ಲಾರಿಗಳ ಪಾರ್ಕಿಂಗ್ ತಾಣವಾದ ಸರ್ವೀಸ್ ರಸ್ತೆ!

ಮೈಸೂರು: ನಗರದ ಸಂಪರ್ಕ ಸೇತುವೆಯಾದ ರಿಂಗ್‌ರೋಡ್‌ನ ಸೇವಾರಸ್ತೆ ಇದೀಗ ಲಾರಿಗಳ ನಿಲುಗಡೆ ತಾಣವಾಗಿದೆ. ಇದು ಸುಗಮ ಸಂಚಾರಕ್ಕೆ ತೊಡರುಗಾಲು ಹಾಕುವ ಮೂಲಕ ಅಪಘಾತಕ್ಕೂ ಆಹ್ವಾನ ನೀಡಿದೆ…!

ಮೇಟಗಳ್ಳಿಯಿಂದ ಕೊಲಂಬಿಯಾ ಏಷಿಯಾ ಆಸ್ಪತ್ರೆ ಜಂಕ್ಷನ್‌ವರೆಗೆ ಸಾಗುವ ವಾಹನ ಸವಾರರಿಗೆ ಇಂತಹದೊಂದು ಅಧ್ವಾನ ಕಣ್ಣಿಗೆ ರಾಚುತ್ತದೆ. ಆದರೆ, ಈ ಸಮಸ್ಯೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತ್ರ ಕಾಣುತ್ತಿಲ್ಲ ಎಂಬುದೇ ಅಚ್ಚರಿ.

ಬಿ.ಎಂ.ಶ್ರೀನಗರ, ಬನ್ನಿಮಂಟಪ ಭಾಗದಲ್ಲಿ ಬಹಳಷ್ಟು ಗೋದಾಮುಗಳಿವೆ. ಹೀಗಾಗಿ, ಲಾರಿಗಳ ಅಬ್ಬರ ಹೆಚ್ಚು. ಇವುಗಳೆಲ್ಲ ಹೊರವರ್ತುಲ ರಸ್ತೆಯ ಬಳಿಯ ಸರ್ವೀಸ್ ರಸ್ತೆಯಲ್ಲೇ ತಳವೂರಿಕೊಂಡು ಗಂಟೆಗಟ್ಟಲೇ ನಿಂತುಕೊಂಡಿರುತ್ತವೆ. ಸರಕು, ಸಾಮಗ್ರಿ ಹೊತ್ತು ಸಾಲುಗಟ್ಟಿರುತ್ತವೆ. ಈ ಪೈಕಿ ರಾಷ್ಟ್ರೀಯ ಪರವಾನಗಿ ಹೊಂದಿರುವ ಅನ್ಯ ರಾಜ್ಯಗಳ ಲಾರಿಗಳ ದಟ್ಟಣೆ ಹೆಚ್ಚು.

ಈ ಲಾರಿಗಳೆಲ್ಲ ಸೇವಾ ರಸ್ತೆಯಲ್ಲಿ ನಿಲುಗಡೆಗೊಂಡಿರುವುದರಿಂದ ಅನ್ಯ ವಾಹನಗಳ ಓಡಾಟಕ್ಕೆ ಇಲ್ಲಿ ಜಾಗವೇ ಸಿಗುವುದಿಲ್ಲ. ಇದರಿಂದ ಪಥ ಬದಲಿಸುವ ಕಾರುಗಳು, ಬೈಕ್‌ಗಳು ರಿಂಗ್‌ರಸ್ತೆಗೆ ನುಗ್ಗುತ್ತವೆ. ಈ ವೇಳೆ, ಚಾಲಕರು ಮಾಡುವ ಎಡವಟ್ಟುಗಳು ಅಥವಾ ಗೊಂದಲದಿಂದ ಅಪಘಾತಗಳು ಸಂಭವಿಸುತ್ತಿವೆ.

ಡೇಂಜರ್ ಸ್ಪಾಟ್:
ಬಿ.ಎಂ.ಶ್ರೀ ನಗರ ವ್ಯಾಪ್ತಿಯಲ್ಲಿರುವ ರೈಲ್ವೆ ಮೇಲ್ಸೇತುವೆ ಅಪಘಾತ ವಲಯವಾಗಿಯೂ ಮಾರ್ಪಟ್ಟಿದೆ. ಆರು ಪಥದ ಹೊರವರ್ತುಲ ರಸ್ತೆ ಈ ಸೇತುವೆ ಬಳಿ ದ್ವಿಪಥವಾಗಿ ಬದಲಾಗುತ್ತದೆ. ಮೇಟಗಳ್ಳಿಯಿಂದ ಕೊಲಂಬಿಯಾ ಏಷಿಯಾ ಆಸ್ಪತ್ರೆ ಕಡೆಗೆ ಸಾಗುವ ವಾಹನಗಳು ಇಲ್ಲಿ ಏಕಾಏಕಿ ಬಲಕ್ಕೆ ತಿರುವು ಪಡೆದುಕೊಳ್ಳಬೇಕಾಗುತ್ತದೆ. ಆಗ ಎರಡೂ ಕಡೆ ವಾಹನಗಳು ಎದುರುಬದುರು ಆಗಿ ಚಿಕ್ಕ ಪಥದಲ್ಲಿ ಸಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಬಹಳ ಅಪಾಯಕಾರಿಯಾಗಿದೆ.

