ಆಸಿಸ್​ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಭಾರತಕ್ಕೆ ಆಘಾತ: ಪೃಥ್ವಿ ಷಾಗೆ ಗಾಯ

ಸಿಡ್ನಿ: ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲಿ ಪದಾರ್ಪಣೆ ಪಂದ್ಯದಲ್ಲೇ ಭರ್ಜರಿ ಶತಕ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿರುವ ಪ್ರತಿಭಾವಂತ ಯುವ ಕ್ರಿಕೆಟಿಗ ಪೃಥ್ವಿ ಷಾ ಅವರು ಕ್ರಿಕೆಟ್​ ಆಸ್ಟ್ರೇಲಿಯಾ ಇಲವೆನ್​ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ಗೆ ಅಲಭ್ಯರಾಗಿದ್ದಾರೆ.

ಪೃಥ್ವಿ ಷಾ ಅಭ್ಯಾಸ ಪಂದ್ಯದ 3ನೇ ದಿನದಾಟದ ಬೆಳಗಿನ ಅವಧಿಯಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್​ ಮಾಡುವ ಸಂದರ್ಭದಲ್ಲಿ ಚೆಂಡು ತಡೆಯುವಾಗ ತಮ್ಮ ಕಣಕಾಲಿಗೆ ಗಾಯಮಾಡಿಕೊಂಡಿದ್ದಾರೆ. ಷಾ ಕಾಲು ಸ್ಕ್ಯಾನ್​ ಮಾಡಲಾಗಿದ್ದು, ಲ್ಯಾಟರಲ್​ ಲಿಗಮೆಂಟ್​ ಇಂಜ್ಯುರಿ ಅಗಿರುವುದು ಕಂಡು ಬಂದಿದೆ. ಹಾಗಾಗಿ ಅವರು ಮೊದಲ ಟೆಸ್ಟ್​ನಲ್ಲಿ ಆಡುವುದಿಲ್ಲ. ಷಾ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಬೇಗ ಚೇತರಿಸಿಕೊಂಡು ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಷಾ ಗಾಯಗೊಂಡಿರುವುದರಿಂದ ಮೊದಲ ಟೆಸ್ಟ್​ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್​. ರಾಹುಲ್​ ಮತ್ತು ಮುರಳಿ ವಿಜಯ್​ ಆರಂಭಿಕ ಆಟಗಾರರಗಾಗಿ ಕಣಕ್ಕಿಳಿಯಲಿದ್ದಾರೆ.  ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್​ ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್​ ಪಂದ್ಯ ಡಿ. 6 ರಿಂದ ಅಡಿಲೇಡ್​ನಲ್ಲಿ ಪ್ರಾರಂಭವಾಗಲಿದೆ. (ಏಜೆನ್ಸೀಸ್​)