ಹಾನಗಲ್ಲ: ಮಲೆನಾಡಿನ ಸೆರಗಿನಲ್ಲಿರುವ ಭತ್ತದ ಕಣಜ ಖ್ಯಾತಿಯ ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಭತ್ತದ ನಾಟಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ.
ಜೂನ್‌ನಲ್ಲಿ ವಾಡಿಕೆಯಂತೆ 193 ಮಿ.ಮೀ. ಮಳೆ ಬೀಳಬೇಕಿತ್ತು. ಆದರೆ, 103 ಮಿ.ಮೀ. ಮಳೆ ಸುರಿದಿದೆ. ಜುಲೈನಲ್ಲಿ 299 ಮಿ.ಮೀ. ವಾಡಿಕೆ ಮಳೆ ಪೈಕಿ ಈವರೆಗೆ 94.30 ಮಿ.ಮೀ. ಮಳೆ ಸುರಿದಿದೆ. ತಾಲೂಕಿನಲ್ಲಿ 47 ಸಾವಿರ ಹೆಕ್ಟೇರ್ ಕೃಷಿ ಭೂಮಿಯಿದ್ದು, ಇದುವರೆಗೆ 40 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಆಗಿದೆ. ತಾಲೂಕಿನ ಬಿತ್ತನೆ ಪ್ರದೇಶದ ಶೇ. 83ರಷ್ಟರಲ್ಲಿ ಈಗಾಗಲೇ ಗೋವಿನಜೋಳ, ಸೋಯಾಅವರೆ ಹಾಗೂ ಇತರ ಖುಷ್ಕಿ ಬೆಳೆಗಳ ಬಿತ್ತನೆ ಆಗಿದೆ. ಇನ್ನುಳಿದ ಶೇ. 27ರಷ್ಟು ಕೃಷಿಭೂಮಿ ನಾಟಿ ಕಾರ್ಯಕ್ಕಾಗಿ ಕಾಯುತ್ತಿದೆ.
ಪ್ರಸಕ್ತ ವರ್ಷ ಜುಲೈ ಅರ್ಧ ಕಳೆದಿದೆ. ನೀರು ಹರಿಯುವಂತಹ ಮಳೆ ಆಗದಿರುವುದರಿಂದ ಕೆರೆ-ಕಟ್ಟೆಗಳಿಗೆ ನೀರು ಬಂದಿಲ್ಲ. ಇದರಿಂದಾಗಿ ಈವರೆಗೂ ಕೊಳವೆಬಾವಿಗಳಲ್ಲೂ ಅಂತರ್ಜಲ ವೃದ್ಧಿಯಾಗಿಲ್ಲ. ಹೀಗಾಗಿ, ನೀರಾವರಿ ಕ್ಷೇತ್ರದಲ್ಲಿ ಕೈಗೊಳ್ಳಬೇಕಿದ್ದ ಭತ್ತದ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಒಮ್ಮೆಲೇ ಭಾರಿ ಮಳೆ ಸುರಿದರೆ ಯಾವುದೇ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹಂತ ಹಂತವಾಗಿ ಹದಭರಿತ ಮಳೆಯಾದರೆ ಮಾತ್ರ ಸಾಂಪ್ರದಾಯಿಕ ಕೃಷಿ ಕಾರ್ಯಗಳು ಚುರುಕು ಪಡೆಯುತ್ತವೆ. ಪ್ರತಿ ವರ್ಷ ಜುಲೈ ಮೊದಲ ವಾರದಲ್ಲಿ ಭತ್ತದ ನಾಟಿ ಶುರುವಾಗುತ್ತಿತ್ತು. ಈಗಾಗಲೇ ರೈತರು ನಾಟಿಗಾಗಿ ಭತ್ತದ ಸಸಿ ಮಡಿ ಹಾಕಿಕೊಂಡು ಮಳೆಗಾಗಿ ಕಾಯುತ್ತಿದ್ದಾರೆ.
ತಾಲೂಕಿನ ಪಕ್ಕದ ಜಿಲ್ಲೆಗಳಾದ ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದ್ದರೂ 25 ಕಿ.ಮೀ. ಅಂತರದಲ್ಲಿರುವ ಹಾನಗಲ್ಲ ತಾಲೂಕಿನತ್ತ ಮಳೆರಾಯ ಕಣ್ಣು ಹಾಯಿಸುತ್ತಿಲ್ಲ. ಗೋವಿನಜೋಳ, ಸೋಯಾಅವರೆ, ಹತ್ತಿ, ಜೋಳ, ದ್ವಿದಳ ಧಾನ್ಯಗಳಾದ ಹೆಸರು, ಉದ್ದು, ಹುರಳಿ, ಅಲಸಂದೆಗಳಂಥ ಬೆಳೆಗಳಿಗೆ ಹೇಳಿ ಮಾಡಿಸಿದಂಥ ವಾತಾವರಣವಿದೆ. ಆದರೆ, ಭತ್ತದ ಕಣಜ ಖ್ಯಾತಿಯ ಹಾನಗಲ್ಲ ತಾಲೂಕಿನಲ್ಲಿಗ ಮಳೆಯ ಕೊರತೆಯಿಂದಾಗಿ ಭತ್ತದ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿರುವುದು ಕೃಷಿ ವಲಯದಲ್ಲಿ ಆತಂಕ ಸೃಷ್ಟಿಸಿದೆ.
