More

  ಸಮೂಹನಾಶಕ ಅಣ್ವಸ್ತ್ರಕ್ಕೀಗ ಎಪ್ಪತ್ತೆಂಟು ವರ್ಷಗಳು!

  ಸಮೂಹನಾಶಕ ಅಣ್ವಸ್ತ್ರಕ್ಕೀಗ ಎಪ್ಪತ್ತೆಂಟು ವರ್ಷಗಳು!ಸಮೂಹನಾಶಕ ಅಣ್ವಸ್ತ್ರದ ಜನಕ ಜ್ಯೂಲಿಯಸ್ ರಾಬರ್ಟ್ ಓಪ್ಪನ್ ಹೈಮರ್​ನ ಬಯೋಪಿಕ್ ಡ್ರಾಮಾ ಚಲನಚಿತ್ರ ಜಗತ್ತಿನಾದ್ಯಂತ ದೊಡ್ಡದಾಗಿ ಸುದ್ದಿ ಮಾಡುತ್ತಿರುವ, ಬಾಕ್ಸ್ ಆಫೀಸ್ ದಾಖಲೆಗಳನ್ನು ರಚಿಸುತ್ತಿರುವ ದಿನಗಳಿವು. ಈ ನಡುವೆ ಹಿರೋಷಿಮಾ ಮತ್ತು ನಾಗಸಾಕಿ ನಗರಗಳು ಹಾಗೂ ಜಪಾನ್ ಅಣ್ವಸ್ತ್ರ ದಾಳಿಯ ದುರಂತವನ್ನು 78ನೇ ಬಾರಿಗೆ ಹೃದಯ ಕಲ್ಲಾಗಿಸುವ ಕಣ್ಣೀರು ಹಾಗೂ ಮೌನದೊಂದಿಗೆ ನೆನಪು ಮಾಡಿಕೊಂಡದ್ದೂ ಆಗಿ ಹೋಯಿತು. ನಿಜ ಹೇಳಬೇಕೆಂದರೆ ಈ ಕುರಿತಾದ ಲೇಖನ ಮೂರು ವಾರಗಳ ಹಿಂದೆಯೇ ಜಗದಗಲ ಅಂಕಣದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಇಂದು ಮತ್ತೊಮ್ಮೆ ಜಗತ್ತನ್ನು ಅಣ್ವಸ್ತ್ರ ಯುದ್ಧದ ಪ್ರಪಾತದಂಚಿಗೆ ಒಯ್ಯುವಂತಿರುವ ರಶಿಯಾ ಯೂಕ್ರೇನ್ ಯುದ್ಧದ ವಿವಿಧ ಆಯಾಮಗಳ ಬಗೆಗಿನ ಲೇಖನ ಸರಣಿಯಿಂದಾಗಿ ಈ ವಿಷಯ ಇಲ್ಲಿ ತಡವಾಗಿ ಕಾಣಿಸಿಕೊಳ್ಳುತ್ತಿದೆ.

  ದ್ವಿತೀಯ ಜಾಗತಿಕ ಸಮರವನ್ನು ಗೆಲ್ಲುವ ಉದ್ದೇಶದಿಂದ ಅಂದು ಒಂದಕ್ಕಿಂತ ಹೆಚ್ಚು ಯುದ್ಧನಿರತ ರಾಷ್ಟ್ರಗಳು ಅಣ್ವಸ್ತ್ರ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ಆ ದಿಕ್ಕಿನಲ್ಲಿ ತರಾತುರಿಯಲ್ಲಿ ಕಾರ್ಯನಿರತವಾಗಿದ್ದವು. ಈ ವಿಷಯದಲ್ಲಿ ಒಂದು ಹಂತದಲ್ಲಿ ನಾಝಿ ಜರ್ಮನಿ ಮುಂಚೂಣಿಯಲ್ಲಿತ್ತು. ಆದರೆ ತಾನೇ ಸೃಷ್ಟಿಸಿಕೊಂಡ ಯುದ್ಧ ಕ್ಷೇತ್ರದ ನಟ್ಟನಡುವೆ ಸಿಲುಕಿಬಿದ್ದಿದ್ದ ಕಾರಣ ಹಾಗೂ ಹಲವರು ವಿಜ್ಞಾನಿಗಳ ಸೇವೆಯನ್ನು ಕಳೆದುಕೊಂಡ ಕಾರಣದಿಂದ ಆ ದೇಶದ ಅಣ್ವಸ್ತ್ರ ಕಾರ್ಯಯೋಜನೆ ಕುಂಠಿತಗೊಂಡಿತು. ಯೂರೋಪಿಯನ್ ಮುಖ್ಯಭೂಮಿಯಲ್ಲಿದ್ದ ಬ್ರಿಟನ್ ಮತ್ತು ಸೋವಿಯತ್ ಯೂನಿಯನ್​ಗಳ ಸ್ಥಿತಿಯೂ ಸರಿಸುಮಾರು ಜರ್ಮನಿಯದರಂತೆಯೇ ಇತ್ತು. ಇವೆಲ್ಲವುಗಳಿಂದ ಭೌಗೋಳಿಕವಾಗಿ ದೂರದಲ್ಲಿದ್ದು, ಯುದ್ಧದ ನೇರ ಹೊಡೆತಕ್ಕೆ ಸಿಲುಕದ ಅಮೆರಿಕ ತನ್ನ ಅಣ್ವಸ್ತ್ರ ಯೋಜನೆಯನ್ನು ನಿರಾತಂಕವಾಗಿ ನಡೆಸಿಕೊಂಡು ಹೋಗುವ ಸ್ಥಿತಿಯಲ್ಲಿದ್ದುದು ಸಹಜವೇ ಆಗಿತ್ತು. ಓಪ್ಪನ್​ಹೈಮರ್ ಚಲನಚಿತ್ರ ಹೇಳುವುದು ಈ ಅಮೆರಿಕನ್ ಮಿಲಿಟರಿಯ ಮ್ಯಾನ್​ಹಟನ್ ಯೋಜನೆ, ಅದರ ಫಲವಾದ ಅಣ್ವಸ್ತ್ರದ ಸೃಷ್ಟಿ, ಅದರ ಸೃಷ್ಟಿಕರ್ತ ಭೌತವಿಜ್ಞಾನಿ ರಾಬರ್ಟ್ ಓಪ್ಪನ್ ಹೈಮರ್​ನ ನೈತಿಕ ದ್ವಂದ್ವದ ಕಥೆಯನ್ನು. ಹಿರೋಷಿಯಾ ಮತ್ತು ನಾಗಸಾಕಿ ನಗರಗಳ ಮೇಲಿನ ಅಣ್ವಸ್ತ್ರ ದಾಳಿಗಳಿಗೆ ಬಲಿಯಾದ ಒಟ್ಟಾರೆ ಸುಮಾರು ಎರಡು ಲಕ್ಷ ಜನರ ಕಥೆ? ಅದು ಅಮೆರಿಕನ್ನರಿಗೆ ಅಂದೂ ಮುಖ್ಯವಾಗಲಿಲ್ಲ. ಇಂದೂ ಮುಖ್ಯವೆನಿಸುತ್ತಿಲ್ಲ. ಮಾನವತೆಯ ಮೇಲಿನ ಆ ಬರ್ಬರ ದಾಳಿಯ ಬಗ್ಗೆ ನಿರ್ಧಾರ ಕೈಗೊಂಡ ಹ್ಯಾರಿ ಎಸ್. ಟ್ರೂಮನ್​ರಿಂದ ಇಂದಿನ ಜೋ ಬೈಡನ್​ವರೆಗೆ ಅಮೆರಿಕಾದ ಯಾವೊಬ್ಬ ಅಧ್ಯಕ್ಷರೂ ಕ್ಷಮೆ ಕೇಳಿಲ್ಲ! ಅವರೆಲ್ಲರ ಅಭಿಪ್ರಾಯದಲ್ಲಿ ಆ ದಾಳಿ ಅಗತ್ಯವಾಗಿತ್ತು ಮತ್ತು ಅಂದು ಅದು ತಂದ ವಿನಾಶಕ್ಕಿಂತಲೂ ಮುಂದಿನ ದಿನಗಳಲ್ಲಿ ಅದು ತಡೆದ ವಿನಾಶ ಬಹು ದೊಡ್ಡದಾಗಿದೆ!

  ಅಣ್ವಸ್ತ್ರ ಯೋಜನೆ ಮ್ಯಾನ್​ಹಟನ್ ಪ್ರಾಜೆಕ್ಟ್​ನ ನಿರ್ದೇಶಕ ವಿಜ್ಞಾನಿ ಓಪ್ಪನ್​ಹೈಮರ್​ಗೆ ಜಪಾನ್ ಮೇಲೆ ಅಣ್ವಸ್ತ್ರವನ್ನು ಪ್ರಯೋಗಿಸುವ ಬಗ್ಗೆ ಸಹಮತ ಇರಲಿಲ್ಲ ಎನ್ನುವುದೊಂದು ಅಂದಿನಿಂದಲೂ ಬಹು ರ್ಚಚಿತ ವಿಷಯ. ಇದು ನಿಜವೇ ಆಗಿದ್ದರೆ ಅಣ್ವಸ್ತ್ರ ತಯಾರಿಕೆಗೆಂದೇ ರೂಪಿಸಲ್ಪಟ್ಟ ಮ್ಯಾನ್​ಹಟನ್ ಪ್ರಾಜೆಕ್ಟ್​ನ ನಿರ್ದೇಶಕ ಸ್ಥಾನವನ್ನು ಅವರು ಒಪ್ಪಿಕೊಂಡದ್ದೇಕೆ? ಆ ಸ್ಥಾನದಲ್ಲಿ ಕುಳಿತು ಅಣ್ವಸ್ತ್ರವನ್ನು ಸೃಷ್ಟಿಸಿದ್ದೇಕೆ? ಶ್ವೇತಭವನದ ಶೋಕೇಸ್​ನಲ್ಲಿಡುವುದಕ್ಕೇನು? ಇಂತಹ ಪ್ರಶ್ನೆಗಳನ್ನು ಅಂದಿನಿಂದಲೂ ಬಹುತೇಕರು ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ ನಮ್ಮೆದುರು ಬೇರೆಯೇ ಆದ ಆಸಕ್ತಿಕರ ಸತ್ಯಗಳು ಅಥವಾ ಸತ್ಯದಂತೇ ಕಾಣುವ ವಾದಗಳು ಎದರುರಾಗುತ್ತವೆ.