ಶರವೇಗದಲ್ಲಿ ಬರುವ ವಾಹನಗಳ ಸವಾರರಿಗೆ ಈ ತಿರುವಿನ ಕುರಿತು ಅರಿವಿಗೆ ಬರುವುದಿಲ್ಲ. ಆಗ ಅಪಘಾತ ಸಂಭವಿಸುತ್ತಿವೆ. ಇಲ್ಲಿ ವಾಹನಗಳ ವೇಗ ಕುಗ್ಗಿಸಲು ಸ್ಪೀಡ್ ಬ್ರೇಕರ್‌ಗಳನ್ನು ಹಾಕಲಾಗಿದೆ. ಆದರೆ, ಇದರ ಮೇಲೆ ಬಿಳಿಬಣ್ಣದ ಪಟ್ಟಿಯನ್ನು ಬಳಿದಿಲ್ಲ. ಈ ಕಾರಣಕ್ಕೆ ಇದು ಕೂಡ ಕಾಣಲ್ಲ. ಇಲ್ಲಿ ಅಡ್ಡಲಾಗಿ ಬ್ಯಾರಿಕೇಡನ್ನೂ ಹಾಕಿಲ್ಲ. ಬೀದಿ ದೀಪಗಳೂ ಇಲ್ಲ. ಸೂಚನಾ ಫಲಕಗಳನ್ನೂ ಹಾಕಿಲ್ಲ.

ಹೀಗಾಗಿ, ಈ ತಿರುವು ಚಾಲಕರಿಗೆ ಗೊತ್ತಾಗುತ್ತಿಲ್ಲ. ಆಗ ಶರವೇಗದಲ್ಲಿ ಬರುವ ವಾಹನಗಳು ನಿಯಂತ್ರಣ ತಪ್ಪಿ ವಿಭಜಕಕ್ಕೆ ಅಥವಾ ಎದುರು ಬರುವ ವಾಹನಕ್ಕೆ ಡಿಕ್ಕಿ ಹೊಡೆಯುತ್ತಿವೆ. ಇದರಿಂದ ಅನೇಕ ಸಾವು-ನೋವು ಸಂಭವಿಸುತ್ತಿವೆ. ಆದರೂ, ಇದನ್ನು ತಪ್ಪಿಸಲು ಅಗತ್ಯ ಕ್ರಮ ತೆಗೆದುಕೊಂಡಿಲ್ಲ ಎಂಬುದು ದುರಂತವೇ ಸರಿ. ಈ ನಿರ್ಲಕ್ಷೃದಿಂದಲೇ ಇದು ಡೇಂಜರ್ ಸ್ಪಾಟ್ ಆಗಿದೆ. ಇಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಿಸಿ, ರಸ್ತೆಯನ್ನು ನೇರ ಮಾಡಬೇಕಿದೆ. ಈ ಮೂಲಕ ಮೇಟಗಳ್ಳಿಯಿಂದ ಸಾಗುವ ವಾಹನಗಳು ನೇರವಾಗಿ ಹೋಗುವಂತೆ ಅವಕಾಶ ಮಾಡಿಕೊಟ್ಟರೆ ಮಾತ್ರ ಇಲ್ಲಿ ಅಪಘಾತವನ್ನು ತಪ್ಪಿಸಬಹುದಾಗಿದೆ.

ಸ್ವಾಗತಕೋರುವ ಕಟ್ಟಡ ಅವಶೇಷ:
ಅಲ್ಲದೆ, ರಿಂಗ್‌ರೋಡ್‌ನ ಎರಡು ಬದಿ ಡೆಬ್ರಿಸ್ ಯಾರ್ಡ್ ಆಗಿದೆ. ಕಟ್ಟಡ ಅವಶೇಷಗಳನ್ನು ರಾತ್ರಿ ವೇಳೆ ತಂದು ಈ ರಸ್ತೆಯ ಎಡ-ಬಲಗಳಲ್ಲಿ ಸುರಿಯಲಾಗುತ್ತಿದ್ದು, ಕಸದ ರಾಶಿಗಳು ಸೃಷ್ಟಿಯಾಗುತ್ತಿವೆ. ಮಳೆ ನೀರು ಸರಾಗವಾಗಿ ಹರಿದುಹೋಗಲು ಇದು ಅಡ್ಡಿಯಾಗಿದ್ದು, ಮಳೆ ನೀರೆಲ್ಲವೂ ಚರಂಡಿಯಲ್ಲಿ ಹರಿಯುವ ಬದಲಾಗಿ ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ರಸ್ತೆ ಹಾಳಾಗುವುದರೊಂದಿಗೆ ವಾಹನ ಸಂಚಾರಕ್ಕೂ ತೊಡಕಾಗಿದೆ.