ಬದಲಾದ ಕೃಷಿ ಕ್ಷೇತ್ರ: 2012ರವರೆಗೆ ತಾಲೂಕಿನಲ್ಲಿ ಭತ್ತದ ಕ್ಷೇತ್ರ 24 ಸಾವಿರ ಹೆಕ್ಟೇರ್ ಪ್ರದೇಶದೊಂದಿಗೆ ತಾಲೂಕಿನ ಪ್ರಮುಖ ಬೆಳೆಯಾಗಿ ಗುರುತಿಸಿಕೊಂಡಿತ್ತು. ಕಾಲಕ್ರಮೇಣ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕುಂಠಿತಗೊಂಡಿದೆ. ತಾಲೂಕಿನಲ್ಲಿ ಧರ್ಮಾ-ವರದಾ ನದಿಗಳೆರಡು ಹರಿದಿದ್ದರೂ ಅವುಗಳಲ್ಲೂ ನೀರು ಹರಿವಿನ ಪ್ರಮಾಣ ಕುಸಿತಗೊಂಡಿದೆ. ಹೀಗಾಗಿ, ರೈತರು ಭತ್ತ ಬೆಳೆಯುವುದನ್ನು ನಿಲ್ಲಿಸಿ ಕಡಿಮೆ ನೀರು ಬೇಡುವ ಗೋವಿನಜೋಳಕ್ಕೆ ಮೊರೆ ಹೋಗಿದ್ದಾರೆ. ಭತ್ತದ ಕ್ಷೇತ್ರವನ್ನು ಗೋವಿನಜೋಳ ಆವರಿಸಿದೆ. ಇನ್ನೊಂದಷ್ಟು ಭೂಮಿ ವಾಣಿಜ್ಯ ಬೆಳೆಗಳಾದ ಅಡಕೆ, ಬಾಳೆ, ಶುಂಠಿ ತೋಟಗಳಾಗಿ ಪರಿವರ್ತನೆಗೊಂಡಿದೆ.
ಮುಂಗಾರು ಆರಂಭಗೊಂಡು ಒಂದೂವರೆ ತಿಂಗಳಾದರೂ ಸರಿಯಾಗಿ ಮಳೆಯಾಗದೇ ಕೆರೆ, ಕಟ್ಟೆಗಳಿಗೆ ನೀರು ತುಂಬಿಲ್ಲ. ಹೀಗಾಗಿ, ಭತ್ತದ ನಾಟಿ ಕೆಲಸ ವಿಳಂಬವಾಗಿದೆ. ಭತ್ತದ ಸಸಿಗಳನ್ನು ಬೆಳೆಸಿ ಕಾಯುತ್ತಿದ್ದೇವೆ. ತಾಲೂಕಿನ ಹನುಮನಕೊಪ್ಪ, ಗೆಜ್ಜಿಹಳ್ಳಿ, ಗಿರಿಸಿನಕೊಪ್ಪ, ಹಿರೂರ, ಡೊಳ್ಳೇಶ್ವರ, ಸುರಳೇಶ್ವರ ಸೇರಿ ಅನೇಕ ಗ್ರಾಮಗಳಲ್ಲಿ ಭತ್ತ ನಾಟಿಗೆ ಭೂಮಿ ಕಾಯ್ದಿರಿಸಿಕೊಂಡಿದ್ದಾರೆ. ಮುಂದೆ ಮಳೆ ಬರುವ ವಿಶ್ವಾಸದಿಂದ ಸದ್ಯ ಕೊಳವೆಬಾವಿ ನೀರು ಬಳಸಿಕೊಂಡು ಕೆಲವರು ನಾಟಿಗೆ ಮುಂದಾಗುತ್ತಿದ್ದಾರೆ.
ಸೋಮಣ್ಣ ಜಡೆಗೊಂಡರ ರೈತ ಹಿರೂರ ಗ್ರಾಮ
ಹವಾಮಾನ ಇಲಾಖೆ ಜುಲೈ, ಆಗಸ್ಟ್‌ನಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಸಾಂಪ್ರದಾಯಿಕವಾಗಿ ಭತ್ತದ ನಾಟಿಗೆ ಆಗಸ್ಟ್ ವರೆಗೆ ಅವಕಾಶವಿದೆ. ರೈತರು ಆತಂಕಪಡುವ ಅಗತ್ಯವಿಲ್ಲ. ಮಳೆಯಾಗದಿದ್ದಲ್ಲಿ ಪರ್ಯಾಯ ಕ್ರಮಗಳ ಕುರಿತು ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು.
ಕೆ. ಮೋಹನಕುಮಾರ ಸಹಾಯಕ ಕೃಷಿ ನಿರ್ದೇಶಕ ಹಾನಗಲ್ಲ