  ಅಮೆರಿಕಾಗೆ ಮತ್ತದರ ಯೂರೋಪಿಯನ್ ಮಿತ್ರರಾಷ್ಟ್ರಗಳಿಗೆ ಅಣ್ವಸ್ತ್ರದ ಅಗತ್ಯವಿದ್ದದ್ದು ಜರ್ಮನಿಯನ್ನು ಯುದ್ಧಸ್ಥಂಭನಕ್ಕಾಗಿ ಒತ್ತಾಯಿಸುವ ಸಲುವಾಗಿ, ಬಳಕೆಗಾಗಿ ಅಲ್ಲ. ಆದರೆ ಜಪಾನ್ ಮೇಲೆ ಅದನ್ನು ಪ್ರಯೋಗಿಸುವ ಒತ್ತಡವನ್ನು ಸೋವಿಯೆತ್ ಯೂನಿಯನ್ ಸೃಷ್ಟಿಸಿದ ಸನ್ನಿವೇಶಾಧ್ಯಕ್ಷ ಹ್ಯಾರಿ ಎಸ್. ಟ್ರೂಮನ್​ರ ಮೇಲೆ ಹೇರಿತು ಎಂಬ ವಾದಕ್ಕೆ ಅಣ್ವಸ್ತ್ರದಷ್ಟೇ ಇತಿಹಾಸವಿದೆ. ಅದು ಆಧುನಿಕ ಜಾಗತಿಕ ಇತಿಹಾಸದ ಅತ್ಯಂತ ನಿರ್ಣಾಯಕ ತಿರುಗುವುಳಲ್ಲೊಂದು. ಯುದ್ಧದ ಆರಂಭದ ವರ್ಷಗಳಲ್ಲಿ ಎನ್ನಯ ಸರಿಸಮಾನರಾರೈ? ಎಂದು ಅಟ್ಟಹಾಸಗೈಯುತ್ತಾ ಪಶ್ಚಿಮದಲ್ಲಿ ಇಂಗ್ಲಿಷ್ ಕಡಲ್ಗಾಲುವೆಯಿಂದ ಪೂರ್ವದಲ್ಲಿ ಮಾಸ್ಕೋ ನಗರದ ಬಾಗಿಲವರೆಗೆ ವಾಯುವೇಗದಲ್ಲಿ ಹರಿದಾಡಿದ ನಾಝಿ ಸರ್ವಾಧಿಕಾರಿ ಅಡಾಲ್ಪ್ ಹಿಟ್ಲರ್​ನ ಸೇನೆ 1945ರ ಆರಂಭದ ಹೊತ್ತಿಗೇ ಎಲ್ಲೆಡೆ ಹಿಮ್ಮೆಟ್ಟತೊಡಗಿತ್ತು. ಸೋವಿಯೆತ್ ಕೆಂಪು ಸೇನೆ ಪೂರ್ವದಲ್ಲಿ ಬರ್ಲಿನ್ ನಗರದ ಬಾಗಿಲನ್ನು ತಟ್ಟುತ್ತಿದ್ದರೆ ಪಶ್ಚಿಮದಲ್ಲಿ ಬ್ರಿಟಿಷ್ – ಅಮೆರಿಕನ್ ಸಂಯುಕ್ತ ಸೇನೆ ಬೆನೆಲಕ್ಸ್ ದೇಶಗಳನ್ನು ನಾಝಿ ಆಕ್ರಮಣದಿಂದ ಮುಕ್ತಗೊಳಿಸಿ ಬರ್ಮನಿಯ ಪಶ್ಚಿಮ ಗಡಿಯೊಳಗೆ ಪ್ರವೇಶಿಸಿತ್ತು. ಮಿತ್ರ ಸೇನೆಗಳ ಈ ಇಕ್ಕಳದ ಹಿಡಿತದಿಂದಾಗಿ ಜರ್ಮನಿಯ ಶರಣಾಗತಿ ಮತ್ತು ಯೂರೋಪ್​ನಲ್ಲಿ ಯುದ್ಧದ ನಿಲುಗಡೆ ನಿಶ್ಚಿತವೆನಿಸತೊಡಗಿತ್ತು. ಹೀಗಾಗಿಯೇ ಯುದ್ಧಾನಂತರದ ಯೂರೋಫ್​ನ ಭವಿಷ್ಯವನ್ನು ರ್ಚಚಿಸಲು ಮಿತ್ರರಾಷ್ಟ್ರಗಳಾದ ಅಮೆರಿಕ, ಬ್ರಿಟನ್ ಮತ್ತು ಸೋವಿಯೆತ್ ಯೂನಿಯನ್​ನ ನಾಯಕರು ಕಪ್ಪುಸಮುದ್ರ ತೀರದ ಯಾಲ್ಟಾದಲ್ಲಿ ಸಮಾಲೋಚನೆಗೆ ಸೇರಿದರು. ಫೆಬ್ರವರಿ 5-11ರ ಅವಧಿಯಲ್ಲಿ ನಡೆದ ಈ ಯಾಲ್ಟಾ ಸಮ್ಮೇಳನದಲ್ಲಿ ಯೂರೋಪ್ ಕುರಿತಾಗಿ ಬಹುತೇಕ ಒಮ್ಮತಕ್ಕೆ ಬರಲಾಯಿತು. ಆದರೆ ಪ್ರಶ್ನೆ ಇದ್ದದ್ದು ಜಪಾನ್ ಬಗ್ಗೆ. ಜರ್ಮನಿ ಸದ್ಯದಲ್ಲೇ ಶರಣಾದರೂ ಜಪಾನ್ ಇನ್ನೂ ಒಂದೂವರೆಗೆ ವರ್ಷಗಳವರೆಗೆ ಯುದ್ಧವನ್ನು ಮುಂದುವರೆಸುವ ಸಾಮರ್ಥ್ಯ ಹೊಂದಿದೆ ಎಂಬ ಅಮೆರಿಕನ್ ಸೇನೆಯ ಗುಪ್ತಚರ ಮಾಹಿತಿಯನ್ನು ಅಧ್ಯಕ್ಷ ಫ್ರಾಂಕ್ಲಿನ್ ರೂಸ್​ವೆಲ್ಟ್ ಬ್ರಿಟಿಷ್ ಪ್ರಧಾನಿ ವಿನ್​ಸ್ಟನ್ ರ್ಚಚಿಲ್ ಹಾಗೂ ಸೋವಿಯೆತ್ ನೇತಾರ ಜೋಸೆಫ್ ಸ್ಟಾ್ಯಲಿನ್ ಜತೆ ಹಂಚಿಕೊಂಡರು. ಭೌಗೋಳಿಕ ಕಾರಣಗಳಿಂದಾಗಿ ಜಪಾನ್ ಜತೆಗಿನ ಯುದ್ಧವನ್ನು ಅಮೆರಿಕ ಏಕಾಂಗಿಯಾಗಿ ನಡೆಸಬೇಕಾಗುತ್ತದೆ ಎನ್ನುವುದು ಅವರ ಚಿಂತೆ ಕಾರಣವಾಗಿತ್ತು. ಸೋವಿಯೆತ್ ಸಹಕಾರ ದೊರೆತರೆ ಜಪಾನ್ ಅನ್ನೂ ಶೀಘ್ರವಾಗಿ ಶರಣಾಗತಿಗೆ ಒಪ್ಪಿಸಬಹುದೆಂದೂ ಅವರು ಹೇಳಿದಾಗ ಅಮೆರಿಕ ಬಯಸುವ ಸಹಕಾರ ನೀಡಲು ತಾವು ತಯಾರಾಗಿರುವುದಾಗಿ ಸ್ಟಾ್ಯಲಿನ್ ಹೇಳಿದರು. ಯೂರೋಪ್​ನಲ್ಲಿ ಯುದ್ಧ ಮುಕ್ತಾಯಗೊಂಡ ನಂತರ ತಮ್ಮ ಸೇನೆಯನ್ನು ಪೂರ್ವದ ಪೆಸಿಫಿಕ್ ತೀರಕ್ಕೆ ಅಂದರೆ ಜಪಾನ್​ನ ಸನಿಹಕ್ಕೆ ತರಲು ತಮಗೆ ಮೂರು ತಿಂಗಳು ಬೇಕಾಗುತ್ತವೆಂದೂ, ಹೀಗಾಗಿ ಜರ್ಮನಿ ಶರಣಾಗತವಾದ ಮೂರು ತಿಂಗಳಲ್ಲಿ ತಾವು ಜಪಾನ್ ಮೇಲೆ ಯುದ್ಧ ಹೂಡುವುದಾಗಿ, ಆ ಮೂಲಕ ಅಮೆರಿಕಾಗೆ ಸಹಕಾರ ಒದಗಿಸುವುದಾಗಿ ಹೇಳಿದರು. ಆದರೆ ಅವರದೊಂದು ಕರಾರು- ತಮ್ಮ ಈ ಸಹಕಾರಕ್ಕೆ ಪ್ರತಿಯಾಗಿ ತಮಗೆ ಪೂರ್ವ ಯೂರೋಫ್​ನಲ್ಲಿ ತಮಗನುಕೂಲವಾದ್ದನ್ನು ಮಾಡುವ ಸ್ವಾತಂತ್ರ್ಯವನ್ನು ಅಮೆರಿಕ ನೀಡಬೇಕು. ರೂಸ್​ವೆಲ್ಟ್​ರಿಗೆ ಈ ಕರಾರು ಅಸಹಜವಾಗಿ ಕಾಣಲಿಲ್ಲ. ತನ್ನ ಪಶ್ಚಿಮ ಗಡಿಯ ಸುರಕ್ಷತೆಗಾಗಿ ಪೂರ್ವ ಯೂರೋಪ್​ನಲ್ಲಿ ಮಿತ್ರ ಸರ್ಕಾರಗಳನ್ನು ಹೊಂದುವುದು ಸೋವಿಯೆತ್ ಯೂನಿಯನ್​ಗೆ ಅಗತ್ಯ ಎನ್ನುವುದೊಂದು ಐತಿಹಾಸಿಕ ಸತ್ಯ ಹೀಗಾಗಿ ಕರಾರಿಗೆ ರೂಸ್​ವೆಲ್ಟ್ ಸಮ್ಮತಿಸಿದರು.

