ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ ವೆಬ್ಸೈಟ್ ತಿರುಚಿದ ಪ್ರಕರಣದ ಬೆನ್ನಲ್ಲೆ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ.
ಕಾವೇರಿ ತಂತ್ರಾಂಶದ ಮುಖಾಂತರ ನೋಂದಣಿ ಪ್ರಕ್ರಿಯೆ ನಿರ್ವಹಿಸುವ ದೆಹಲಿ ಮೂಲದ ಎಚ್ಸಿಎಲ್ ಇನ್ಪೋಸಿಸ್ಟಮ್ ಸಂಸ್ಥೆಯ ಗುತ್ತಿಗೆ ಸೇವಾ ಅವಧಿ ಫೆ.16ಕ್ಕೆ ಮುಗಿದಿದೆ.
ಮತ್ತೆ ಹೊಸ ಟೆಂಡರ್: ಕರೆದು ಕಡಿಮೆ ಬಿಡ್ ಕರೆದವರಿಗೆ ಗುತ್ತಿಗೆ ನೀಡಬೇಕಿತ್ತು. ಇದರ ಬದಲು ಸರ್ಕಾರ ಮಾ.31ವರೆಗೆ ಮುಂದುವರಿಸಿ ಹೊಸ ಟೆಂಡರ್ ಕರೆಯುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸೂಚನೆ ನೀಡಿತ್ತು. ಆಗಲೂ ಸಹ ಟೆಂಡರ್ ಕರೆಯದೆ ಮತ್ತೆ ಏ.1 ರಿಂದ 2020ರ ಫೆ. 29ವರೆಗೆ ಎಚ್ಸಿಎಲ್ ಇನ್ಪೋಸಿಸ್ಟಮ್ ಸಂಸ್ಥೆ ನೌಕರರ ಸೇವೆ ಮುಂದುವರಿಸಿದೆ. ಇಲ್ಲಿಯವರೆಗೂ ಟೆಂಡರ್ ಕರೆದಿಲ್ಲ. ಪ್ರಸ್ತುತ ರಾಜ್ಯದಲ್ಲಿ 970 ಡೇಟಾ ಎಂಟ್ರಿ ಆಪರೇಟರ್ಗಳು, 12 ಆಡಳಿತಾತ್ಮಕ ಸಹಾಯಕ ಅಧಿಕಾರಿಗಳು, 71 ಹಾರ್ಡ್ವೇರ್ ನಿರ್ವಹಿಸುವ ಇಂಜಿನಿಯರ್ಗಳು ಇದ್ದಾರೆ. ಇದೀಗ ಕಾವೇರಿ ವೆಬ್ಸೈಟ್ ತಿರುಚಿದ ಪ್ರಕರಣದಲ್ಲಿಎಚ್ಸಿಎಲ್ ಕಂಪನಿ ನೌಕರರ ಪಾತ್ರ ಇರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆಲವರು ನಿರೀಕ್ಷಣಾ ಜಾಮೀನು ಪಡೆದು ಸಿಸಿಬಿ ವಿಚಾರಣೆ ಎದುರಿಸಿದ್ದರೆ ಇನ್ನು ಕೆಲವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.
ನಮಗೆ ಕಂಪ್ಯೂಟರ್ ಜ್ಞಾನ ಇಲ್ಲ. ಅಗತ್ಯ ಇದ್ದಾಗ ಕಂಪ್ಯೂಟರ್ ಆಪರೇಟರ್ ಮತ್ತು ಇಂಜಿನಿಯರ್ಗಳ ಸಹಾಯ ಪಡೆಯುತ್ತೇವೆ ಎಂದು ಸಿಸಿಬಿ ವಿಚಾರಣೆ ವೇಳೆ ಸಬ್ ರಿಜಿಸ್ಟ್ರಾರ್ಗಳು ತಿಳಿಸಿದ್ದಾರೆ. ತಾಂತ್ರಿಕ ಸಮಸ್ಯೆ ಎದುರಾದಾಗ ಗೌಪ್ಯ ಮಾಹಿತಿ ಕೊಡುವ ಅಗತ್ಯ ಇರುತ್ತದೆ. ಪಾಸ್ವರ್ಡ್ ಬದಲಾಯಿಸಿ ಇಂಜಿನಿಯರ್ಗಳು ನೀಡುತ್ತಿದ್ದರು ಎಂದು ವಿವರಿಸಿದ್ದಾರೆ.
ಬೆರಳಚ್ಚು ಎಲ್ಲದಕ್ಕೂ ಇಲ್ಲ: ನ್ಯಾಯಾಲಯದ ಆದೇಶವನ್ನು ಭೂ ದಾಖಲೆಗಳಿಗೆ ಸೇರಿಸಬೇಕಾದ ವೇಳೆ ಸಬ್ ರಿಜಿಸ್ಟ್ರಾರ್ಗಳ ಬೆರಳಚ್ಚು ಕೊಟ್ಟು ಲಾಗಿನ್ ಆಗಬೇಕು. ಉಳಿದಂತೆ ಯಾವುದಕ್ಕೂ ಬೆರಳಚ್ಚು ನೀಡುವ ಅಗತ್ಯ ಇರುವುದಿಲ್ಲ. ಹಾಗಾಗಿ ಗೌಪ್ಯ ಪಾಸ್ವರ್ಡ್ಗಳು ಎಲ್ಲರಿಗೂ ಸಿಗುವಂತ ಸೌಲಭ್ಯವಿದೆ.