ಊರಮ್ಮ ದೇವಿಯ ಹರಕೆ ಸಂಪನ್ನ

blank

ಹರಿಹರ: ಹಿಟ್ಟಿನ ಕೋಣ ಬಲಿ, ಬೇವಿನ ಉಡುಗೆ, ದೀಡು ನಮಸ್ಕಾರ ಹಾಕುವ ಮೂಲಕ ಭಕ್ತರು ಊರಮ್ಮ ದೇವಿಗೆ ಹರಕೆ ಸಲ್ಲಿಸಿದರು.

blank

ನಗರದ ಗ್ರಾಮದೇವತೆಗೆ ಬುಧವಾರ ಬೆಳಗಿನ ಜಾವ ದೇವಿಗೆ ಹಿಟ್ಟಿನ ಕೋಣವನ್ನು ಹಾಗೂ ಜೀವಂತ ಕುರಿಗಳನ್ನು ಬಲಿ ನೀಡಲಾಯಿತು.

ಬೇವಿನ ಉಡುಗೆಯನ್ನುಟ್ಟು ನೂರಾರು ಮಹಿಳೆಯರು, ಪುರುಷರು ಮತ್ತು ಮಕ್ಕಳು ದೇವಸ್ಥಾನ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಚೌಕಿಮನೆ ಹತ್ತಿರ ಬಂದು ತಮ್ಮ ಹರಕೆ ತೀರಿಸಿದರು.

ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಬಿಗಿ ಭದ್ರತೆಯ ಪರಿಣಾಮ ಚೌಕಿಮನೆಯ ಸಮೀಪ ಕೋಣವನ್ನು ಬಲಿ ಕೊಡಲು ಸಾಧ್ಯವಾಗಲಿಲ್ಲ. ಆದರೆ ಚೌಕಿ ಮನೆಯ ಅನತಿ ದೂರದಲ್ಲಿ ಕೋಣವನ್ನು ಬಲಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಬುಧವಾರ ಬೆಳಗಿನ ಜಾವ ಕಸಬಾ ಗ್ರಾಮದವರು ಪೂರ್ವ ದಿಕ್ಕಿನಿಂದ ಚರಗ ಚೆಲ್ಲುವುದಕ್ಕೆ ಪ್ರಾರಂಭಿಸಿದರು. ತಮ್ಮ ಕಸಬಾ ವ್ಯಾಪ್ತಿಯ ಗಡಿ ಪ್ರದೇಶಗಳನ್ನು ಪೂರೈಸಿಕೊಂಡು ನಂತರ ಮಾಹಜೇನಹಳ್ಳಿಯ ಗಡಿ ಭಾಗಕ್ಕೆ ಚರಗ ಚೆಲ್ಲಲು ಶ್ರೀ ಹರಿಹರೇಶ್ವರ ದೇವಸ್ಥಾನದ ಹಿಂಭಾಗದ ಅರಳಿ ಮರದ ಹತ್ತಿರ ತಲುಪಿದರು. ನಂತರ ಮಾಹಜೇನಹಳ್ಳಿ ಗ್ರಾಮದವರು ಚರಗ ಚೆಲ್ಲಲು ಪ್ರಾರಂಭಿಸಿದರು.

ಅರೆ ಬೆತ್ತಲೆ ಬೇವಿನುಡುಗೆ: ಊರಮ್ಮ ದೇವಿಯ ಜಾತ್ರೆ ಹಿನ್ನೆಲೆಯಲ್ಲಿ ಈ ಬಾರಿ ಬೇವಿನುಡುಗೆ ಸೇವೆ ನೆರವೇರಿತು. ಮಕ್ಕಳು, ಮಹಿಳೆಯರು ಸೇರಿ ಪುರುಷರು ಸಹ ಬೇವಿನುಡುಗೆ ತೊಟ್ಟಿದ್ದರು. ಚೌಕಿಮನೆಯ ಮುಂಭಾಗ ಭಕ್ತರಿಗೆ ಸ್ನಾನ ಮಾಡಲು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸ್ನಾನ ಮಾಡಿ ಹೊಸ ಬಟ್ಟೆಯನ್ನುಟ್ಟು ದೇವಿಯ ದರ್ಶನ ಪಡೆದು ಹರಕೆ ತೀರಿಸಿದರು.

ಕುರಿಗಳಿಗೆ ಅಲಂಕಾರ: ದೇವಿಗೆ ಹರಕೆ ತೀರಿಸಲು ತಂದ ಕುರಿಗಳಿಗೆ ಹೂವಿನ ಹಾರ ಮತ್ತು ಹೊಸ ವಸ್ತ್ರವನ್ನು ಹಾಕಿ ಅಲಂಕರಿಸಿ ದೇವಿಯ ಮುಂದೆ ತಂದು ಪೂಜೆ ಸಲ್ಲಿಸಿ ಮನೆಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಭಕ್ತರ ದಂಡು: ಕಸಬಾ ಮತ್ತು ಮಹಜೇನಹಳ್ಳಿ ದೇವಸ್ಥಾನಗಳ ಆವರಣ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಪ್ರಮುಖ ರಸ್ತೆಗಳಲ್ಲಿ ಕಣ್ಣಿಗೆ ಕಾಣುವಷ್ಟು ದೂರ ಜನರು ಹಾಗೂ ಫ್ಲೆಕ್ಸ್​ಗಳು ಕಾಣುತ್ತಿದ್ದವು. ದಾವಣಗೆರೆ, ಹೊನ್ನಾಳ್ಳಿ, ರಾಣೆಬೆನ್ನೂರು ಸೇರಿ ವಿವಿಧ ತಾಲೂಕಿನಿಂದ ಸಾವಿರಾರು ಜನರು ಉತ್ಸವಕ್ಕೆ ಸಾಕ್ಷಿಯಾದರು.

ಸಂಚಾರ ದಟ್ಟಣೆ ಆಗದಂತೆ ಕ್ರಮ: ಗ್ರಾಮ ದೇವತೆಯ ಉತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆಯಾಗದಂತೆ ಪೊಲೀಸ್ ಇಲಾಖೆ ಅಲ್ಲಲ್ಲಿ ಮಾರ್ಗ ಬದಲಾವಣೆ ಮಾಡುವ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ನಸುಕಿನಲ್ಲಿ ದೇವಿಯ ಮೆರವಣಿಗೆ: ಮಹಜೇನಹಳ್ಳಿ ದೇವಸ್ಥಾನದಿಂದ ಮಂಗಳವಾರ ವಿವಿಧ ವಾದ್ಯಗಳೊಂದಿಗೆ ಆರಂಭವಾದ ದೇವಿಯ ಮೆರವಣಿಗೆಯು ಕಸಬಾ ಮೂಲ ದೇವಸ್ಥಾನದ ಮೂಲಕ ಚೌಕಿ ಮನೆಗೆ ಬಂದು ಸೇರುವಷ್ಟರಲ್ಲಿ ಬುಧವಾರ ಬೆಳಗಿನ ಜಾವ 5 ಗಂಟೆಯಾಗಿತ್ತು. ಮೆರವಣಿಯ ದಾರಿಯುದ್ದಕ್ಕೂ ಮನೆಯ ಮುಂದೆ ಮಹಿಳೆಯರು ರಂಗೋಲಿ ಹಾಕಿ ದೇವಿಯ ಬರುವಿಕೆಗಾಗಿ ಕಾದು ದರ್ಶನ ಪಡೆದರು.

ಜೀವಂತ ಕೋಣ ಬಲಿ: ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ವಿವಿಧ ಸಂಘಟನೆಗಳ ಮನವಿ ಮೇರೆಗೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯವರು ಪಟ್ಟದ ಕೋಣವನ್ನು ಮಂಗಳವಾರ ವಶಕ್ಕೆ ಪಡೆದಿದ್ದರು. ಆದರೆ ಇಲಾಖೆಗೆ ಸಮಿತಿಯವರು ದಾರಿ ತಪ್ಪಿಸಿದ್ದು ಬುಧವಾರ ಬೆಳಗಿನ ಜಾವ ಜೀವಂತ ಕೋಣ ಬಲಿ ನೀಡಲಾಯಿತು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು.

ಪೊಲೀಸ್ ಇಲಾಖೆಯ ಜಾಗೃತಿ ಹಾಗೂ ಬಿಗಿ ಬಂದೋಬಸ್ತ್ ನಡುವೆಯೂ ಅರೆಬೆತ್ತಲೆ ಬೇವಿನ ಉಡುಗೆ ಹರಕೆಗೆ ಯಾವುದೇ ಅಡಚಣೆಯಿಲ್ಲದೆ ನಿರ್ವಿಘ್ನವಾಗಿ ನೆರವೇರಿತು.

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…