  ಆದರೆ ಮುಂದಿನ ಮೂರು ತಿಂಗಳಲ್ಲಿ ಇತಿಹಾಸ ಮತ್ತೊಂದು ತಿರುವಿನಲ್ಲಿ ನಿಂತಿತು. ಏಪ್ರಿಲ್ 30ರಂದು ಅಡಾಲ್ಪ್ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ, ಮೇ 7, 1945ರಂದು ಜರ್ಮನಿ ಶರಣಾಗತಿ ಘೊಷಿಸಿತು. ಅಷ್ಟರಲ್ಲಾಗಲೇ ಅದರ ಹಿಡಿತದಿಂದ ಪೂರ್ವ ಯೂರೋಪ್​ನ ಪೋಲ್ಯಾಂಡ್, ಝೆಕೊಸ್ಲೊವೇಕಿಯಾ, ಹಂಗೆರಿ, ರುಮೇನಿಯಾ, ಬಲ್ಗೇರಿಯಾ, ಯುಗೋಸ್ಲಾವಿಯಾ ಮತ್ತು ಅಲ್ಬೇನಿಯಾ ದೇಶಗಳನ್ನು ಸೋವಿಯೆತ್ ಸೇನೆ ಮುಕ್ತಗೊಳಿಸಿತ್ತು. ಅದು ಅಷ್ಟಕ್ಕೇ ನಿಂತಿದ್ದರೆ ತೊಂದರೆಯೇನೂ ಇರುತ್ತಿರಲಿಲ್ಲ. ಆದರೆ ಸ್ಟಾ್ಯಲಿನ್ ಆ ದೇಶಗಳಲ್ಲೆಲ್ಲಾ ಕಮ್ಯೂನಿಸ್ಟ್ ಕೈಗೊಂಬೆ ಸರ್ಕಾರಗಳನ್ನು ನಿರ್ವಿುಸಿದರು ಮತ್ತು ಆ ಮೂಲಕ ಆ ದೇಶಗಳನ್ನು ಮಾಸ್ಕೋದ ಉಪಗ್ರಹಳಾಗಿಸಿಕೊಂಡರು. ಅದು ಸಾಲದು ಎಂಬಂತೆ ಸೋವಿಯೆತ್ ಸೇನೆಯ ಹಿಡಿತದಲ್ಲಿದ್ದ ಜರ್ಮನಿಯ ಪೂರ್ವ ಭಾಗದಲ್ಲೂ ಕೈಗೊಂಬೆ ಸರ್ಕಾರವನ್ನು ನಿರ್ವಿುಸಲು ಹಂಚಿಕೆ ಹೂಡಿದರು. ಅಷ್ಟರಲ್ಲಾಗಲೇ ಏಪ್ರಿಲ್​ನಲ್ಲೇ ರೂಸ್​ವೆಲ್ಟ್ ನಿಧನ ಹೊಂದಿದ್ದರು ಮತ್ತು ಹ್ಯಾರಿ ಟ್ರೂಮನ್ ಅಧ್ಯಕ್ಷ ಗಾದಿಗೇರಿದ್ದರು ಮತ್ತು ಅವರು ಸ್ಟಾ್ಯಲಿನ್ ಯಾಲ್ಟಾದಲ್ಲಿ ಹಾಕಿದ ಕರಾರಿನ ನಿಜ ಅರ್ಥವನ್ನು ಗ್ರಹಿಸಿದರು. ಒಂದು ವೇಳೆ ಜಪಾನ್ ಮೇಲೂ ಯುದ್ಧ ನಡೆಸುವ ಅವಕಾಶವನ್ನು ಸ್ಟಾ್ಯಲಿನ್​ಗೆ ನೀಡಿದರೆ ಆತ ಜರ್ಮನಿಯಲ್ಲಿ ಮಾಡಿದಂತೆ ಜಪಾನ್​ನ ಒಂದು ಭಾಗದ ಮೇಲೆ ಹಿಡಿತ ಸ್ಥಾಪಿಸಿ ಅಲ್ಲಿ ಕಮ್ಯೂನಿಸ್ಟ್ ಸರ್ಕಾರವನ್ನು ಸ್ಥಾಪಿಸಲು ಹೋಗಬಹುದು ಎಂಬ ಆತಂಕ ಟ್ರೂಮನ್​ರಿಗಾಯಿತು. ಅದನ್ನು ತಡೆಯಲು ಅವರು ಹೂಡಿದ ಯೋಜನೆ ಜರ್ಮನಿಯ ಶರಣಾಗತಿಯ ನಂತರದ ಮೂರು ತಿಂಗಳಲ್ಲಿ ಸ್ಟಾ್ಯಲಿನ್ ತಮ್ಮ ಸೇನೆಯನ್ನು ಪೆಸಿಫಿಕ್ ತೀರಕ್ಕೆ ತರುವುದರೊಳಗೇ ಜಪಾನ್ ಶರಣಾಗವಾಗುವಂತೆ ಮಾಡಿ, ಜಪಾನ್​ನ ನೆಲಕ್ಕೆ ಕಾಲಿಡುವ ಅವಕಾಶವೇ ಸೋವಿಯೆತ್ ಸೇನೆಗೆ ಸಿಗದಂತೆ ಮಾಡಿಬಿಡುವುದು. ಅದನ್ನು ಆಗಸ್ಟ್ 7ರೊಳಗೆ ಮಾಡಬೇಕಾಗಿತ್ತು. ಹೀಗಾಗಿಯೇ ಓಪ್ಪನ್​ಹೈಮರ್ ನಿರ್ದೇಶನದ ಮ್ಯಾನ್​ಹಟನ್ ಪ್ರಾಜೆಕ್ಟ್ ಯಶಸ್ವಿಯಾಗಿ ಜುಲೈ 15ರಂದು ಅಣ್ವಸ್ತ್ರಗಳು ಸಫಲ ಪರೀಕ್ಷೆಗೊಂಡ ಕೂಡಲೇ ಈ ಹೊಸ ಸಮೂಹನಾಶಕ ಅಸ್ತ್ರವನ್ನು ಜಪಾನ್ ಮೇಲೆ ಪ್ರಯೋಗಿಸಿ ಅದು ಶರಣಾಗತಗೊಳ್ಳುವಂತೆ ಮಾಡಲು ಅಧ್ಯಕ್ಷ ಟ್ರೂಮನ್ ನಿರ್ಧಾರ ತೆಗೆದುಕೊಂಡರು. ಅದರಂತೆ ಆಗಸ್ಟ್ 6ರಂದು ಹಿರೋಷಿಮಾ ಅಣ್ವಸ್ತ್ರಕ್ಕೆ ಬಲಿಯಾಯಿತು. ಗೊಂದಲಕ್ಕೆ ಸಿಲುಕಿದ ಜಪಾನ್ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ತಡಕಾಡತೊಡಗಿದಾಗ ಮೂರು ದಿನಗಳ ನಂತರ ನಾಗಸಾಕಿಯ ಮೇಲೆ ಇನ್ನೊಂದು ಅಣ್ವಸ್ತ್ರ ಪ್ರಯೋಗಿಸಿ ಆ ದೇಶವನ್ನು ಶರಣಾಗತಿಗೆ ದೂಡಿತು ಅಮೆರಿಕಾ.

  ಈ ವಾದ ಪೂರ್ಣ ಸತ್ಯವೇ ಆಗಿದ್ದರೆ ಜಪಾನ್ ಅಣ್ವಸ್ತ್ರ ದಾಳಿಗೊಳಗಾಗಿ ಜರ್ಮನಿಯಂತೆ ವಿಭಜನೆಗೊಂಡು ಎರಡು ಪರಸ್ಪರ ವಿರೋಧಿ ರಾಷ್ಟ್ರಗಳಾಗಿ ದಶಕಗಳ ಕಾಲ ಬದುಕುವುದನ್ನು ತಪ್ಪಿಸಿಕೊಂಡಿತು ಎಂದು ಹೇಳಬೇಕಾಗುತ್ತದೆ. ಇಂದು ಎರಡು ಕೊರಿಯಾಗಳು ಸಿಲುಕಿರುವ ಯಾದವೀ ಕಲಹವನ್ನು ನೋಡಿದರೆ ಅಂತಹ ದುರಂತದಿಂದ ಜಪಾನ್ ತಪ್ಪಿಸಿಕೊಂಡ ಬಗ್ಗೆ ನೆಮ್ಮದಿಯೂ ಆಗುತ್ತದೆ. ಅಂದರೆ ಹಿರೊಷಿಮಾ ಮತ್ತು ನಾಗಸಾಕಿಯ ಎರಡು ಲಕ್ಷ ಜನ ತಮ್ಮ ಪ್ರಾಣವನ್ನು ಬಲಿಗೊಟ್ಟು ತಮ್ಮ ತಾಯ್ನಾಡು ಎರಡಾಗದಂತೆ, ಒಂದು ಭಾಗ ಕಮ್ಯೂನಿಸ್ಟ್ ಸರ್ವಾಧಿಕಾರದಲ್ಲಿ ಸಿಲುಕಿಹೋಗದಂತೆ ತಡೆದರೇ? ಇತಿಹಾಸದ ಕೆಲವು ಪ್ರಶ್ನೆಗಳಿಗೆ ಉತ್ತರಗಳು ಎಂದಿಗೂ ದೊರೆಯುವುದಿಲ್ಲ. ಜಪಾನ್ ಮೇಲಿನ ಅಣ್ವಸ್ತ್ರ ದಾಳಿ ಸದ್ಯಕ್ಕೆ ಅಂತಹದೊಂದು ಪ್ರಶ್ನೆ.

  ಅನಂತರ ಅಣ್ವಸ್ತ್ರಗಳು ಬಳಕೆಯಾಗಿಲ್ಲವೇ? ಈ ಪ್ರಶ್ನೆಗೆ ಉತ್ತರಿಸುವುದು ಸುಲಭ. ಅಣ್ವಸ್ತ್ರದ ನೇರ ಬಳಕೆಗೆ ಮುಂದಾಗದೇ ಅದನ್ನು ಝುಳಪಿಸಿಯೇ ಕೆಲವು ದೇಶಗಳು ಪ್ರತಿ ಪಕ್ಷವನ್ನು ಹಿಮ್ಮೆಟ್ಟಿಸಿದ ಹಲವಾರು ಉದಾಹರಣೆಗಳಿವೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ನಿಮ್ಮ ಮುಂದಿಡುತ್ತೇನೆ.

