪರಿಸರದಲ್ಲಿ ಸಾಂಕ್ರಾಮಿಕ ರೋಗಭೀತಿ. ಆದರೂ ಸಂಸ್ಥೆಗಿಲ್ಲ ಈ ಬಗ್ಗೆ ಚಿಂತೆ. ಇದು ತಲಪಾಡಿಯಲ್ಲಿ ನವಯುಗ ಸಂಸ್ಥೆ ಸೃಷ್ಟಿಸಿರುವ ಸಮಸ್ಯೆ!

ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ತಿಗೊಳಿಸದೆ ಟೋಲ್ ಸಂಗ್ರಹಿಸುವ ಮೂಲಕ ಜನರಿಂದ ವಿರೋಧ ಎದುರಿಸುತ್ತಿರುವ ನವಯುಗ, ಸ್ವಚ್ಛತೆ ವಿಷಯದಲ್ಲೂ ಹಿಂದುಳಿದಿದೆ. ಇದರ ಪರಿಣಾಮವನ್ನು ಆಸುಪಾಸಿನಲ್ಲಿ ವಾಸವಿರುವ ಜನರು ಎದುರಿಸುವ ದುರ್ಗತಿ ಬಂದಿದೆ.

ತಲಪಾಡಿಯಲ್ಲಿರುವ ನವಯುಗ ಸಂಸ್ಥೆ ಟೋಲ್‌ಗೇಟ್ ಸಮಸ್ಯೆಗಳ ಮೂಲ ಎನಿಸಿದೆ. ಸಾರ್ವಜನಿಕರಿಗಾಗಿ ಇಲ್ಲಿ ಶೌಚಗೃಹ ನಿರ್ಮಿಸಿರುವುದು ಖುಷಿಯ ವಿಚಾರ. ಆದರೆ ಅದನ್ನು ನಿಭಾಯಿಸುವ ಗೋಜಿಗೆ ಹೋಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಶೌಚಗೃಹದ ಬಾಗಿಲುಗಳೇ ಅಭದ್ರವಾಗಿದೆ. ಇದರಿಂದ ಶೌಚಗೃಹ ಬಳಸುವವರಿಗೆ ಮಾತ್ರ ಸಮಸ್ಯೆ ಎಂದು ಹೇಳಬಹುದು.

ಆದರೆ ಶೌಚಗೃಹದ ಗುಂಡಿ ಸಾರ್ವಜನಿಕರು, ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ ತಂದಿಟ್ಟಿದೆ. ಹಲವು ಸಮಯಗಳಿಂದ ಶೌಚಗುಂಡಿ ತುಂಬಿ ನೀರು ಹೊರಹರಿಯುತ್ತಿದೆ. ಎತ್ತರದ ಪ್ರದೇಶದಲ್ಲಿರುವ ಶೌಚಗುಂಡಿಯ ನೀರು ಕೆಳಪ್ರದೇಶದಲ್ಲಿರುವ ಮನೆಗಳತ್ತ ಹರಿಯುತ್ತಿದೆ. ಇದು ಮನೆಯಂಗಳಕ್ಕೆ ಹೋಗುವುದನ್ನು ತಡೆಯಲು ತೋಡು ನಿರ್ಮಿಸಲಾಗಿದ್ದರೂ ಅದರ ದುರ್ನಾತ, ಸೊಳ್ಳೆಗಳ ಉತ್ಪತ್ತಿಯಾಗುವುದನ್ನು ತಡೆಯಲು ಸಾಧ್ಯವಾಗಿಲ್ಲ. ಸ್ಥಳೀಯ ಪ್ರದೇಶದಲ್ಲಿರುವ ಬಾವಿಗಳಿಗೂ ಶೌಚಗುಂಡಿ ನೀರು ಕಂಟಕವಾಗಿ ಪರಿಣಮಿಸಿದೆ.