‘ಡೆಬ್ರಿಸ್ ಹಾಕುವ ವಾಹನ ಮಾಲೀಕರು, ಸಂಬಂಧಪಟ್ಟ ವಿರುದ್ಧ ಕ್ರಿಮಿನಲ್ ದಾವೆ ಹೂಡಲಾಗುವುದು’ ಎಂಬ ಪಾಲಿಕೆಯ ಎಚ್ಚರಿಕೆ ಬರೀ ಕಡತದಲ್ಲೇ ಉಳಿದಿದ್ದು, ಅದು ಜಾರಿಗೆ ಬರುತ್ತಿಲ್ಲ. ಇದರಿಂದ ಇದಕ್ಕೆ ಕಡಿವಾಣ ಬೀಳುತ್ತಿಲ್ಲ. ಈ ಕಸದ ರಾಶಿ ಪ್ರವಾಸಿಗರನ್ನು ಸ್ವಾಗತ ಕೋರುವ ಮೂಲಕ ಸ್ವಚ್ಛನಗರಿ ಮೈಸೂರಿಗೆ ಕಪ್ಪುಚುಕ್ಕಿಯಾಗಿದೆ.

ಮದ್ಯದಂಗಡಿ ತೆರವು ಮಾಡಿಸಿ:
ರಿಂಗ್‌ರಸ್ತೆ ಸುತ್ತ ನಾಯಿ ಕೊಡೆಗಳಂತೆ ಬಾರ್‌ಗಳು ತಲೆ ಎತ್ತಿವೆ. ರಾತ್ರಿ ಹೊತ್ತಿನಲ್ಲಿ ಮದ್ಯಪಾನ ಮಾಡಿ ರಸ್ತೆ ದಾಟುವವರು ರಸ್ತೆ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಬಾರ್‌ಗಳಲ್ಲಿ ಕುಡಿದು ವಾಹನ ಓಡಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಆದ್ದರಿಂದ ರಿಂಗ್‌ರಸ್ತೆ ಸುತ್ತಲಿನ ಮದ್ಯದಂಗಡಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು. ಮುಂದಿನ ದಿನಗಳಲ್ಲಿ ಇಲ್ಲಿ ಲಿಕ್ಕರ್ ಶಾಪ್ ತೆರೆಯಲು ಅವಕಾಶ ನೀಡಬಾರದು. ಆಗ ಮಾತ್ರ ರಿಂಗ್‌ರಸ್ತೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಸಾಧ್ಯವಾಗಲಿದೆ ಎಂಬುದು ಇಲ್ಲಿಯ ಬಹುತೇಕ ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸಮಸ್ಯೆಗಳ ಆಗರ ಈ ರಸ್ತೆ:
ಸುಗಮ ವಾಹನ ಸಂಚಾರ ಮತ್ತು ಸಂಪರ್ಕ ಕಲ್ಪಿಸುವ ಸಲುವಾಗಿ 41 ಕಿ.ಮೀ. ಉದ್ದದ ರಿಂಗ್‌ರಸ್ತೆಯನ್ನು ಸುಮಾರು 332.68 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಿರ್ವಹಣೆಗೆ ಸಂಪನ್ಮೂಲ ಕೊರತೆ ಕಾರಣಕ್ಕೆ ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 2017 ಜೂನ್‌ನಲ್ಲಿ ಹಸ್ತಾಂತರ ಮಾಡಲಾಗಿದೆ.

ತನ್ನ ಹೊರೆಯನ್ನು ಇಳಿಸಿಕೊಂಡ ಮುಡಾ ಈಗ ಇದನ್ನು ನಿರ್ಲಕ್ಷಿಸಿದ್ದರೆ, ಹೆದ್ದಾರಿ ಪ್ರಾಧಿಕಾರವು ಇದನ್ನು ಅಭಿವೃದ್ಧಿ ಮಾಡುವುದು ಇರಲಿ, ನಿರ್ವಹಣೆಯನ್ನೂ ಸರಿಯಾಗಿ ಮಾಡುತ್ತಿಲ್ಲ. ಇದು ವಿವಿಧ ಸಮಸ್ಯೆಗಳು ಚಿಗುರೊಡೆಯಲು ಕಾರಣವಾಗಿದ್ದು, ಸವಾರರು, ಪ್ರಯಾಣಿಕರು, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದೆ.

ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಲೋಡ್ ಲಾರಿಗಳು ನಿಲುಗಡೆಗೆ ಅವಕಾಶವಿಲ್ಲ. ಈ ಕುರಿತು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಮುತ್ತುರಾಜ, ಡಿಸಿಪಿ

Leave a Reply

Your email address will not be published. Required fields are marked *