ಮಂಗಳೂರಿಗೆ 7 ಸ್ಮಾರ್ಟ್ ರಸ್ತೆ

<ಸ್ಮಾರ್ಟ್‌ಸಿಟಿ ನಿರ್ದೇಶಕರ ಮಂಡಳಿ ಸಭೆಯಲ್ಲಿ ತೀರ್ಮಾನ>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸ್ಮಾರ್ಟ್‌ಸಿಟಿ ಯೋಜನೆಯ ಮೂರನೇ ಪ್ಯಾಕೇಜ್‌ನಲ್ಲಿ ಸುಮಾರು 49 ಕೋಟಿ ರೂ. ವೆಚ್ಚದಲ್ಲಿ 7 ಸ್ಮಾರ್ಟ್‌ರಸ್ತೆ ನಿರ್ಮಾಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಜರುಗಿದ ಮಂಗಳೂರು ಸ್ಮಾರ್ಟ್‌ಸಿಟಿ ಕಂಪನಿ ಲಿಮಿಟೆಡ್ ನಿರ್ದೇಶಕರ ಮಂಡಳಿ ಸಭೆ ನಿರ್ಧರಿಸಿದೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಎ.ಬಿ.ಶೆಟ್ಟಿ ಸರ್ಕಲ್- ರೋಜಾರಿಯೋ ಚರ್ಚ್, ಕ್ಲಾಕ್ ಟವರ್- ಹಂಪನಕಟ್ಟೆ ಜಂಕ್ಷನ್, ಹಂಪನಕಟ್ಟೆ- ಜ್ಯೋತಿ, ಜ್ಯೋತಿ- ಬಲ್ಮಠ, ನೆಲ್ಲಿಕಾಯಿ ರಸ್ತೆ- ಬಾಂಬೆ ಲಕ್ಕಿ ಸೇರಿದಂತೆ 7 ಸ್ಮಾರ್ಟ್‌ರಸ್ತೆ ನಿರ್ಮಿಸಲು ನಿರ್ಧರಿಸಲಾಯಿತು.
3 ಮಹಾಕಾಳಿಪಡ್ಪು ಬಳಿ ರೈಲ್ವೆ ಆರ್‌ಯುಬಿ (ರೋಡ್ ಅಂಡರ್ ಬ್ರಿಡ್ಜ್) ನಿರ್ಮಿಸಲು ದಕ್ಷಿಣ ರೈಲ್ವೆಗೆ 10 ಕೋಟಿ ರೂ. ಹಣ ವರ್ಗಾಯಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ರಸ್ತೆಗೆ ಸಂಬಂಧಿಸಿದ ವಿನ್ಯಾಸ ಸಿದ್ಧಪಡಿಸಿದ ನಂತರ ಹಣ ವರ್ಗಾಯಿಸಲು ನಿರ್ಣಯಿಸಲಾಯಿತು.

ಪ್ರಥಮ ಸಾಮಾನ್ಯ ಸಭೆ:
ಮಂಗಳೂರು ಸ್ಮಾರ್ಟ್‌ಸಿಟಿ ಕಂಪನಿ ಲಿಮಿಟೆಡ್‌ನ ಪ್ರಥಮ ಸಾಮಾನ್ಯ ಸಭೆ ಸ್ಮಾರ್ಟ್‌ಸಿಟಿ ಕಚೇರಿಯ ಕಾನ್ಫರೆನ್ಸ್ ಹಾಲ್‌ನಲ್ಲಿ ಸೋಮವಾರ ನಡೆಯಿತು. ಸ್ಮಾರ್ಟ್‌ಸಿಟಿ ನಿರ್ದೇಶಕರ ಮಂಡಳಿ ಸಭೆ ನಡೆದ ಬಳಿಕ ಸಾಮಾನ್ಯ ಸಭೆ ಜರುಗಿತು. ಕದ್ರಿ ಪಾರ್ಕ್ ಅಭಿವೃದ್ಧಿಗೆ ವೆಂಕಟೇಶ್ ಪೈ ಅವರನ್ನು ಹೊಸ ಕನ್ಸಲ್ಟೆನ್ಸಿಯಾಗಿ ನೇಮಕ ಮಾಡಲು ಒಪ್ಪಿಗೆ ಸೂಚಿಸಲಾಯಿತು. ಮೇಯರ್ ಭಾಸ್ಕರ್ ಕೆ., ನಿರ್ದೇಶಕರಾದ ಶಶಿಧರ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ಲ್ಯಾನ್ಸಿಲಾಟ್ ಪಿಂಟೋ, ರಮೀಜಾ ಭಾನು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಮಂಗಳೂರು ಸ್ಮಾರ್ಟ್‌ಸಿಟಿ ಕಂಪನಿ ಆಡಳಿತ ನಿರ್ದೇಶಕ ನಾರಾಯಣಪ್ಪ, ಜಂಟಿ ಆಡಳಿತ ನಿರ್ದೇಶಕ ಡಾ.ನಾಗರಾಜ್ ಎಲ್., ಪಾಲಿಕೆ ಆಯುಕ್ತ ಮಹಮ್ಮದ್ ನಜೀರ್ ಉಪಸ್ಥಿತರಿದ್ದರು.