  ಕಮ್ಯೂನಿಸ್ಟ್ ಚೀನಾ 1958ರಲ್ಲಿ ತೈವಾನ್​ಗೆ ಸೇರಿದ ಕ್ವಿಮಾಯ್ ಹಾಗೂ ಮತ್ಸು ದ್ವೀಪಗಳನ್ನು ಆಕ್ರಮಿಸಿಕೊಳ್ಳಲು ಮುಂದಾದಾಗ ತೈವಾನ್ ರಕ್ಷಣೆಯ ಜವಾಬ್ದಾರಿ ತೆಗೆದುಕೊಂಡಿದ್ದ ಅಮೆರಿಕ ಆಕ್ರಮಣಕಾರಿ ಚೀನಾಗೆ ಅಣ್ವಸ್ತ್ರ ಬೆದರಿಕೆ ಒಡ್ಡಿತು. ಚೀನಾ ಮರುಮಾತಿಲ್ಲದೇ ಹಿಂದೆ ಸರಿದು ಓಡಿಹೋಯಿತು! ಮುಂದಿನ ಒಂದು ದಶಕದಲ್ಲಿ ಚೀನಾದ ವಾಸ್ತವಗಳು ಬದಲಾದವು. 1964ರಲ್ಲಿ ಅಣ್ವಸ್ತ್ರ ಗಳಿಸಿಕೊಂಡ ಚೀನಾ ಅದನ್ನು ತನ್ನದೇ ಕಮ್ಯೂನಿಸ್ಟ್ ಹಿರಿಯಣ್ಣ ಸೋವಿಯೆತ್ ಯೂನಿಯನ್ ಅನ್ನು ಬೆದರಿಸಲು ಬಳಸಿಕೊಂಡಿತ್ತು. ಅಣ್ವಸ್ತ್ರದ ಹಮ್ಮಿನಿಂದಲೇ ಮಾರ್ಚ್ 1969ರಲ್ಲಿ ರಶಿಯನ್ ಸೈನಿಕರ ಮೇಲೆ ಮುಗಿಬಿದ್ದು ಉಸ್ಸೂರಿ ನದಿಯಲ್ಲಿದ್ದ ದಮೋನ್​ಸ್ಕಿ ದ್ವೀಪವನ್ನು ತನ್ನ ವಶಕ್ಕೆ ತೆಗೆದುಕೊಂಡ ಚೀನಾ ನಂತರ ರಶಿಯನ್ ಪ್ರತೀಕಾರ ಕ್ರಮ ಒಂದು ಮಿತಿ ದಾಟದಂತೆ ನೋಡಿಕೊಂಡದ್ದು ತನ್ನ ಅಣ್ವಸ್ತ್ರ ಸಂಗ್ರಹವನ್ನೂ, ಸ್ವರಕ್ಷಣೆಗಾಗಿ ಅದನ್ನು ಬಳಸಲು ಹಿಂಜರಿಯದಿರುವ ತನ್ನ ನೀತಿಯನ್ನೂ ಮಾಸ್ಕೋದ ಗಮನಕ್ಕೆ ತರುವ ಮೂಲಕ.

  1987ರಲ್ಲಿ ರಹಸ್ಯವಾಗಿ ಅಣ್ವಸ್ತ್ರ ಗಳಿಸಿಕೊಂಡು ಅದನ್ನು ಚೀನೀ ನೆಲದಲ್ಲಿ ಜಗತ್ತಿನ ಕಣ್ಣಿಗೆ ಮಣ್ಣೆರಚಿ ಯಶಸ್ವಿಯಾಗಿ ಪರೀಕ್ಷಿಸಿದ ಪಾಕಿಸ್ತಾನ ಜುಲೈ 1990ರಲ್ಲಿ ಅದನ್ನು ಭಾರತದ ಮುಂದೆ ಝುಳಪಿಸಿ ಕಾಶ್ಮೀರದಿಂದ ಭಾರತೀಯ ಸೇನೆ ಹೊರಹೋಗುವಂತೆ ಮಾಡುವ ಪ್ರಯತ್ನ ನಡೆಸಿತ್ತು. ಅಂತಹ ದುಸ್ಸಾಹಸಕ್ಕೆ ಇಸ್ಲಾಮಾಬಾದ್ ಮುಂದಾದರೆ ಪ್ರತಿ ಕಾರ್ಯಾಚರಣೆಯಲ್ಲಿ ಇಡೀ ಪಾಕಿಸ್ತಾನವನ್ನೇ ಧ್ವಂಸಗೈಯುವ ಸಾಮರ್ಥ್ಯ ತನಗಿದೆಯಂದು ಭಾರತ ತನ್ನ ವಿದೇಶಾಂಗ ಸಚಿವ ಐ.ಕೆ. ಗುಜ್ರಾಲ್ ಮೂಲಕ ಪ್ರತಿ ಸಂದೇಶ ರವಾನಿಸಿದಾಗ ಪಾಕಿಸ್ತಾನ ಸದ್ದಿಲ್ಲದೇ ಹಿಮ್ಮೆಟ್ಟಿತು. ನಂತರ ಡಿಸೆಂಬರ್ 2001ರ ಪಾರ್ಲಿಮೆಂಟ್ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಭಾರತ ತನ್ನ ಸೇನೆಯನ್ನು ಗಡಿಯಲ್ಲಿ ಜಮಾಯಿಸಿ, ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ನಾಶಮಾಡುವ ಬೆದರಿಕೆ ಒಡ್ಡಿದಾಗ ಇಸ್ಲಾಮಾಬಾದ್ ಮೂರು ಸಲ ಅಣ್ವಸ್ತ್ರಗಳನ್ನು ಝುಳಪಿಸಿ ಭಾರತದ ಕೈಗಳನ್ನು ಕಟ್ಟಿಹಾಕಿತು. ಅದರ ಅಂತಹದೇ ತಂತ್ರ ಕಳೆದ ದಶಕದಲ್ಲಿ ವಿಫಲವಾಯಿತು. ಭಾರತೀಯ ರಕ್ಷಣಾ ಪಡೆಗಳು ಸೆಪ್ಟೆಂಬರ್ 2016ರಲ್ಲಿ ಪಿಓಕೆಯೊಳಗೆ ಮತ್ತು ಫೆಬ್ರವರಿ 2019 ಪಾಕಿಸ್ತಾನದೊಳಗೇ ನುಗ್ಗಿ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ನಾಶಪಡಿಸಿದಾಗ ಇಸ್ಲಾಮಾಬಾದ್​ಗೆ ತನ್ನ ಅಣ್ವಸ್ತ್ರಗಳು ನೆನಪಾಗಲಿಲ್ಲ! ದೇಶಗಳ ರಾಷ್ಟ್ರೀಯ ಶಕ್ತಿಯನ್ನು ನಿರ್ಧರಿಸುವ ಅಂಶಗಳಲ್ಲಿ ರಾಜಕೀಯ ನಾಯಕತ್ವವೂ ಒಂದು ಎಂಬ ಅಂತಾರಾಷ್ಟ್ರೀಯ ರಾಜಕಾರಣದ ಸಿದ್ಧಾಂತವೊಂದಕ್ಕೆ ಈ ಪ್ರಕರಣ ಒಂದು ಹೊಸ ಉದಾಹರಣೆಯಾಗಿ ದಾಖಲಾಯಿತು.

  ಇಂದು ಯೂಕ್ರೇನ್​ಗೆ ಪಶ್ಚಿಮ ದೇಶಗಳು ನೀಡುತ್ತಿರುವ ಹಲಬಗೆಯ ಬೆಂಬಲ ಒಂದು ಮಿತಿಯನ್ನು ದಾಟಿದರೆ ಅಣ್ವಸ್ತ್ರ ಬಳಕೆಗೆ ಮುಂದಾಗುವುದಾಗಿ ರಷಿಯಾ ಪದೇಪದೆ ಬೆದರಿಕೆ ಒಡ್ಡುವುದನ್ನು ನಾವು ಕೇಳುತ್ತಲೇ ಇದ್ದೇವೆ. ಎರಡು ವಾರಗಳಿಂದೀಚೆಗೆ ಅದಕ್ಕೆ ಬೆಲಸೂಸ್ ಸಹ ತನ್ನ ದನಿ ಸೇರಿಸತೊಡಗಿದೆ. ಪರಿಸ್ಥಿತಿ ಕೈಮೀರದಿರಲಿ, ಡಜನ್​ಗಟ್ಟಲೆ ಹಿರೋಷಿಮಾಗಳು ಸೃಷ್ಟಿಯಾಗದಿರಲಿ ಎನ್ನುವುದೀಗ ಪ್ರಜ್ಞಾವಂತರ ಹಾರೈಕೆ. ಯಾಕೆಂದರೆ ಇಂದು ಮೂರನೆಯ ಮಹಾಯುದ್ಧವಾಗಿ ಅಣ್ವಸ್ತ್ರ ಯುದ್ಧವೇನಾದರೂ ಜಾಗತಿಕ ಮಟ್ಟದಲ್ಲಿ ನಡೆದರೆ ಮುಂದೇನಾಗುತ್ತದೆ ಎನ್ನುವುದನ್ನು ನೊಬೆಲ್ ಪುರಸ್ಕೃತ ವಿಜ್ಞಾನಿ ಆಲ್ಬರ್ಟ್ ಐನ್​ಸ್ಟೈನ್ ಮುಕ್ಕಾಲು ಶತಮಾನದ ಹಿಂದೆಯೇ ಈ ಮಾತುಗಳಲ್ಲಿ ಹೇಳಿದ್ದಾರೆ: ನಾಲ್ಕನೆಯ ಮಹಾಯುದ್ಧದಲ್ಲಿ ಕಲ್ಲುಗಳಿಂದ ಹೋರಾಡಬೇಕಾಗುತ್ತದೆ! ಇದರರ್ಥ ಸರಳವಾಗಿ ಇಷ್ಟೇ- ಅಣ್ವಸ್ತ್ರ ಯುದ್ಧ ನಮ್ಮನ್ನು ಶಿಲಾಯುಗಕ್ಕೆ ಒಯ್ಯುತ್ತದೆ!

  (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

  ಯಡಿಯೂರಪ್ಪ ಅವರನ್ನು ಮುಟ್ಟದಿದ್ದರೆ ಬಿಜೆಪಿ ಚೆನ್ನಾಗಿರುತ್ತಿತ್ತು: ರಾಜಗುರು ದ್ವಾರಕಾನಾಥ್

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts