ಮಲಿನವಾಗುತ್ತಿದೆ ಸೀತಾನದಿ

ನದಿಗೆ ಕೋಳಿತ್ಯಾಜ್ಯ, ಸಾಂಕ್ರಾಮಿಕ ರೋಗ ಭೀತಿ * ಕ್ರಮಕ್ಕೆ ಜನರ ಆಗ್ರಹ >

ಅನಂತ್ ನಾಯಕ್ ಮುದ್ದೂರು ಕೊಕ್ಕರ್ಣೆ

ಕೊಕ್ಕರ್ಣೆ ಪರಿಸರದ ಎರಡು ಗ್ರಾಮಗಳ ರೈತರ ಪಾಲಿನ ವರದಾನವಾದ ಸೀತಾನದಿ ತ್ಯಾಜ್ಯದ ಆಗರವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ.

ಕೊಕ್ಕರ್ಣೆ ಮತ್ತು ಕಾಡೂರು ಸಂಪರ್ಕಿಸಲು ನದಿಗೆ ಸೇತುವೆ ನಿರ್ಮಿಸಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ವಾಹನಗಳಲ್ಲಿ ಸೇತುವೆ ಮೂಲಕ ಬಂದು ತಮ್ಮ ಮನೆಯಲ್ಲಿನ ತ್ಯಾಜ್ಯಗಳು, ಅಂಗಡಿ ಮಂಗಟ್ಟುಗಳ ತ್ಯಾಜ್ಯಗಳು, ಕೋಳಿ ತ್ಯಾಜ್ಯಗಳನ್ನು ತಂದು ಸೀತಾನದಿಗೆ ಎಸೆಯುತ್ತಿದ್ದಾರೆ. ಇದರಿಂದಾಗಿ ಕುಡಿಯುವ ನೀರು ಮಲಿನಗೊಳ್ಳುವ ಜತೆಗೆ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತಿದೆ. ಪ್ರಸ್ತುತ ನದಿ ಪ್ರದೇಶ ಡಂಪಿಂಗ್ ಯಾರ್ಡ್‌ನಂತೆ ಭಾಸವಾಗುತ್ತಿದೆ. ಮನೆಯ ಅನುಪಯುಕ್ತ ವಸ್ತುಗಳು, ಮದ್ಯದ ಬಾಟಲಿ, ಮೀನಿನ ತ್ಯಾಜ್ಯ, ಕೋಳಿ ತ್ಯಾಜ್ಯಗಳು ನದಿಯ ಎಲ್ಲೆಂದರಲ್ಲಿ ಕಾಣಸಿಗುತ್ತವೆ.

ತ್ಯಾಜ್ಯ ವಿಸರ್ಜನೆಯಿಂದ ನೀರಿನ ಬಣ್ಣ ಬದಲಾಗಿದ್ದು, ವಿಷಯುಕ್ತವಾಗಿದೆ. ಈ ಕುರಿತು ಶೀಘ್ರ ಸಂಬಂಧಪಟ್ಟ ಗ್ರಾಪಂ ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ ಪವಿತ್ರ ಸೀತಾನದಿ ಸಂಪೂರ್ಣ ಕಲುಷಿತಗೊಂಡು ಮನುಷ್ಯ, ಪ್ರಾಣಿ, ಪಕ್ಷಿ, ಗಿಡಗಳ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.

ಕಾಡೂರು ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ಸಂದರ್ಭ ಊರಿನ ಯುವಕರ ತಂಡ ಅವರನ್ನು ಹಿಡಿದು ಅವರಿಂದಲೇ ಕಸದ ವಿಲೇವಾರಿ ಮಾಡಿಸಲಾಗಿತ್ತು. ನದಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕೊಕ್ಕರ್ಣೆ ಮತ್ತು ಕಾಡೂರು ಗ್ರಾಪಂ, ಸಾರ್ವಜನಿಕರಿಂದ ಮಾತ್ರ ಇಂತಹ ಪ್ರಕರಣ ತಡೆಯಲು ಸಾಧ್ಯ.
ಮಹೇಶ್ ಕೆ., ಕಾಡೂರು ಪಿಡಿಒ

ಕೋಳಿ ಅಂಗಡಿಗಳ ತ್ಯಾಜ್ಯ ಘಟಕಗಳನ್ನು ಪರಿಶೀಲಿಸಲಾಗುವುದು. ತ್ಯಾಜ್ಯ ಎಸೆಯುವವರ ವಿರುದ್ಧ ಪೊಲೀಸ್ ಇಲಾಖೆಗೆ ದೂರು ನೀಡಲಾಗುವುದು. ಪ್ರತಿ ಅಂಗಡಿ ಮುಂಗಟ್ಟುಗಳಿಗೆ ಕಸದ ಬುಟ್ಟಿ ನೀಡಿದ್ದೇವೆ. ಆದರೂ ನೀರಿನ ಮಾಲಿನ್ಯ ಮಾಡುತ್ತಿರುವುದು ಅಪರಾಧ.
ಪ್ರದೀಪ್, ಕೊಕ್ಕರ್ಣೆ ಪಿಡಿಒ

ಕತ್ತಲಾಗುತ್ತಿದಂತೆ ಸೇತುವೆ ಮೇಲಿಂದ ಕಸವನ್ನು ಎಸೆಯುತ್ತಾರೆ. ಕೊಳಚೆ ನೀರು ಮತ್ತು ತ್ಯಾಜ್ಯಗಳ ರಾಶಿಯಿಂದ ಪರಿಸರ ಸಂಪೂರ್ಣ ಹಾಳಾಗುತ್ತಿದೆ. ದಿನೇದಿನೆ ತ್ಯಾಜ್ಯದ ದೊಡ್ಡ ರಾಶಿಗಳು ನೀರನ್ನು ಸೇರುತ್ತಿರುವುದು ಅಪಾಯಕಾರಿ. ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಗ್ರಾಪಂ ಈ ಬಗ್ಗೆ ನಿರ್ಲಕ್ಷೃ ವಹಿಸಿದೆ. ಗ್ರಾಪಂ ಮತ್ತು ಸಾರ್ವಜನಿಕರು ಪರಿಸರವನ್ನು ಸ್ವಚ್ಛವಾಗಿರಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾದಿತು. ಸೇತುವೆ ಇಕ್ಕೆಲಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲಿ.
ಸ್ಥಳೀಯರು