ವೆನ್ಲಾಕ್ ಆಸ್ಪತ್ರೆಗೆ 33 ಬೆಡ್ ಸುಸಜ್ಜಿತ ಐಸಿಯು: ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ನ್ಯೂಬ್ಲಾಕ್‌ನಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಐಸಿಯು (ತೀವ್ರ ನಿಗಾ ಘಟಕ)ವನ್ನು ಮೇಲ್ದರ್ಜೆಗೇರಿಸುವ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಪ್ರಸ್ತುತ ವೆನ್ಲಾಕ್ ಆಸ್ಪತ್ರೆಯಲ್ಲಿ 12 ಬೆಡ್‌ಗಳ ಐಸಿಯು ಇದ್ದು, ಸೀಮಿತ ಸೌಕರ್ಯಗಳು ಇದ್ದರೂ ಇದು ಹೆಚ್ಚಿನ ಸಂದರ್ಭಗಳಲ್ಲಿ ಭರ್ತಿ ಆಗಿರುತ್ತಿದ್ದವು. ಆದ್ದರಿಂದ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕಿಯ ಪ್ರಸ್ತಾವನೆ ಹಿನ್ನೆಲೆಯಲ್ಲಿ ಆಸ್ಪತ್ರೆಯ ಐಸಿಯು ವ್ಯವಸ್ಥೆ ಉನ್ನತೀಕರಣಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವಕಾಶ ಒದಗಿಸಲು ತೀರ್ಮಾನಿಸಲಾಯಿತು. ಹೊಸ ಯೋಜನೆ ಪ್ರಕಾರ 33 ಬೆಡ್‌ಗಳ ಸುಸಜ್ಜಿತ ಐಸಿಯು ನಿರ್ಮಾಣಗೊಳ್ಳಲಿದೆ.

ಸರ್ವೀಸ್ ಬಸ್ ನಿಲ್ದಾಣ ಪ್ರಸ್ತಾವ: ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ಖಾಸಗಿ ಸರ್ವೀಸ್ ಬಸ್ ನಿಲ್ದಾಣವನ್ನು ಕೂಳೂರು ಬಳಿ ನಿರ್ಮಿಸುವ ಕುರಿತು ಪ್ರಸ್ತಾವನೆ ಮಂಡಿಸಲಾಯಿತು. ಕೂಳೂರು ಬಳಿ ಮಂಗಳೂರು ಮಹಾನಗರ ಪಾಲಿಕೆಗೆ ಸೇರಿದ 4 ಎಕರೆ ಹಾಗೂ ಅರಣ್ಯ ಇಲಾಖೆಗೆ ಸೇರಿದ 3 ಎಕರೆ ಜಾಗವಿದ್ದು, ಒಟ್ಟು 7 ಎಕರೆ ಸ್ಥಳದಲ್ಲಿ ನೂತನ ಸರ್ವಿಸ್ ಬಸ್ ನಿಲ್ದಾಣವನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವ ಕುರಿತು ಚರ್ಚೆ ನಡೆಸಲಾಯಿತು. ಸ್ಮಾರ್ಟ್‌ಸಿಟಿ ಯೋಜನೆಯ 4ನೇ ಪ್ಯಾಕೇಜ್‌ನಲ್ಲಿ 37 ಕೋಟಿ ರೂ. ವೆಚ್ಚದಲ್ಲಿ ಪಾಂಡೇಶ್ವರ, ಮಂಗಳಾದೇವಿ ಮುಂತಾದ ಪ್ರದೇಶದಲ್ಲಿ ಒಳಚರಂಡಿ ನಿರ್ಮಿಸಲು ಒಪ್ಪಿಗೆ ನೀಡಲಾಯಿತು.