ಬಾವಿಗಿಳಿದು ಹೂಳು ತೆಗೆದ ಯುವಪಡೆ

ರಾಜಕುಮಾರ ಹೊನ್ನಾಡೆ ಹುಲಸೂರು
ಬೇಸಿಗೆ ಬಿರುಬಿಸಿಲು ಹೆಚ್ಚುತ್ತಿದ್ದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನ-ಜಾನುವಾರುಗಳು ಪರದಾಡುತ್ತಿರುವುದು ಸಾಮಾನ್ಯ. ಕೇಸರ ಜವಳಗಾದಲ್ಲಿ ಸಮಸ್ಯೆ ತೀವ್ರವಾಗಿದ್ದರಿಂದ ಯುವಕರು ಜೀವದ ಹಂಗು ತೊರೆದು ತೆರೆದ ಬಾವಿ ಆಳಕ್ಕಿಳಿದು ಹೂಳು ತೆಗೆಯುವ ಮೂಲಕ ಜೀವಜಲ ಸಂರಕ್ಷಣೆ ಮಾಡಿದ್ದಾರೆ.

ಭಾಲ್ಕಿ ತಾಲೂಕಿನ ಸಾಯಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಸರ ಜವಳಗಾದಲ್ಲಿ 4000ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, 6ಕ್ಕೂ ಹೆಚ್ಚು ಗ್ರಾಪಂ ಸದಸ್ಯರಿದ್ದಾರೆ. ಆದರೂ ಊರಿನ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿರುವುದು ಗ್ರಾಮಸ್ಥರನ್ನು ದಿಕ್ಕು ತೋಚದಂತೆ ಮಾಡಿದೆ.

ಊರಲ್ಲಿ ಏಳು ಕೊಳವೆ ಬಾವಿ, ಒಂದು ತೆರೆದ ಬಾವಿ ಇದೆ. ಎರಡು ಕೊಳವೆ ಬಾವಿಗಳಿಂದ ಸ್ವಲ್ಪ ನೀರು ಬರುತ್ತಿದ್ದರೆ, ಇನ್ನೊಂದರಲ್ಲಿ ಕೇವಲ 10-20 ಕೊಡ ನೀರು ಸಿಗುತ್ತಿದೆ. ಇನ್ನು ಹರಳಯ್ಯ ಬಡಾವಣೆಯ ಕೊಳವೆ ಬಾವಿ ನೀರು ಕಾದರಾಬಾದ್ ವಾಡಿ ರಸ್ತೆಯ ಸರ್ಕಾರಿ ತೆರೆದ ಬಾವಿಯಲ್ಲಿ ಸಂಗ್ರಹವಾಗಿ ಅಲ್ಲಿಂದ ಗ್ರಾಮಕ್ಕೆ ಸರಬರಾಜು ಆಗುತ್ತದೆ. ಆದರೆ ವರ್ಷದಿಂದ ಸರ್ಕಾರಿ ಬಾವಿಯಲ್ಲಿ ಹೂಳು ತುಂಬಿದ್ದರಿಂದ ನೀರು ಕಡಿಮೆಯಾಗಿ ಕುಡಿಯಲು ಇನ್ನಿಲ್ಲದ ಪರದಾಟ ನಡೆಸಬೇಕಿದೆ.

ಬಾವಿ ಹೂಳು ತೆಗೆದರೆ ನೀರು ಬರುತ್ತದೆ ಎಂಬ ನಂಬಿಕೆಯಿಂದ ಕಳೆದೊಂದು ತಿಂಗಳಿಂದ ಯುವಕರು ಗ್ರಾಪಂ ಸದಸ್ಯರಿಗೆ ಮತ್ತು ಪಿಡಿಒ ಬೆನ್ನು ಹತ್ತಿದರೂ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಸಿಡಿದೆದ್ದ ಯುವ ಸಮೂಹ ನೆತ್ತಿ ಸುಡುವ ಬಿಸಿಲು ಲೆಕ್ಕಿಸದೆ ಬಾವಿಗಿಳಿದು ಹೂಳು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಣ ನೀಡಿದ್ದರೂ ಕೂಲಿ ಕಾರ್ಮಿಕರು ಸಿಗದ ಇಂದಿನ ದಿನಗಳಲ್ಲಿ ತಮ್ಮೂರ ಸಮಸ್ಯೆ ತಾವೇ ಬಗೆಹರಿಸಿಕೊಳ್ಳಬೇಕು ಎಂದು ನಿರ್ಧರಿಸಿ ರಾಜು ಗಡದೆ, ಹರಿದಾಸ ಚೋರಮಲ್ಲೆ, ದತ್ತಾ ಕೊಳೇಕರ್, ಸುರೇಶ ಚೋರಮಲ್ಲೆ, ಶಿವಾಜಿ ಖಾಂಡೇಕರ್, ಮಾರುತಿ ನಿಟ್ಟೂರೆ, ಗಜಾನಂದ ಚೋರಮಲೆ, ಕಾಶೀನಾಥ ಸೇರಿ 10ಕ್ಕೂ ಹೆಚ್ಚು ಯುವಕರು ಗ್ರಾಪಂಗೆ ಸೇರಿದ 40 ಅಡಿ ಆಳದ ತೆರೆದ ಬಾವಿಯಲ್ಲಿ ಜೀವದ ಹಂಗು ತೊರೆದು ಹೂಳು ತೆಗೆದು ಊರಿಗೆ ಜೀವಜಲ ಸಿಗುವಂತೆ ಮಾಡಿ ಮಾದರಿ ಎನಿಸಿದ್ದಾರೆ