ಗ್ರಾಮಸಭೆಯಲ್ಲೂ ವ್ಯಕ್ತವಾಗಿತ್ತು ಆಕ್ರೋಶ!: ಕಳೆದ ತಿಂಗಳು ನಡೆದಿದ್ದ ತಲಪಾಡಿ ಗ್ರಾಮಸಭೆಯಲ್ಲೂ ಸ್ಥಳೀಯ ನಿವಾಸಿಗಳು ಶೌಚಗುಂಡಿಯಿಂದ ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿ ಮುಂದಿಟ್ಟಿದ್ದರು. ಅಲ್ಲದೆ ಟೋಲ್ ಗೇಟ್ ಬಳಿ ನಿಲ್ಲುವ ಲಾರಿ ಹಾಗೂ ಇತರ ವಾಹನಗಳ ಚಾಲಕರು ಇಲ್ಲೇ ಮೂತ್ರ ಮಾಡುತ್ತಿದ್ದು ಇದರಿಂದಾಗಿ ತಾವು ಮುಜುಗರ ಅನುಭವಿಸಬೇಕಾಗಿದೆ ಎಂದು ಸ್ಥಳೀಯ ಮಹಿಳೆಯರು ಅಳಲು ತೋಡಿಕೊಂಡಿದ್ದರು.

ಕಸ ಸುರಿದು ಸಿಕ್ಕಿ ಬಿದ್ದಿದ್ದರು!: ಹಿಂದೊಮ್ಮೆ ಇದೇ ಸಂಸ್ಥೆಯ ಸಿಬ್ಬಂದಿ ರಸ್ತೆ ಬದಿಯಲ್ಲೇ ಕಸ ಸುರಿಯುತ್ತಿದ್ದಾಗ ವಿಜಯವಾಣಿ ಕ್ಯಾಮರಾಕ್ಕೆ ಸೆರೆಯಾಗಿದ್ದರು. ಈ ಬಗ್ಗೆ ವಿಶೇಷ ವರದಿ ಪ್ರಕಟಗೊಂಡಾಗ ತಲಪಾಡಿ ಪಂಚಾಯಿತಿ ನೋಟಿಸ್ ಜಾರಿ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿಯುವುದಕ್ಕೆ ಕಡಿವಾಣ ಹಾಕಿದ್ದರು.

ನವಯುಗ ಸಂಸ್ಥೆಯ ಅಶುಚಿತ್ವ ಬಗ್ಗೆ ಗ್ರಾಮಸಭೆಯಲ್ಲೂ ದೂರುಗಳು ಬಂದಿದ್ದು, ಪಂಚಾಯಿತಿಯಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು, ಅಲ್ಲದೆ ಸಂಸದರಿಗೆ ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲಿಸಿದ್ದ ಸಂಸದರೂ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದ್ದರು. ಮುಂದಕ್ಕೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು.
| ಸುರೇಶ್ ಆಳ್ವ ಸಾಂತ್ಯಗುತ್ತು, ತಲಪಾಡಿ ಗ್ರಾಪಂ ಅಧ್ಯಕ್ಷ

ಕೇರಳ, ತಮಿಳುನಾಡು ಕಡೆ ಹೋಗುವ ಪ್ರವಾಸಿ ವಾಹನಗಳಲ್ಲಿ ಬರುವವರು ಮೂತ್ರವಿಸರ್ಜನೆ ಮಾಡುತ್ತಾರೆ, ಅಲ್ಲದೆ ಟೋಲ್‌ಗೇಟ್ ಬಳಿಯಿರುವ ಶೌಚಗುಂಡಿ ತುಂಬಿ ನೀರು ಮನೆಯ ಹತ್ತಿರವೇ ಸಂಗ್ರಹವಾಗುತ್ತಿದೆ. ಇದರಿಂದ ವಿಪರೀತ ವಾಸನೆ ಮಾತ್ರವಲ್ಲದೆ, ಸೊಳ್ಳೆ ಕಾಟಕ್ಕೆ ಜೀವನ ಕಷ್ಟವಾಗಿದೆ.
| ಹರಿಣಾಕ್ಷಿ ಅಡ್ಯಂತಾಯ, ಸ್ಥಳೀಯ ನಿವಾಸಿ