ಭಾರತದ ಪರ ನಿಂತ ಜಗತ್ತಿನ ರಾಷ್ಟ್ರಗಳು: ಉಗ್ರ ಕೃತ್ಯಕ್ಕೆ ಭಾರಿ ಆಕ್ರೋಶ

ನವದೆಹಲಿ: ಪಾಕ್ ಉಗ್ರರು ಗುರುವಾರ ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದರು. ಜೈಷ್ ಎ-ಮೊಹಮ್ಮದ್ ಸಂಘಟನೆಯ ಉಗ್ರನೋರ್ವ ಸಿಆರ್​ಪಿಎಫ್ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಾಹುತಿ ದಾಳಿಗೆ 37 ಯೋಧರು ಹುತಾತ್ಮರಾಗಿದ್ದು, 40ಕ್ಕೂ ಹೆಚ್ಚು ಸೈನಿಕರು ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದಾರೆ. ಕಾಶ್ಮೀರದಲ್ಲಿ ಸೇನೆ ಮೇಲೆ ನಡೆದ ಅತಿ ದೊಡ್ಡ ಉಗ್ರ ದಾಳಿ ಇದಾಗಿದೆ. ಒಟ್ಟು 2547 ಸಿಆರ್​ಪಿಎಫ್ ಯೋಧರು 78 ಬಸ್​ಗಳಲ್ಲಿ ಜಮ್ಮುವಿನಿಂದ ಶ್ರೀನಗರದತ್ತ ತೆರಳುತ್ತಿದ್ದಾಗ ಪುಲ್ವಾಮಾ ಜಿಲ್ಲೆಯ ಅವಂತಿಪೊರದಲ್ಲಿ ಉಗ್ರ ದಾಳಿ ನಡೆಸಿದ್ದಾನೆ. ಉರಿ ಹಾಗೂ ಪಠಾಣ್​ಕೋಠ್ ದಾಳಿ ನೆನಪು ಮಾಸುವ ಮುನ್ನವೇ ಪಾಕಿಸ್ತಾನ ಪ್ರಾಯೋಜಿತ ಜೈಷ್ ಎ-ಮೊಹಮ್ಮದ್ ಈ ಕೃತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಭಾರತಕ್ಕೆ ವ್ಯಾಪಕ ಬೆಂಬಲ ಸಿಕ್ಕಿದೆ.

ಯಾರು ಏನಂದರು?

ಉಗ್ರ ಕೃತ್ಯ ಎಸಗಿದವರು ನ್ಯಾಯದ ಎದುರು ನಿಲ್ಲಬೇಕು

ಕುಕೃತ್ಯ ಮಾಡಿದವರು ನ್ಯಾಯದ ಎದುರು ನಿಲ್ಲಲೇ ಬೇಕು. ಭಾರತದಲ್ಲಿ ನಡೆದ ಘಟನೆಯನ್ನು ವಿಶ್ವಸಂಸ್ಥೆ ಖಂಡಿಸುತ್ತದೆ. ಘಟನೆಯಿಂದ ದುಃಖಕ್ಕೊಳಗಾದ ಕುಟುಂಬಗಳಿಗೆ ನಮ್ಮ ಸಂತಾಪಗಳು. ಭಾರತೀಯರಿಗೆ ಮತ್ತು ಭಾರತ ಸರ್ಕಾರಕ್ಕೆ ನಮ್ಮ ಬೆಂಬಲವಿದೆ. ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ. ಈ ಕೃತ್ಯ ನಡೆಸಿದವರು ಆದಷ್ಟು ಬೇಗ ನ್ಯಾಯದ ಎದುರು ನಿಲ್ಲಬೇಕಾಗುತ್ತದೆ.

ವಿಶ್ವಸಂಸ್ಥೆ

ಉಗ್ರ ಚಟುವಟಿಕೆ ನಿಗ್ರಹಕ್ಕೆ ಒತ್ತಾಯಿಸುತ್ತೇವೆ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್​ಪಿಎಫ್​ ಯೋಧರನ್ನು ಗುರಿಯಾಗಿಟ್ಟುಕೊಂಡು ಉಗ್ರರು ನಡೆಸಿದ ದಾಳಿಯನ್ನು ಅಮೆರಿಕ ತೀವ್ರವಾಗಿ ಖಂಡಿಸುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ನಾವು ಸಂತಾಪ ಸೂಚಿಸುತ್ತೇವೆ. ಅಲ್ಲದೆ, ಗಾಯಾಳು ಸೈನಿಕರು ಶೀಘ್ರ ಗುಣಮುಖರಾಗಲೆಂದು ಆಶಿಸುತ್ತೇವೆ. ಉಗ್ರರ ನಿರ್ಮೂಲನ ಕಾರ್ಯದಲ್ಲಿ ಭಾರತದೊಂದಿಗೆ ಅಮೆರಿಕ ಕೂಡ ಕೆಲಸ ಮಾಡುತ್ತಿದೆ. ಉಗ್ರ ಚಟುವಟಿಕೆಗಳಿಗೆ ಸಿಗುತ್ತಿರುವ ಪ್ರೋತ್ಸಾಹವನ್ನು ಹತ್ತಿಕ್ಕುವ ಕುರಿತು ಚರ್ಚಿಸಲು ಜಗತ್ತಿನ ರಾಷ್ಟ್ರಗಳನ್ನು ನಾವು ಒತ್ತಾಯಿಸುತ್ತೇವೆ.

ಅಮೆರಿಕ

ಸಂಕಷ್ಟದ ಸಮಯದಲ್ಲಿ ಭಾರತದೊಂದಿಗಿರುತ್ತೇವೆ

ಭಾರತಕ್ಕೆ ಎದುರಾಗಿರುವ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವು ಅವರೊಂದಿಗೆ ಇರುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ನಮ್ಮ ಸಂತಾಪಗಳು. ಭಾರತೀಯರು ಮತ್ತು ಭಾರತ ಸರ್ಕಾರದೊಂದಿಗೆ ನಾವಿದ್ದೇವೆ.

ರಾನ್​ ಮಲ್ಕಾ, ಭಾರತದಲ್ಲಿ ಇಸ್ರೇಲ್​ನ ರಾಯಭಾರಿ

ಉಗ್ರ ಚಟುವಟಿಕೆ ವಿರುದ್ಧ ಬಾಂಗ್ಲಾ ಸೈರಣೆ ತೋರುವುದಿಲ್ಲ

ಉಗ್ರ ಚಟವಟಿಕೆ ನಿರ್ಮೂಲನೆಗಾಗಿ ಭಾರತವೂ ಸೇರಿದಂತೆ ಜಾಗತಿಕ ಸಮುದಾಯಗಳೊಂದಿಗೆ ನಾವು ಕೆಲಸ ಮಾಡಲು ಇಚ್ಛಿಸುತ್ತೇವೆ. ಉಗ್ರರ ವಿರುದ್ಧದ ಕಾರ್ಯತಂತ್ರ ಹೊಂದಿರುವ ಬಾಂಗ್ಲಾದೇಶ ಈ ಸಂದರ್ಭದಲ್ಲೂ ತನ್ನ ನಿಲುವಿಗೆ ಬದ್ಧವಾಗಿದೆ. ಈ ಚಟುವಟಿಕೆಗಳ ವಿರುದ್ಧ ಬಾಂಗ್ಲಾ ಯಾವುದೇ ರೀತಿಯಲ್ಲೂ ಸೈರಣೆ ಹೊಂದುವುದಿಲ್ಲ.

ಶೇಖ್ ಹಸೀನಾ, ಬಾಂಗ್ಲಾ ಪ್ರಧಾನಿ

ಇದು ವಿಧ್ವಂಸಕ ಕೃತ್ಯ

ಭಾರತದಲ್ಲಿ ನಡೆದಿರುವ ಈ ವಿಧ್ವಂಸಕ ಕೃತ್ಯವನ್ನು ನಾನು ಖಂಡಿಸುತ್ತೇನೆ. 1989ರ ನಂತರದಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಅತ್ಯಂತ ಘೋರ ಘಟನೆ ಇದಾಗಿದೆ. ಸಂತ್ರಸ್ತ ಕುಟುಂಬಗಳಿಗೆ ನಮ್ಮ ಸಾಂತಾಪ.

ರನಿಲ್​ ವಿಕ್ರಮ ಸಿಂಘೆ, ಶ್ರೀಲಂಕಾದ ಪ್ರಧಾನಿ

ದಾಳಿ ಖಂಡಿಸುತ್ತೇವೆ

ಜಮ್ಮು ಕಾಶ್ಮೀರದಲ್ಲಿ ಯೋಧರ ಮೇಲೆ ನಡೆದ ದಾಳಿಯನ್ನು ಖಂಡಿಸುತ್ತೇನೆ. ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಾವು ಸಂತಾಪ ಸೂಚಿಸುತ್ತೇವೆ. ಅಲ್ಲದೆ, ಅವರ ಜತೆಗೆ ನಾವಿದ್ದೇವೆ. ಗಾಯಗೊಂಡವರು ಅತಿ ಶೀಘ್ರದಲ್ಲೇ ಗುಣಮುಖರಾಗಲಿ.

ಅಬ್ಧುಲ್ಲಾ ಶಾಹಿದ್​, ಮಾಲ್ಡೀವ್ಸ್​ ವಿದೇಶಾಂಗ ಸಚಿವ